ಗೊಂದಲ ತಿಳಿಗೊಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲೇ ಹಲವು ಅನುಮಾನಗಳ ಉಳಿಸಿಹೋದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್!

ಕರ್ನಾಟಕ ಕಾಂಗ್ರೆಸ್​​ನಲ್ಲಿ ತೀವ್ರಗೊಂಡಿದ್ದ ಅಧಿಕಾರ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಸೂಚನೆ ಮೇರೆಗೆ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಗೊಂದಲಗಳಿಗೆ ತೆರೆ ಎಳೆಯಲು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆದರೆ, ಈ ಪತ್ರಿಕಾಗೋಷ್ಠಿಯಲ್ಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಲವು ಅನುಮಾನಗಳನ್ನು ಹಾಗೆಯೇ ಉಳಿಸಿಹೋಗಿದ್ದಾರೆ!

ಗೊಂದಲ ತಿಳಿಗೊಳಿಸಲು ಕರೆದ ಪತ್ರಿಕಾಗೋಷ್ಠಿಯಲ್ಲೇ ಹಲವು ಅನುಮಾನಗಳ ಉಳಿಸಿಹೋದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್!
ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಜಂಟಿ ಪತ್ರಿಕಾಗೋಷ್ಠಿ

Updated on: Nov 29, 2025 | 12:35 PM

ಬೆಂಗಳೂರು, ನವೆಂಬರ್ 29: ಕರ್ನಾಟಕ ಕಾಂಗ್ರೆಸ್​ನಲ್ಲಿ (Congress) ಉಂಟಾಗಿದ್ದ ಅಧಿಕಾರ ಹಂಚಿಕೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)  ಶನಿವಾರ ಬ್ರೇಕ್​ಫಾಸ್ಟ್ ಮೀಟಿಂಗ್ ನಡೆಸಿದರು. ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಸಭೆ ನಡೆಯಿತು. ಆ ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಉಭಯ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಆದರೆ, ಗೊಂದಲ ತಿಳಿಗೊಳಿಸುವುದಕ್ಕೆಂದೇ ಕರೆದ ಈ ಪತ್ರಿಕಾಗೋಷ್ಠಿಯಲ್ಲಿ, ಮಾಧ್ಯಮ ಪ್ರತಿನಿಧಿಗಳ ಕೆಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡದೆ ಅನುಮಾನಗಳನ್ನು ಹಾಗೆಯೇ ಉಳಿಸಿಹೋಗಿದ್ದಾರೆ.

ಮಾಧ್ಯಮ, ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸಿದ ಸಿಎಂ

ಅಧಿಕಾರ ಹಂಚಿಕೆ ಕುರಿತ ಗೊಂದಲ ಸೃಷ್ಟಿಯಾಗಲು ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ಅಲ್ಲದೆ, ತಮ್ಮ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಈ ಹಿಂದೆಯೂ ಯಾವುದೇ ಗೊಂದಲ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ ಎಂದರು. ಆದರೆ, ಅದಕ್ಕೂ ಮುನ್ನ ಅವರೇ, ಗೊಂದಲ ತಿಳಿಗೊಳಿಸುವುದಕ್ಕಾಗಿ ಹೈಕಮಾಂಡ್ ಸೂಚನೆ ಮೇರೆಗೆ ಬ್ರೇಕ್​ಫಾಸ್ಟ್ ಮೀಟಿಂಗ್ ಮಾಡಿದೆವು. ಹೈಕಮಾಂಡ್ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇವೆ ಎಂದರು ಎಂಬುದು ಗಮನಾರ್ಹ!

ಕೊಟ್ಟ ಮಾತು, ಎಕ್ಸ್ ಸಮರದ ಬಗ್ಗೆ ಹೇಳಿದ್ದೇನು?

ಆಧಿಕಾರ ಹಂಚಿಕೆ ಚರ್ಚೆಗಳ ನಡುವೆ, ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ ಎಂದು ಡಿಕೆ ಶಿವಕುಮಾರ್ ಎಕ್ಸ್​​ನಲ್ಲಿ ಸಂದೇಶ ಪೋಸ್ಟ್ ಮಾಡಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದರ ನಂತರ ಸಿದ್ದರಾಮಯ್ಯ ಕೂಡ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿ, ಕರ್ನಾಟಕದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ಜನತೆಗೆ ನಾವು ಕೊಟ್ಟ ಮಾತೇ ನಮಗೆ ಜಗತ್ತು ಎಂದು ಉಲ್ಲೇಖಿಸಿದ್ದರು. ಈ ವಿಚಾರವಾಗಿ ಪ್ರಶ್ನೆ ಕೇಳಲು ಮಾಧ್ಯಮ ಪ್ರತಿನಿಧಿಗಳು ಮುಂದಾದಾಗ, ನಾವು ಹೇಳಿದ್ದನ್ನು ಮೊದಲು ಕೇಳಿ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ. ಏನಿದ್ದರೂ ಹೈಕಮಾಂಡ್ ಹೇಳಿದಂತೆ ಮುಂದುವರಿಯುತ್ತೇವೆ ಎಂದರು.

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಆಗಿತ್ತೇ ಚರ್ಚೆ?

ಎರಡೂವರೆ ವರ್ಷದ ನಂತರ ನಾಯಕತ್ವ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಹೊತ್ತಿನಲ್ಲಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿತ್ತೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಸಷ್ಟವಾದ ಉತ್ತರ ನೀಡಿಲ್ಲ. ಏನಿದ್ದರೂ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದಷ್ಟೇ ಹೇಳಿದರು. ಇದರೊಂದಿಗೆ, ಅಧಿಕಾರ ಹಂಚಿಕೆ ಚರ್ಚೆ ನಡೆದಿತ್ತೇ ಎಂಬುದು ಪ್ರಶ್ನೆಯಾಗಿಯೇ ಉಳಿಯಿತು.

ಈ ಮಧ್ಯೆ, ‘ಅಧಿಕಾರ ಹಂಚಿಕೆ ಗೊಂದಲ ಶುರುವಾಗಿದ್ದೇ ಸಿಎಂ ಹಾಗೂ ಡಿಸಿಎಂ ನಡುವೆ. ನಮಗೇನು ಸಂಬಂಧ ಇದರಲ್ಲಿ’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದಾಗ ಸಿಎಂ ನೀಡಿದ ಉತ್ತರ ಕೂಡ, ಉಭಯ ನಾಯಕರ ಮಧ್ಯೆ ಗೊಂದಲ ಇದ್ದುದು ನಿಜ ಎಂಬಂತಿತ್ತು. ನಾನು ಮತ್ತು ಡಿಕೆ ಶಿವಕುಮಾರ್ ಸೆಟಲ್​ಮೆಂಟ್ ಮಾಡಿಕೊಳ್ಳುವುದೇ ಪರಿಹಾರ ಅಲ್ವಾ? ಹೈಕಮಾಂಡ್ ಹೇಳಿದಂತೆ ಸೆಟಲ್ ಮಾಡಿಕೊಳ್ಳುವುದೇ ಒಂದು ಸೆಟಲ್​ಮೆಂಟ್ ಎಂದರು. ಅಂದರೆ, ಆರಂಭದಲ್ಲಿ ಇಬ್ಬರ ನಡುವೆ ಗೊಂದಲವೇ ಇರಲಿಲ್ಲ ಎಂದ ಸಿಎಂ, ಈಗ ಸೆಟಲ್​ಮೆಂಟ್ ಮಾಡಿಕೊಂಡಿದ್ದೇವೆ ಎಂದರು. ಇದು ಕೂಡ ಅನುಮಾನಕ್ಕೆ ಕಾರಣವಾಯಿತು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಬ್ರೇಕ್​ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಒಟ್ಟಿನಲ್ಲಿ, ಬ್ರೇಕ್​ಫಾಸ್ಟ್ ಮೀಟಿಂಗ್​ನಲ್ಲಿ ಇಬ್ಬರ ನಡುವಣ ಗೊಂದಲವನ್ನು ಸೆಟಲ್ ಮಾಡಿಕೊಂಡಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ್ತು 2028ರ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡುವ ಬಗ್ಗೆ ಚರ್ಚಿಸಿದ್ದೇವೆ.  ಜತೆಗೆ, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಸಮರ್ಪಕವಾಗಿ ಕೌಂಟರ್ ಕೊಟ್ಟು ಮಣಿಸುವ ಬಗ್ಗೆ ಒಮ್ಮತಕ್ಕೆ ಬಂದಿದ್ದೇವೆ ಎಂದು ಉಭಯ ನಾಯಕರು ಸ್ಪಷ್ಟಪಡಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Sat, 29 November 25