Amarnath Yatra 2023: ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧ; ಸಿಎಂ ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: Jul 09, 2023 | 10:01 AM

ಪವಿತ್ರ ಅಮರನಾಥ ಯಾತ್ರೆಗೆ ತೆರಳಿದ್ದ 80 ಮಂದಿ ಕನ್ನಡಿಗರು ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

Amarnath Yatra 2023: ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧ; ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಬೆಂಗಳೂರು: ಪವಿತ್ರ ಅಮರನಾಥ ಯಾತ್ರೆಗೆ (Amarnath Yatra 2023) ತೆರಳಿದ್ದ 80 ಮಂದಿ ಕನ್ನಡಿಗರು ಹವಾಮಾನ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ತಿಳಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್​ ಮಾಡಿ ಗದಗನಿಂದ ತೆರಳಿರುವ 23 ಮಂದಿ ಸೇರಿದಂತೆ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಯಾತ್ರೆಗೆ ತೆರಳಿದ್ದಾರೆ.

ಈ 80 ಮಂದಿ ಕನ್ನಡಿಗರು ಅಮರಾನಾಥ ಮಂದಿರದಿಂದ 6 ಕಿಮೀ ದೂರದಲ್ಲಿರುವ ಪಂಚತಾರ್ನಿ ಟೆಂಟ್​ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು, ಎಲ್ಲರನ್ನೂ ಸುರಕ್ಷಿತವಾಗಿ ವಾಪಸು ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ನೆರವಿಗಾಗಿ ಕಂದಾಯ ಇಲಾಖೆಯ ಐಎಎಸ್ ಅಧಿಕಾರಿ ರಶ್ಮಿ ನಿಯೋಜನೆ

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು ಕರ್ನಾಟಕದ ಯಾತ್ರಿಗಳು ಸುರಕ್ಷಿತವಾಗಿದ್ದಾರೆ. ಉತ್ತರಕಾಂಡದಲ್ಲಿ ಬಾರಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕರ್ನಾಟಕ ಅಮರನಾಥ ಯಾತ್ರಿಗಳು ಸಂಕಷ್ಟದಲ್ಲಿದ್ದಾರೆ. ಇವರ ನೆರವಿಗಾಗಿ ಕಂದಾಯ ಇಲಾಖೆಯು ಐಎಎಸ್ ಅಧಿಕಾರಿ ರಶ್ಮಿ ಅವರನ್ನು ನಿಯೋಜನೆ ಮಾಡಲಾಗಿದೆ ಎಂದಿದ್ದರು.

ಭಾರಿ ಮಳೆ ಹಿನ್ನೆಲೆ ಹೆಲಿಕಾಪ್ಟರ್ ಮತ್ತು ವಿಮಾನದ ಮೂಲಕ ನೆರವಿಗೆ ಧಾವಿಸಲು ಸಾಧ್ಯವಿಲ್ಲ. ಬೆಟ್ಟ ಗುಡ್ಡಗಳ ಕಡಿದಾದ, ದುರ್ಗಮ ಪ್ರದೇಶದಲ್ಲಿ ಯಾತ್ರಿಕರು ಸಿಲುಕಿದ್ದು, ಮಳೆ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯ ನಡೆಸಲಾಗುತ್ತದೆ. ಉತ್ತರಕಾಂಡ ರೀಜನಲ್ ಕಮಿಷನ್, ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕರ್ನಾಟಕದ ಯಾತ್ರಿಕರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: Amarnath Yatra 2023: ಜುಲೈ 1 ರಿಂದ ಅಮರನಾಥ ಯಾತ್ರೆ, ದೇಗುಲದ ಕುರಿತ ಕುತೂಹಲಕಾರಿ ಸಂಗತಿಗಳು ಇಲ್ಲಿದೆ

ಇನ್ನು ಗದಗದಿಂದ ಅಮರನಾಥ ಯಾತ್ರೆಗೆ 23 ಯಾತ್ರಿಕರು ತೆರಳಿದ್ದರು. ದೇವರ ದರ್ಶನ ಪಡೆದು ಮರಳಿ ಬರುವಾಗ ಗುಡ್ಡ ಕುಸಿತವಾಗಿ ರಸ್ತೆ ಮಧ್ಯೆ ಸಿಲುಕಿದ್ದಾರೆ. ಅಮರನಾಥದಿಂದ ಸುಮಾರು 10 ಕಿಮೀ ದೂರದಲ್ಲಿ ಗುಡ್ಡ ಕುಸಿತವಾಗಿದೆ.

ಯಾತ್ರಿಗಳ ಜೊತೆ ಗದಗ ಡಿಸಿ ವೈಶಾಲಿ ಸಂಪರ್ಕ

ಯಾತ್ರಿಗಳನ್ನು ಗದಗ ಜಿಲ್ಲಾಧಿಕಾರಿ ವೈಶಾಲಿ ಸಂಪರ್ಕಿಸಿದ್ದು, ಹೆಲಿಕಾಪ್ಟರ್ ಕಳಿಸಿ ನಮ್ಮನ್ನು ರಕ್ಷಣೆ ಮಾಡಿ ಅಂತ ಯಾತ್ರಿಗಳು ಮನವಿ ಮಾಡಿದ್ದಾರೆ. ಗಾಬರಿಯಲ್ಲಿದ್ದರು, ಆದರೂ ಎಲ್ಲರೂ ಸೇಫ್ ಜಾಗದಲ್ಲಿ ಇದ್ದಾರೆ. ವೆದರ್ ಕ್ಲೀಯರ್ ಆದರೆ ಇವತ್ತು‌ ನಾಳೆ ಸ್ಥಳಾಂತರ ಮಾಡುತ್ತಾರೆ. ಜಮ್ಮು ಕಾಶ್ಮೀರದಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ತುಳಸಿ‌ ಮದ್ದಿನೇನಿ ಇದ್ದಾರೆ. ಐಎಎಸ್ ಅಧಿಕಾರಿಗಳಾದ ರಶ್ಮಿ ಹಾಗೂ ತುಳಸಿ‌ ಮದ್ದಿನೇನಿ ಅವರನ್ನು ಸಂಪರ್ಕ ಮಾಡಲಾಗಿದೆ. ಯಾತ್ರಿಗಳ ಜೊತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ. ಸೇಫ್ ಆಗಿದ್ದಾರೆ ಊಟ, ಉಪಹಾರ ಯಾವುದೇ ಸಮಸ್ಯೆ ಇಲ್ಲ. ಕೂಡಲೇ ಅಲ್ಲಿಂದ ರಕ್ಷಣೆ ಮಾಡಲಾಗುತ್ತೆ ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಮಾಹಿತಿ ನೀಡಿದ್ದಾರೆ.

ಹಾಗೇ ಧಾರವಾಡ ಜಿಲ್ಲೆಯಿಂದ ತೆರಳಿದ್ದ ಐವರು ಯಾತ್ರಿಕರು ಪಂಚತೀರಣಿ ಬಳಿ ನಾಲ್ಕು ದಿನಗಳಿಂದ ಸಿಲುಕಿದ್ದಾರೆ.  ವಿಠ್ಠಲ ಬಾಚಗುಂಡಿ, ರಾಕೇಶ ನಾಜರೆ, ಹರೀಶ ಸಾಳುಂಕೆ, ನಾಗರಾಜ ಹಳಕಟ್ಟಿ, ಮಡಿವಾಳಪ್ಪ ಕೊಟಬಾಗಿ ಸಿಲುಕಿದ ಯುವಕರು.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಮತ್ತು ಭಾರೀ ಮಳೆ ಹಿನ್ನೆಲೆ ಕಾಶ್ಮೀರ ಕಣಿವೆಯ ಬಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸತತ ಎರಡನೇ ದಿನವೂ ಸ್ಥಗಿತಗೊಳಿಸಲಾಗಿದೆ. ಅದರಂತೆ, ಜಮ್ಮುವಿನಿಂದ ಕಾಶ್ಮೀರಕ್ಕೆ ಯಾವುದೇ ಹೊಸ ಯಾತ್ರಾರ್ಥಿಗಳಿಗೆ ತೆರಳಲು ಅವಕಾಶವಿಲ್ಲ. ಹಿಲ್ಲರ್ ಅನಂತನಾಗ್ ರೈಲು ನಿಲ್ದಾಣದಲ್ಲಿ ನೀರು ನಿಂತಿದ್ದರಿಂದ ಖಾಜಿಗುಂಡ್ ಮತ್ತು ಬನಿಹಾಲ್ ನಡುವಿನ ರೈಲು ಸಂಚಾರಗಳನ್ನೂ ಸ್ಥಗಿತಗೊಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:06 am, Sun, 9 July 23