AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ ಕೇಸ್​: ಇಬ್ಬರು ಶಂಕಿತರು ವಶಕ್ಕೆ

ಮಲೆ ಮಹದೇಶ್ವರ ಬೆಟ್ಟದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪಚ್ಚೆದೊಡ್ಡಿತಾಂಡಾದ ಇಬ್ಬರು ಶಂಕಿತರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಪ್ರಾಥಮಿಕ ತನಿಖೆಯ ಪ್ರಕಾರ ಹುಲಿಗೆ ವಿಷಪ್ರಾಶನ ಮಾಡಿ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ಹುಲಿ ಹತ್ಯೆ ಕೇಸ್​: ಇಬ್ಬರು ಶಂಕಿತರು ವಶಕ್ಕೆ
ಹುಲಿ ಹತ್ಯೆ ಪ್ರಕರಣ
ಪ್ರಸನ್ನ ಗಾಂವ್ಕರ್​
| Updated By: ಗಂಗಾಧರ​ ಬ. ಸಾಬೋಜಿ|

Updated on:Oct 04, 2025 | 11:06 PM

Share

ಚಾಮರಾಜನಗರ, ಅಕ್ಟೋಬರ್​ 04: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara hill) ಮತ್ತೊಂದು ಹುಲಿ (Tiger) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪಚ್ಚೆದೊಡ್ಡಿತಾಂಡಾ ನಿವಾಸಿಗಳಾದ ಪಚ್ಚೆಮಲ್ಲು ಮತ್ತು ಮಂಜುನಾಥ ಎಂಬುವವರನ್ನು ಜಿಲ್ಲೆಯ ಹನೂರು ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಹುಲಿಗೆ ವಿಷಪ್ರಾಶನ ಮಾಡಿ ಕೊಂದಿರುವುದಾಗಿ ತಿಳಿದುಬಂದಿದೆ.

ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಿಷ್ಟು

ನಗರದ ಸದಾಶಿವ ನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ನಡೆದಿರುವ ಮತ್ತೊಂದು ಹುಲಿ ಹತ್ಯೆಯಿಂದ ತುಂಬಾ ನೋವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಐದಕ್ಕೂ ಹೆಚ್ಚು ಹುಲಿಗಳು ಸಾವನ್ನಪ್ಪಿದ್ದ ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಹುಲಿ ಕಳೇಬರ ಪತ್ತೆ

ಹುಲಿ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹುಲಿಗೆ ವಿಷಪ್ರಾಶನ ಮಾಡಲಾಗಿದೆ ಅನ್ನುವ ಮಾಹಿತಿ ಇದೆ. ವನ್ಯಜೀವಿ ಅಪರಾಧ ಕಾಯ್ದೆ ಅನ್ವಯ ಕೇಸ್ ದಾಖಲಿಸಲಾಗಿದೆ. ಹುಲಿಯನ್ನು ಕೊಂದು 3 ತುಂಡು ಮಾಡಿರುವುದು ಘೋರಕೃತ್ಯ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಸದ್ಯ ವಶಕ್ಕೆ ಪಡೆದಿರುವ ಶಂಕಿತ ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೃತ್ಯದಲ್ಲಿ ಯಾರೆಲ್ಲಾ ಸಾಥ್​ ನೀಡಿದ್ದಾರೆ, ಹುಲಿಯನ್ನು ಕೊಂದಿದ್ದು ಹೇಗೆ ಎಂಬುದರ ಕುರಿತು ವಿಚಾರಣೆ ಮಾಡಲಾಗುತ್ತಿದೆ.

ಹುಲಿ ಹತ್ಯೆ ಸ್ಥಳ ಜಾಲಾಡಿದ ಪಿಸಿಸಿಎಫ್ ಸ್ಮಿತಾ ನೇತೃತ್ವದ ತಂಡ 

ಇನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶ ಬೆನ್ನಲ್ಲೇ ಹುಲಿ ಹತ್ಯೆ ಸ್ಥಳಕ್ಕೆ ಪಿಸಿಸಿಎಫ್ ಸ್ಮಿತಾ ನೇತೃತ್ವದ ತಂಡ ಭೇಟಿ ನೀಡಿ, ಹುಲಿ ಕಳೇಬರ ಸಿಕ್ಕ ಸ್ಥಳಗಳನ್ನು ಜಾಲಾಡಿದ್ದಾರೆ. ಸಚಿವರ ಸೂಚನೆಯಂತೆ ಪಿಸಿಸಿಎಫ್ ಸ್ಮಿತಾ ತಂಡ ಎಂಟು ದಿನದ ಒಳಗೆ ವರದಿ ಸಲ್ಲಿಸಲಿದ್ದಾರೆ.

ನಡೆದದ್ದೇನು?

ಐದು ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದ ಪ್ರಕರಣ ಮಾಸುವ ಮುನ್ನವೇ, ಮಲೆ ಮಹದೇಶ್ವರನ ಪುಣ್ಯ ಭೂಮಿಯಲ್ಲಿ ನಿನ್ನೆ ಮತ್ತೊಂದು ಹೇಯ ಕೃತ್ಯ ನಡೆದಿದೆ. ವನ್ಯಜೀವಿಧಾಮದ ಹನೂರು ವಲಯದಲ್ಲಿ 12 ವರ್ಷದ ಗಂಡು ಹುಲಿಯನ್ನ ಕೊಂದು ಹಾಕಿದ್ದಾರೆ. ಹುಲಿಯ ಕಳೇಬರವನ್ನ ಕೊಡಲಿಯಿಂದ ಕೊಚ್ಚಿ, 3 ಭಾಗಗಳನ್ನ ಮಾಡಿ 3 ಕಡೆ ಎಸೆದು ಹೋಗಿದ್ದಾರೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಗಗಳನ್ನ ಎಫ್​​​ಎಸ್​​ಎಲ್​​ಗೆ ಕಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 7:15 pm, Sat, 4 October 25