ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸುವಲ್ಲಿ ಬ್ಯುಸಿಯಾಗಿದೆ. ಈ ಗ್ಯಾರೆಂಟಿಗಳಿಗೆ (Guarantee) ಹಣ ಹೊಂದಿಸುವುದೇ ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿದೆ. ಬೊಕ್ಕಸದಲ್ಲಿನ ಬಹುತೇಕ ಹಣವನ್ನು ಸರ್ಕಾರ ಗ್ಯಾರೆಂಟಿಗಳಿಗೆ ಸುರಿಯುತ್ತಿದೆ. ಇತ್ತ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ದುಂಬಾಲು ಬಿದ್ದಿದ್ದರು. ಈ ನಡುವೆಯೇ ಅಭಿವೃದ್ಧಿಗೆ ಅನುದಾನ ನೀಡಲು ಹಣವಿಲ್ಲ ಎಂದು ಡಿಕೆ ಶಿವಕುಮಾರ್ ಶಾಸಕರಿಗೆ ಹೇಳಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಶಾಸಕರನ್ನು ಶಾಂತಗೊಳಿಸಲು ಸಿಎಂ ಸಿದ್ದರಾಮಯ್ಯ 31 ಜಿಲ್ಲೆಗಳ 135 ಶಾಸಕರ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರಿಗೆ ಕೆಲವು ಷರತ್ತು ವಿಧಿಸುವ ಮೂಲಕ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿದ್ದಾರೆ.
ಸಭೆಯಲ್ಲಿ ಶಾಸಕರು ಅನುದಾನ ಸಿಗುತ್ತಿಲ್ಲವೆಂದು ಸಿಎಂ ಬಳಿ ಅಳಲು ತೋಡಿಕೊಂಡಿದ್ದರು. ಶಾಸಕರ ಈ ಅಳಲು ಕೇಳಿದ ಸಿಎಂ ಸಿದ್ದರಾಮಯ್ಯ, ಆದ್ಯತೆ ಮತ್ತು ಅನುದಾನದ ಲಭ್ಯತೆ ಆಧಾರದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಅಹವಾಲುಗಳನ್ನು ಜಾರಿಗೆ ತರುವಂತೆ ಶಾಸಕರಿಗೆ ಷರತ್ತು ವಿಧಿಸಿದ್ದಾರೆ. ಇದಕ್ಕೆ ಶಾಸಕರು ಸಮ್ಮತಿ ಸೂಚಿಸಿದ ಬಳಿಕ ಅನುದಾನ ಬಿಡುಗಡೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮೊದಲ ಕಂತಿನಲ್ಲಿ 145 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪ್ರತಿ ಕ್ಷೇತ್ರಕ್ಕೆ 50 ಲಕ್ಷ ರೂ. ನಂತೆ 224 ಕ್ಷೇತ್ರದ ಶಾಸಕರು, 67 ವಿಧಾನಪರಿಷತ್ ಸದಸ್ಯರಿಗೆ ಅನುದಾನ ನೀಡಲಾಗಿದೆ. ಈ ಮೂಲಕ ಸರ್ಕಾರ ಶಾಸಕರ ಸಮಸ್ಯೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಇನ್ನು ಮೊದಲ ಕಂತು ಬಿಡುಗಡೆಯಾದ ಬಳಿಕವಾದರೂ ಶಾಸಕರ ಅಸಮಾಧಾನ ನಿವಾರಣೆಯಾಗುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿ: ಕೆಪಿಎಸ್ಸಿ ಸದಸ್ಯರ ಹುದ್ದೆಗೆ ಮೂವರು ಹೆಸರು ಶಿಫಾರಸು ಮಾಡಿದ ಸಿಎಂ
ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿರುವ ಕಾರಣ ಈ ವರ್ಷ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಮತ್ತು ಐದು ಗ್ಯಾರೆಂಟಿಗಳ ಜಾರಿಗೆಯಿಂದ ಹಣಕಾಸಿನ ಇಕ್ಕಟ್ಟಿನಲ್ಲಿದೆ ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಶಾಸಕರಿಗೆ ಅನುದಾನ ನೀಡಲು ಸಾಧ್ಯವಿಲ್ಲ ಶಾಸಕಾಂಗ ಸಭೆಯಲ್ಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದರು.
ನಾವು ಈ ವರ್ಷ ಐದು ಗ್ಯಾರೆಂಟಿಗಾಗಿ 40 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಹೀಗಾಗಿ ಈ ವರ್ಷ ನಾವು ಅಭಿವೃದ್ಧಿಯನ್ನು ನೀಡಲು ಸಾಧ್ಯವಿಲ್ಲ ಎಂದು ಶಾಸಕರಿಗೆ ತಿಳಿಸಿದ್ದರು. ಇದಾದ ನಂತರ ಶಾಸಕರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೆಚ್ಚಾಗಿದ್ದು, ಸಿಎಂ ಸಿದ್ದರಾಮಯ್ಯ ತುರ್ತಾಗಿ ಸಭೆ ಕರೆದರು. ಸಭೆಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ಅನುದಾನ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:28 pm, Sat, 19 August 23