‘ಎಐ’ ಹುಲಿ ಹಾವಳಿಗೆ ಜನ ಹೈರಾಣ: ಕಿಡಿಗೇಡಿಗಳಿಗೆ ಅರಣ್ಯ ಇಲಾಖೆ ಖಡಕ್ ವಾರ್ನಿಂಗ್
ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಆತಂಕದ ನಡುವೆ, ಎಐ ನಿರ್ಮಿತ ಸುಳ್ಳು ಹುಲಿ ವಿಡಿಯೋಗಳು ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಹುಟ್ಟಿಸುತ್ತಿವೆ. ಇಂತಹ ವಿಡಿಯೋಗಳನ್ನು ಹಂಚುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದರಿಂದ ಇಲಾಖೆಯ ಕಾರ್ಯನಿರ್ವಹಣೆಗೂ ತೊಂದರೆಯಾಗುತ್ತಿದ್ದು, ಜನ ಸಾಮಾನ್ಯರು ಆತಂಕಗೊಳ್ಳುತ್ತಿದ್ದಾರೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ಕ್ರಮ ಅಗತ್ಯ ಎಂದು ಇಲಾಖೆ ಹೇಳಿದೆ.

ಚಾಮರಾಜನಗರ, ನವೆಂಬರ್ 13: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಹೊಲಗಳಿಗೆ ಕೆಲಸಕ್ಕೆ ಹೋಗುವ ರೈತರು, ಮೇಯಲು ಹೋಗಿರುವ ಜಾನುವಾರುಗಳ ಮೇಲೆ ಮನಸೋ ಇಚ್ಛೆ ದಾಳಿ ನಡೆಸುತ್ತಿವೆ. ಅದರಲ್ಲೂ ಹುಲಿ ದಾಳಿ ಮೇಲಿಂದ ಮೇಲೆ ನಡೆಯುತ್ತಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಹುಲಿ ಪ್ರತ್ಯಕ್ಷ ಎಂಬ ವಿಡಿಯೋಗಳು ವೈರಲ್ ಆಗುತ್ತಿರೋದು ಸಾರ್ವಜನಿಕರ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆ ವಿರುದ್ಧ ಆಕ್ರೋಶಕ್ಕೂ ಕಾರಣವಾಗಿದೆ. ಹೀಗಾಗಿ ಹುಲಿಯ ಶೋಧಕ್ಕಿಳಿದ ಅರಣ್ಯ ಇಲಾಖೆ ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ್ದು, ಬಹುತೇಕರು ಶೇರ್ ಮಾಡಿರುವ ವಿಡಿಯೋಗಳು ಎಐ ನಿರ್ಮಿತ ಎಂಬುದು ಗೊತ್ತಾಗಿದೆ.
ಕಾನೂನು ಕ್ರಮದ ಎಚ್ಚರಿಕೆ
ಎಐಗಳ ಮೂಲಕ ಹುಲಿಯ ವಿಡಿಯೋ ನಿರ್ಮಿಸಿ ಹರಿಬಿಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸಮರಕ್ಕಿಳಿದಿರುವ ಅರಣ್ಯ ಇಲಾಖೆ, ಅಂತವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ರವಾನಿಸಿದೆ. ಹುಲಿ ಬಂತೆಂದು ಸುಳ್ಳು ಫೋಟೋ ಹಂಚುವುದರಿಂದ ಜನ ಸಾಮಾನ್ಯರಲ್ಲಿ ಅನಗತ್ಯ ಭಯ ಸೃಷ್ಟಿಯಾಗುತ್ತಿದೆ. ಅಲ್ಲದೆ ಇಲಾಖೆಯ ಸಿಬ್ಬಂದಿ ಕಾರ್ಯನಿರ್ವಹಣೆಗೂ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಹುಲಿ ದಾಳಿ ಭೀತಿ, ಬಂಡೀಪುರ- ನಾಗರಹೊಳೆ ಸಫಾರಿಗೆ ತಾತ್ಕಾಲಿಕ ನಿಷೇಧ
ಭಯಭೀತರಾಗಿರುವ ಕಾಡಂಚಿನ ಗ್ರಾಮಗಳ ಜನರು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಪಡಗೂರು ಕಲ್ಲಹಳ್ಳಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಇತ್ತೀಚೆಗಷ್ಟೇ ಬರೋಬ್ಬರಿ 4 ಹುಲಿಗಳನ್ನು ಸೆರೆ ಹಿಡಿದಿದ್ದರು. ಸಾಕಾನೆ ಸಹಾಯದಿಂದ ಮೂರು ಹುಲಿಗಳ ಜತೆಗೆ ತಾಯಿ ಹುಲಿ ಸೆರೆಯಾಗಿತ್ತು. ಅದಾದ ಬಳಿಕವೂ ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ಓಡಾಟ ಮುಂದುವರಿದಿದ್ದು, ಮಂಚಹಳ್ಳಿ ಗ್ರಾಮದಲ್ಲಿ ಶಿವಣ್ಣ ಎಂಬುವರಿಗೆ ಸೇರಿದ 2 ಹಸುಗಳ ಮೇಲೆ ವ್ಯಾಘ್ರ ದಾಳಿ ನಡೆಸಿತ್ತು. ಜಮೀನಿನಲ್ಲಿ ಹಸುಗಳ ಮೇಲೆ ಹುಲಿ ದಾಳಿ ನಡೆಸಿದ್ದು, ಘಟನಾ ಸ್ಥಳಕ್ಕೆ ಬಂಡೀಪುರ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು. ಘಟನೆಯಿಂದ ಆತಂಕಗೊಂಡಿರುವ ಮಂಚಹಳ್ಳಿ ನಿವಾಸಿಗಳು, ಜಮೀನುಗಳಿಗೆ ತೆರಳಲು ಹೆದರುತ್ತಿದ್ದಾರೆ. ಕಾಡಂಚಿನ ಬಹುತೇಕ ಗ್ರಾಮಗಳಲ್ಲಿನ ಸ್ಥಿತಿಯೂ ಹೀಗೇ ಇದೆ. ಇಂತಹ ಸಂದರ್ಭದಲ್ಲಿ ಹುಲಿ ಬಂತೆಂದು ಎಐ ವಿಡಿಯೋ, ಫೋಟೋಗಳನ್ನು ಕೆಲ ಕಿಡಿಗೇಡಿಗಳು ಹರಿಬಿಡುತ್ತಿದ್ದು, ಇಂತವರ ವಿರುದ್ಧ ಅರಣ್ಯ ಇಲಾಖೆಯೀಗ ಗರಂ ಆಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:01 pm, Thu, 13 November 25



