ಸಿಎಂ ಜತೆಗಿನ ಸಭೆಯಲ್ಲಿ ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ: ಹೋರಾಟ ಮುಂದುವರಿಸಲು ನಿರ್ಧಾರ
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು (ಅಕ್ಟೋಬರ್ 26 ಇಡೀ ದಿನ ಸಭೆ ಮೇಲೆ ಸಭೆ ಮಾಡಿದ್ದಾರೆ. ಸುವರ್ಣ ಸೌಧದಲ್ಲಿ ಸಿಎಂ ಮೊದಲ ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಸಭೆ ಮಾಡಿ ಬಳಿಕ ರೈತ ಮುಖಂಡರ ಜೊತೆ ಸಭೆ ಮಾಡಿ ಅವರ ಬೇಡಿಕೆಗಳನ್ನು ಆಲಿಸಿದರು. ಆದ್ರೆ, ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಹೀಗಾಗಿ ರೈತರು ಅಸಮಧಾನಗೊಂಡಿದ್ದು, ಪ್ರತಿಭಟನೆ ಮುಂದುವರಿಕೆಗೆ ಕರೆ ನೀಡಿದ್ದಾರೆ.

ಬೆಳಗಾವಿ, (ಅಕ್ಟೋಬರ್ 26: ಸಿಎಂ ಡಿಕೆ ಶಿವಕುಮಾರ್ ಹಾಗೂ ಕಬ್ಬು ಬೆಳಗಾರರ ಸಭೆ ಅಂತ್ಯವಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿಂದು ನಡೆದ ಸುಮಾರು 2 ಗಂಟೆಗಳ ಸಭೆಯಲ್ಲಿ ರೈತ ಮುಖಂಡರು ಹಾಗೂ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾತುಕತೆ ನಡೆಸಿದರು. ರೈತರು ಕೂಡಲೇ ಪ್ರೋತ್ಸಾಹದ ಘೋಷಿಸಬೇಕೆಂದು ಪಟ್ಟು ಹಿಡಿದ್ದರೆ, ಇತ್ತ ಸಿಎಂ ಡಿಕೆ ಶಿವಕುಮಾರ್ ಹೇಳಿದಾಕ್ಷಣ ಘೋಷಿಸಲು ಆಗಲ್ಲ. ಇದಕ್ಕೆ ಸಮಯಾವಕಾಶ ಕೊಡಿ ಎಂದು ರೈತರಲ್ಲಿ ಮನವಿ ಮಾಡಿದರು. ಹೀಗಾಗಿ ಯಾವುದೇ ಅಂತಿಮ ತೀರ್ಮಾನವಾಗದೇ ಸಭೆ ಅಂತ್ಯಗೊಂಡಿದೆ. ಇದರಿಂದ ಆಕ್ರೋಶಗೊಂಡಿರುವ ರೈತ ಮುಖಂಡರು ಪ್ರತಿಭಟನೆ ಮುಂದುವರಿಕೆಗೆ ಕರೆ ನೀಡಿದ್ದಾರೆ. ಅಲ್ಲದೇ ನಾಳೆ ಆಗಲಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿ. ಕಬ್ಬಿನ ದರ ನಿಗದಿ ಆಗುವವರೆಗೂ ಕಾರ್ಖಾನೆಗಳನ್ನು ನಡೆಸಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಹೋರಾಟ ಮುಂದುವರಿಯುತ್ತೆ ಎಂದ ಚೂನಪ್ಪ ಪೂಜಾರಿ
ಸಿಎಂ ಜೊತೆ ಸಭೆ ಬಳಿಕ ಮಾತನಾಡಿರುವ ಚೂನಪ್ಪ ಪೂಜಾರಿ, ಸಿಎಂ ಜೊತೆಗಿನ ಸಭೆ ಕೇವಲ ಚರ್ಚೆಗೆ ಸೀಮಿತ, ನಮಗೆ ತೃಪ್ತಿ ತಂದಿಲ್ಲ. ರಾಜ್ಯ ಸರ್ಕಾರ 1 ಸಾವಿರ ಕೊಡಲೇಬೇಕು, ಇಲ್ಲದಿದ್ದರೆ ಹೋರಾಟ ಮುಂದುವರಿಯುತ್ತೆ.ಕರ್ನಾಟಕ ಬಂದ್ ಬಗ್ಗೆ ಮಾತುಕತೆ ನಡೆಸಿ ನಿರ್ಧಾರ ಮಾಡುತ್ತೇವೆ. ಸರ್ಕಾರದ ನಿರ್ಧಾರ ಬಳಿಕ ಕರ್ನಾಟಕ ಬಂದ್ ಬಗ್ಗೆ ತೀರ್ಮಾನಿಸ್ತೇವೆ. ರಾಷ್ಟ್ರೀಯ ಹೆದ್ದಾರಿ ಸೇರಿ ಎಲ್ಲಾ ರೀತಿಯ ಬಂದ್ ಮಾಡುತ್ತೇವೆ. ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ ನಡೆಸಿ ನಿರ್ಧರಿಸಲಿ. ಬರೀ ಚರ್ಚೆ ಮಾತ್ರ ಆಗಿದೆ, ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇಂದು ರಾತ್ರಿ ಆಗಲಿ, ನಾಳೆ ಆಗಲಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿ. ಕಬ್ಬಿನ ದರ ನಿಗದಿ ಆಗುವವರೆಗೂ ಕಾರ್ಖಾನೆಗಳನ್ನು ನಡೆಸಲು ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ: ಪರಸ್ಪರ ಕೈ ಕೈ ಮಿಲಾಯಿಸಿದ ಕೋಡಿಹಳ್ಳಿ ಚಂದ್ರಶೇಖರ್-ಚೂನಪ್ಪ ಪೂಜಾರಿ ಬಣದ ರೈತರು
ಸಭೆ ಬಳಿಕ ಸಿಎಂ ಹೇಳಿದ್ದಿಷ್ಟು
ರೈತರು, ಕಾರ್ಖಾನೆ ಮಾಲೀಕರ ಜೊತೆಗೆ ಚರ್ಚೆ ಮಾಡಿದ್ದೇನೆ. ಇನ್ನೂ ನಮ್ಮ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಬೇಕು.ಕೇಂದ್ರ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಕ್ಕರೆ ದರ ನಿಗದಿ ಆಗದೇ ಏನೂ ಮಾಡಲು ಆಗಲ್ಲ. ರೈತರ ಕಾರ್ಖಾನೆಗಳು ಕಬ್ಬು ನುರಿಸಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ರೈತರಿಗೆ ತೊಂದರೆ ಆಗುತ್ತೇ. ಅ. 29ಕ್ಕೆ ಕೇಂದ್ರ ಸರ್ಕಾರದ ಸಮಿತಿ ಬರಲಿದೆ. ಅವರೊಂದಿಗೆ ಚರ್ಚೆ ಮಾಡುತ್ತೇನೆ. ಒಂದೇ ದಿನದಲ್ಲಿ, ಒಂದೇ ನಿಮಿಷದಲ್ಲಿ ಪರಿಹಾರ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ರೈತರಿಗೆ ಒಳ್ಳೆಯದು ಆಗಬೇಕು, ಅವರಿಗೆ ಶಾಶ್ವತ ಪರಿಹಾರ ಸಿಗಬೇಕು. ಇದು ನಮ್ಮ ಸರ್ಕಾರದ ಅಚಲವಾದ ನಿರ್ಧಾರ. ಪ್ರಧಾನಮಂತ್ರಿ ಗೆ ಪತ್ರ ಬರೆದಿರುವೆ. ಮತ್ತೊಮ್ಮೆ ಕೇಂದ್ರ ಸಚಿವರನ್ನ ಮಾತನಾಡುತ್ತೇನೆ. ಮಹಾರಾಷ್ಟ್ರ ಸೇರಿ ಎಲ್ಲಾ ರಾಜ್ಯದವರ ಜೊತೆಗೆ ಮಾತಾಡ್ತಿನಿ. ನಾವೆಲ್ಲರೂ ಒಟ್ಟಾಗಿ ಈ ಸಮಸ್ಯೆ ಪರಿಹಾರ ಮಾಡಬೇಕಿದೆ. ನಾನು ರೈತರಲ್ಲಿ ಮನವಿ ಮಾಡ್ತಿದ್ದೀನಿ. ಸಕ್ಕರೆ ನುರಿಸಲು ಅವಕಾಶ ಮಾಡಿಕೊಡಿ. ಈಗಾಗಲೇ ಮಹಾರಾಷ್ಟ್ರದಲ್ಲಿ ಸಕ್ಕರೆ ಹಂಗಾಮು ಆರಂಭವಾಗಿದೆ. ಇದರಿಂದ ನಮ್ಮ ಸಕ್ಕರೆ ಮಹಾರಾಷ್ಟ್ರಕ್ಕೆ ಹೋಗುತ್ತೆ. ಇದರಿಂದ ಸರ್ಕಾರಕ್ಕೂ ನಷ್ಟ ಆಗಲಿದೆ ಎಂದು ಎಂದು ರೈತರಲ್ಲಿ ಮನವಿ ಮಾಡಿದರು.
ಒಟ್ಟಿನಲ್ಲಿ ಕಬ್ಬಿಗೆ ನಿಗದಿ ದರ ನಿಗದಿ ಬಗ್ಗೆ ನಡೆದ ಇಂದಿನ ಸಭೆಯಲ್ಲಿ ಮಾತುಕತೆ ನಡೆದಿದೆ ಹೊರತು ಯಾವುದೇ ನಿರ್ಧಾರವಾಗಿಲ್ಲ. ಹೀಗಾಗಿ ಕಬ್ಬು ಬೆಳೆಗಾರರು ಹೋರಾಟ ಮುಂದುವರಿಸುವ ತೀರ್ಮಾನ ಕಯಗೊಂಡಿದ್ದು, ಇದು ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.




