AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ವರ್ಷದಲ್ಲಿ 6 ಹುಲಿಗಳ ಸಾವು: ರಾಜ್ಯ ಸರ್ಕಾರದ ವಿರುದ್ಧ ಸಂಸದ ಯದುವೀರ್​ ಕಿಡಿ

ಒಂದೇ ವರ್ಷದಲ್ಲಿ 6 ಹುಲಿಗಳ ಸಾವಾಗಿದ್ದರೂ ರಾಜ್ಯ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಹಿಂದೆ ನಡೆದ ಘಟನೆಗಳಿಂದಾದರೂ ಪಾಠ ಕಲಿತು, ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಅಧಿಕಾರಿಗಳು ತೀವ್ರ ನಿಗಾ ವಹಿಸುತ್ತಾರೆ ಎಂದು ಭಾವಿಸಿದ್ದೇವು, ಅದು ಕೂಡ ಹುಸಿಯಾಗಿದೆ ಎಂದು ಸಂಸದ ಯದುವೀರ್ ಒಡೆಯರ್​​ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿ ಕಿಡಿ ಕಾರಿದ್ದಾರೆ.

ಒಂದೇ ವರ್ಷದಲ್ಲಿ 6 ಹುಲಿಗಳ ಸಾವು: ರಾಜ್ಯ ಸರ್ಕಾರದ ವಿರುದ್ಧ ಸಂಸದ ಯದುವೀರ್​ ಕಿಡಿ
Yaduveer
ಪ್ರಸನ್ನ ಹೆಗಡೆ
|

Updated on: Oct 05, 2025 | 7:06 AM

Share

ಮೈಸೂರು, ಅಕ್ಟೋಬರ್​ 05: ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಆರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬೇಜವಾಬ್ದಾರಿತನದ ಆಡಳಿತದಿಂದ ಸಾಕಷ್ಟು ಪ್ರಾಣಿಗಳನ್ನು ಕಳೆದುಕೊಂಡಿದ್ದು,ಈ ವರ್ಷದಲ್ಲಿಯೇ 6 ಹುಲಿಗಳ ಹತ್ಯೆಯಾಗಿದೆ ಎಂದು ಮೈಸೂರು ಸಂಸದ ಯದುವೀರ್​ (Yaduveer Wadiyar) ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿರುವ ಸಂಸದರು, ಇತ್ತೀಚೆಗೆ ಮಹದೇಶ್ವರಬೆಟ್ಟ ವನ್ಯಧಾಮದಲ್ಲಿ 5 ಹುಲಿಗಳಿಗೆ ವಿಷಹಾಕಿ ಕೊಲೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಘಟನೆ ನೋವಿನ ಸಂಗತಿ ಎಂದಿದ್ದಾರೆ.

ಸಂಸದ ಯದುವೀರ್​ ಪೋಸ್ಟ್​ ನಲ್ಲಿ ಏನಿದೆ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ವನ್ಯ ಧಾಮದಲ್ಲಿ ಹೆಣ್ಣು ಹುಲಿಯೊಂದನ್ನು ದುಷ್ಕರ್ಮಿ ಗಳು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾರೆ. ಇತ್ತೀಚೆಗೆ ಮಹದೇಶ್ವರಬೆಟ್ಟ ವನ್ಯಧಾಮದ ಹೂಗ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳನ್ನು ವಿಷ ಪ್ರಾಶನ ಮಾಡುವ ಮೂಲಕ ಕೊಲ್ಲಲಾಗಿತ್ತು, ಅದರ ಬೆನ್ನಲ್ಲೇ ಮತ್ತೊಂದು ಹುಲಿಯನ್ನು ಕೊಲೆ ಮಾಡಿರುವುದು ಅತ್ಯಂತ ನೋವಿನ ಸಂಗತಿ. ಈ ವರ್ಷದಲ್ಲಿ 6 ಹುಲಿಗಳ ಹತ್ಯೆಯಾಗಿದ್ದರೂ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಹಿಂದೆ ನಡೆದ ಘಟನೆಗಳಿಂದಾದರೂ ಪಾಠ ಕಲಿತು, ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಅಧಿಕಾರಿಗಳು ತೀವ್ರ ನಿಗಾ ವಹಿಸುತ್ತಾರೆ ಎಂದು ಭಾವಿಸಿದ್ದೇವು, ಅದು ಕೂಡ ಹುಸಿಯಾಗಿದೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ ಕೇಸ್​: ಇಬ್ಬರು ಶಂಕಿತರು ವಶಕ್ಕೆ

ವನ್ಯ ಜೀವಿಗಳ ಸಂರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಲು ನಾವು ಎಷ್ಟೇ ಮನವಿ ಮಾಡಿದರೂ ಮತ್ತೆ ಈ ರೀತಿಯ ಆವಾಂತರಗಳು ನಡೆಯುತ್ತಿರುವುದು ಬೇಸರ ತಂದಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ. ವನ್ಯಜೀವಿಗಳ ಸಂರಕ್ಷಣೆಯ ವಿಷಯದಲ್ಲಿ ಎಂದಿಗೂ ನಿರ್ಲಕ್ಷ್ಯ ಬೇಡ ಎಂದು ಸಂಸದ ಯದುವೀರ್​ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.