
ಬೆಂಗಳೂರು, ನವೆಂಬರ್ 14: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷವನ್ನು (Human Wildlife Conflict) ಪರಿಣಾಮಕಾರಿಯಾಗಿ ನಿಭಾಯಿಸಲು ಸರ್ಕಾರ ಸಮಗ್ರ ಕ್ರಮಕ್ಕೆ ಮುಂದಾಗಿದ್ದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅರಣ್ಯ ಇಲಾಖೆಗೆ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗೆ ದ್ರೋಣ್ ಕ್ಯಾಮರಾ ನಿಗಾ, 8 ಅಂಶಗಳ ಕಾರ್ಯಕ್ರಮಕ್ಕೆ ಅವರು ಸಲಹೆ ನೀಡಿದ್ದಾರೆ. ಕೃಪಾಕರ ಸೇನಾನಿ, ಸಂಜಯ್ ಗುಬ್ಬಿ ಸೇರಿದಂತೆ ವನ್ಯಜೀವಿ ತಜ್ಞರೊಂದಿಗೆ ಚರ್ಚೆ ನಡೆಸಿ ವೈಜ್ಞಾನಿಕ ಕ್ರಮಗಳನ್ನು ರೂಪಿಸುವಂತೆ ತಿಳಿಸಿದ್ದಾರೆ. ಸಂಘರ್ಷ ತಪ್ಪಿಸಲು ಅಗತ್ಯ ಸಿಬ್ಬಂದಿ, ಅನುದಾನ ಸೇರಿ ಸರ್ಕಾರದಿಂದ ಎಲ್ಲಾ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ.
ರಾಜ್ಯ ಮಟ್ಟದ ಸಮಗ್ರ ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸುವುದು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಈ ಸೂಚನೆಗಳನ್ನು ನೀಡಿದ್ದಾರೆ.
ವಯಸ್ಸಾದ ಹುಲಿಗಳು ಯುವ ಹುಲಿಗಳ ದಾಳಿಯಿಂದ ಗಾಯಗೊಂಡಿರುವುದು ಅಥವಾ ಇತರ ಕಾರಣಗಳಿಂದ ಅರಣ್ಯ ಪ್ರದೇಶದ ಹೊರಗೆ ಸಂಚರಿಸುತ್ತಿರುವ 15–20 ಹುಲಿಗಳನ್ನು ತಕ್ಷಣ ಪತ್ತೆಹಚ್ಚಿ ಸೆರೆಹಿಡಿಯಲು ದ್ರೋಣ್ ಕ್ಯಾಮರಾ ಬಳಸುವಂತೆ ಸಿಎಂ ಸೂಚಿಸಿದ್ದಾರೆ. ಈಗಾಗಲೇ ಎಂಟು ಕುಮ್ಕಿ ಆನೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಹಾಗೂ ಸ್ಕ್ವಾಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ತಿಳಿಸಿದ್ದಾರೆ. ಸಂಘರ್ಷ ಪ್ರದೇಶಗಳಲ್ಲಿ ಪರಿಣಾಮಕಾರಿ ಕಾರ್ಯಾಚರಣೆಗೆ ಸಿಬ್ಬಂದಿ, ಅನುದಾನ ಸೇರಿದಂತೆ ಎಲ್ಲಾ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ‘ಎಐ’ ಹುಲಿ ಹಾವಳಿಗೆ ಜನ ಹೈರಾಣ: ಕಿಡಿಗೇಡಿಗಳಿಗೆ ಅರಣ್ಯ ಇಲಾಖೆ ಖಡಕ್ ವಾರ್ನಿಂಗ್
Published On - 7:22 am, Fri, 14 November 25