ಸಿಎಂ ಜಪಾನ್​​ ಪ್ರವಾಸ: ವಿದೇಶಾಂಗ ರಾಜ್ಯ ಸಚಿವರ ಜೊತೆ ಡಿಕೆ ಶಿವಕುಮಾರ್​​ ಮಹತ್ವದ ಮಾತುಕತೆ

ಜಪಾನ್ ಪ್ರವಾಸದಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್, 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಜಪಾನ್ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ಜೊತೆಗೆ ಟೋಕಿಯೊದ ನಗರಾಭಿವೃದ್ಧಿ ಮಾದರಿ ಅಧ್ಯಯನ ನಡೆಸುವ ಜೊತೆಗೆ, ಪ್ಯಾನಾಸೋನಿಕ್ ಸಂಸ್ಥೆಯೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಅಲ್ಲದೆ ಅನಿವಾಸಿ ಕನ್ನಡಿಗರ ಜೊತೆ ಆತ್ಮೀಯ ಮಾತುಕತೆ ನಡೆಸಿದ್ದಾರೆ.

ಸಿಎಂ ಜಪಾನ್​​ ಪ್ರವಾಸ: ವಿದೇಶಾಂಗ ರಾಜ್ಯ ಸಚಿವರ ಜೊತೆ ಡಿಕೆ ಶಿವಕುಮಾರ್​​ ಮಹತ್ವದ ಮಾತುಕತೆ
ಟೋಕಿಯೊ ಮಿಡ್ಟೌನ್ ರೊಪ್ಪೊಂಗಿಗೆ ಸಿಎಂ ಡಿ ಕೆ ಶಿವಕುಮಾರ್‌ ನೇತೃತ್ವದ ನಿಯೋಗ ಭೇಟಿ
Edited By:

Updated on: Nov 25, 2026 | 5:12 PM

ಬೆಂಗಳೂರು, ನವೆಂಬರ್​​ 25: ಜಪಾನ್ ಹೂಡಿಕೆದಾರರಿಗೆ ಕರ್ನಾಟಕಕ್ಕೆ ಬರುವಂತೆ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್​​ ಆಹ್ವಾನ ನೀಡಿದ್ದಾರೆ. 2027ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗಿಯಾಗುವಂತೆಯೂ ಜಪಾನ್ ನಿಯೋಗಕ್ಕೆ ಅವರು ಆಗ್ರಹಿಸಿದ್ದಾರೆ. ಟೋಕಿಯೊದಲ್ಲಿ ಜಪಾನ್ ವಿದೇಶಾಂಗ ರಾಜ್ಯ ಸಚಿವ ಯಸುತಾಕಾ ನಕಾಸೋನೆ ಅವರನ್ನು ಭೇಟಿ ಮಾಡಿರುವ ಡಿಕೆಶಿ ಕರ್ನಾಟಕ-ಜಪಾನ್ ಬಾಂಧವ್ಯ ಬಲವರ್ಧನೆ ಸಂಬಂಧ ಚರ್ಚಿಸಿದ್ದಾರೆ. ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ ಸಂಬಂಧ ಮಾತುಕತೆಯೂ ಈ ವೇಳೆ ನಡೆದಿದೆ. ಬೆಂಗಳೂರು ಮೆಟ್ರೋ, ಜಲಮಂಡಳಿ ಯೋಜನೆಗಳಿಗೆ ಜಪಾನ್ ಸಹಕಾರಕ್ಕೆ ಇದೇ ವೇಳೆ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತ-ಜಪಾನ್ ನಡುವಿನ ಬಲಿಷ್ಠ ಬಾಂಧವ್ಯಕ್ಕೆ ಯಸುತಾಕಾ ನಕಾಸೋನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಪಾನ್ ಹೂಡಿಕೆಗಳಿಗೆ ಕರ್ನಾಟಕ ಪ್ರಮುಖ ತಾಣ ಎಂದು ನಕಾಸೋನ್ ಶ್ಲಾಘಿಸಿದ್ದಾರೆ.

ಮಿಡ್ಟೌನ್ ರೊಪ್ಪೊಂಗಿ ಅಭಿವೃದ್ಧಿ ಮಾದರಿ ಅಧ್ಯಯನ

ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ನಿಯೋಗ ಟೋಕಿಯೊ ಮಿಡ್ಟೌನ್ ರೊಪ್ಪೊಂಗಿ ಅಭಿವೃದ್ಧಿ ಮಾದರಿ ಅಧ್ಯಯನವನ್ನೂ ಮಾಡಿದ್ದು, ಜಪಾನ್‌ನ ಪ್ರಮುಖ ನಗರ ಯೋಜನಾ ಸಂಸ್ಥೆ ನಿಕ್ಕೆನ್ ಸೆಕ್ಕಿ ಜೊತೆ ಸಮಾಲೋಚನೆ ನಡೆಸಿದೆ. ಸುಮಾರು 25 ಎಕರೆ ವಿಸ್ತೀರ್ಣದ ಈ ಯೋಜನೆಯು ಹಿಂದಿನ ರಕ್ಷಣಾ ಇಲಾಖೆಯ ಭೂಮಿಯನ್ನು ಸುಮಾರು ಶೇ. 50 ರಷ್ಟು ಭಾಗವನ್ನು ತೆರೆದ ಮತ್ತು ಹಸಿರು ಪ್ರದೇಶವಾಗಿ ಉಳಿಸಿಕೊಂಡು, ಕಚೇರಿಗಳು, ವಸತಿ ಸಮುಚ್ಚಯಗಳು, ಚಿಲ್ಲರೆ ವ್ಯಾಪಾರ, ಆತಿಥ್ಯ ಮತ್ತು ಸಾಂಸ್ಕೃತಿಕ ಸೌಲಭ್ಯಗಳನ್ನು ಸಂಯೋಜಿಸುವ ಮೂಲಕ ಹೇಗೆ ಒಂದು ಚೈತನ್ಯಶೀಲ ನಗರ ಪ್ರದೇಶವಾಗಿ ಪರಿವರ್ತಿಸಿತು ಎಂಬುದನ್ನು ತಂಡವು ಅಧ್ಯಯನ ಮಾಡಿದೆ. ಬೆಂಗಳೂರಿನ ಕಾರ್ಯತಂತ್ರದ ಪುನರಾಭಿವೃದ್ಧಿಗೆ ಜಪಾನ್ ಮಾದರಿ ಅಳವಡಿಕೆ ಕುರಿತು ಚರ್ಚೆ ನಡೆಸಲಾಗಿದ್ದು, ರಾಜ್ಯದ ಭವಿಷ್ಯದ ನಗರಾಭಿವೃದ್ಧಿ ಯೋಜನೆಗಳಿಗೆ ಜಪಾನ್ ಅನುಭವ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

Loading...

ಇದನ್ನೂ ಓದಿ: ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಚರ್ಚಿಸಿದ್ದೇನು? ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ

ಪ್ಯಾನಾಸೋನಿಕ್ ಸಂಸ್ಥೆ ಕಾರ್ಯಕ್ಷೇತ್ರ ವಿಸ್ತರಿಸಿದರೆ ನೆರವಿನ ಭರವಸೆ

ಜಪಾನ್‌ನಲ್ಲಿ ಪ್ಯಾನಾಸೋನಿಕ್ ಆಟೋಮೋಟಿವ್ ಸಂಸ್ಥೆಯ ಉನ್ನತ ಮಟ್ಟದ ನಿಯೋಗವನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು, ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಒ ಮೈಕ್ ನಾಗಯಾಸು ನೇತೃತ್ವದ ನಿಯೋಗದ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಉತ್ಪಾದನಾ ಕ್ಷೇತ್ರ ಹಾಗೂ ಜಿಸಿಸಿ ವಿಸ್ತರಣೆಗೆ ಇರುವ ಅವಕಾಶಗಳ ಬಗ್ಗೆ ಚರ್ಚಿಸಲಾಗಿದ್ದು, ರಾಜ್ಯದಲ್ಲಿ ಪ್ಯಾನಾಸೋನಿಕ್ ಸಂಸ್ಥೆ ಕಾರ್ಯಕ್ಷೇತ್ರ ವಿಸ್ತರಿಸಿದರೆ ಎಲ್ಲಾ ರೀತಿಯ ನೆರವು ನೀಡುವ ಭರವಸೆಯನ್ನು ಈ ವೇಳೆ ನೀಡಲಾಗಿದೆ. 2027ರ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪ್ಯಾನಾಸೋನಿಕ್ ಸಂಸ್ಥೆಗೂ ಈ ವೇಳೆ ಆಹ್ವಾನ ನೀಡಲಾಗಿದೆ. ಈ ವೇಳೆ ಸಿಎಂ ಜೊತೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಉಪಸ್ಥಿತರಿದ್ದರು.

ಜಪಾನ್​​ ಕನ್ನಡಿಗರ ಜೊತೆ ಸಿಎಂ ಕುಶಲೋಪರಿ

ಇನ್ನು ಜಪಾನ್‌ನಲ್ಲಿ ಕನ್ನಡಿಗರನ್ನೂ ಸಿಎಂ ಭೇಟಿಯಾಗಿದ್ದಾರೆ. ಜಪಾನ್ ಕನ್ನಡ ಸಂಘ, ಟೋಕಿಯೋ ಕನ್ನಡ ಬಳಗದ ಸದಸ್ಯರ ಜೊತೆ ಡಿಕೆಶಿ ಮಾತುಕತೆ ನಡೆಸಿದ್ದು, ಯೋಗಕ್ಷೇಮ ವಿಚಾರಿಸಿದ್ದಾರೆ. ಜಪಾನ್‌ನಲ್ಲಿನ ಕನ್ನಡಿಗರ ಜೀವನ ಮತ್ತು ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆಸಿದ್ದು, ತಾಯ್ನಾಡಿನೊಂದಿಗಿನ ಒಡನಾಟದ ಕುರಿತು ಆತ್ಮೀಯ ಮಾತುಕತೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಅನಿಲ್​ ಕಲ್ಕೆರೆ

ಅನಿಲ್ ಕಲ್ಕೆರೆ ಮೂಲತಃ ಬೆಂಗಳೂರಿನವರಾಗಿದ್ದು, ಕಳೆದ 11 ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಸೆಂಟ್ರಲ್ ಕಾಲೇಜು) ದಲ್ಲಿ Msc (ಮಾಸ್ ಕಮ್ಯುನಿಕೇಷನ್) ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸೃಜನಶೀಲ ಬರವಣಿಗೆ ಜೊತೆಗೆ ವಿಧಾನಸೌಧದ ಆಡಳಿತಾತ್ಮಕ ಸುದ್ದಿಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಹಾಗೂ ರಾಜಕೀಯದ ಪ್ರಸಕ್ತ ವಿದ್ಯಮಾನಗಳನ್ನ ಒಳಗೊಂಡಂತಹ ಸುದ್ದಿಗಳತ್ತ ಗಮನ ಹರಿಸುತ್ತಿದ್ದಾರೆ. ಜೊತೆಗೆ ಪ್ರಜಾಪ್ರಭುತ್ವ ನಾಲ್ಕನೇ ಆಧಾರ ಸ್ತಂಭವಾಗಿ ಸಾಮಾನ್ಯಜನರ ಪರ ಧ್ವನಿಯಾಗಿ ಸರ್ಕಾರಕ್ಕೆ ಸಮಸ್ಯೆ ಮುಟ್ಟಿಸುವ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದಾರೆ.

Read More
Loading...
Unable to load recommendations.
Follow Us