AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಲಿ ಹತ್ಯೆಯ ಪ್ರಮುಖ ಆರೋಪಿ ಅರೆಸ್ಟ್​; ಹಸು ಕೊಂದಿದ್ದಕ್ಕೆ ಸಿಟ್ಟಲ್ಲಿ ಹೀನ ಕೃತ್ಯ

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ ಹತ್ಯೆ ಪ್ರಕರಣ ಸಂಬಂಧ ಓರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಜೊತೆ ಆತನ ನಾಲ್ವರು ಸಹಚರರನ್ನೂ ವಶಕ್ಕೆ ಪಡೆಯಲಾಗಿದೆ. ಹುಲಿ ಕೊಂದು 3 ಭಾಗಗಳಾಗಿ ತುಂಡರಿಸಿದ್ದ ರಕ್ಷಸರ ನೀಚ ಕೃತ್ಯ ತನಿಖೆ ವೇಳೆ ಗೊತ್ತಾಗಿದ್ದು, ಸದ್ಯ ಆರೋಪಿಗಳನ್ನ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಹುಲಿ ಹತ್ಯೆಯ ಪ್ರಮುಖ ಆರೋಪಿ ಅರೆಸ್ಟ್​; ಹಸು ಕೊಂದಿದ್ದಕ್ಕೆ ಸಿಟ್ಟಲ್ಲಿ ಹೀನ ಕೃತ್ಯ
ಹುಲಿ ಹಂತಕನ ಬಂಧನ
ಸೂರಜ್ ಪ್ರಸಾದ್ ಎಸ್.ಎನ್
| Updated By: ಪ್ರಸನ್ನ ಹೆಗಡೆ|

Updated on: Oct 05, 2025 | 11:16 AM

Share

ಚಾಮರಾಜನಗರ, ಅಕ್ಟೋಬರ್​ 05: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಹುಲಿ (Tiger) ಹತ್ಯೆ ಪ್ರಕರಣ ಸಂಬಂಧ ಅರಣ್ಯ ಅಧಿಕಾರಿಗಳು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಪಚ್ಚಮಲ್ಲ ಅಲಿಯಾಸ್ ಸಣ್ಣ ಬಂಧಿತ ಆರೋಪಿಯಾಗಿದ್ದು, ಈತ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ನಿವಾಸಿ ಎಂಬುದು ಗೊತ್ತಾಗಿದೆ. ಘಟನೆ ಸಂಬಂಧ ಪಚ್ಚಮಲ್ಲನ ಜೊತೆ ಆತನ ನಾಲ್ವರು ಸಹಚರರನ್ನೂ ವಶಕ್ಕೆ ಪಡೆಯಲಾಗಿದೆ. ಗಣೇಶ್, ಗೋವಿಂದೇಗೌಡ, ಮಂದೆಕುರಿ ಮೇಯಿಸುತ್ತಿದ್ದ ಮಂಜುನಾಥ್ ಹಾಗೂ ಕಂಬಣ್ಣ ಸದ್ಯ ಅರಣ್ಯಾಧಿಕಾರಿಗಳ ವಶದಲ್ಲಿದ್ದಾರೆ.

ಹುಲಿ ಕೊಂದಿದ್ದು ಯಾಕೆ?

ಪಚ್ಚಮಲ್ಲನ ಹಸುವನ್ನ ಹುಲಿ ಬೇಟೆಯಾಡಿ ಕೊಂದು ಭಕ್ಷಣೆ ಮಾಡಿತ್ತು. ತಾನು ಸಾಕಿದ ಹಸುವನ್ನ ಕೊಂದಿದ್ದಕ್ಕೆ ರೊಚ್ಚಿಗೆದ್ದಿದ್ದ ಆರೋಪಿ, ಹುಲಿಗೆ ಒಂದುಗತಿ ಕಾಣಿಸಲೇಬೇಕೆಂದು ಸ್ಕೆಚ್ ಹಾಕಿದ್ದ.ಗೋವಿಂದೇಗೌಡ, ಮಂಜುನಾಥ್, ಕಂಬಣ್ಣ, ಗಣೇಶನ ಜೊತೆ ಸೇರಿ ಸಂಚು ಮಾಡಿದ್ದ. ಅದರಂತೆ ಹುಲಿಗೆ ಮಾಂಸದಲ್ಲಿ ವಿಷ ಹಾಕಿ ಕೊಲ್ಲಲಾಗಿದೆ. ಬಳಿಕ ರಕ್ಕಸರು ಕೊಡಲಿಯಿಂದ ಹುಲಿಯನ್ನ 3 ಭಾಗಗಳಾಗಿ ತುಂಡರಿಸಿದ್ದರು ಎಂಬುದು ಗೊತ್ತಾಗಿದ್ದು, ಸದ್ಯ ಆರೋಪಿಗಳನ್ನ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಒಂದೇ ವರ್ಷದಲ್ಲಿ 6 ಹುಲಿಗಳ ಸಾವು: ರಾಜ್ಯ ಸರ್ಕಾರದ ವಿರುದ್ಧ ಸಂಸದ ಯದುವೀರ್​ ಕಿಡಿ

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ಬಳಿ ಮಣ್ಣಿನಲ್ಲಿ ಮರೆಮಾಡಿ ಇಡಲಾಗಿದ್ದ ಹುಲಿಯ ಅರ್ಧ ಕಳೇಬರ ಪತ್ತೆಯಾಗಿತ್ತು. ಹುಲಿಯ ತಲೆ, ಭುಜ, ಮುಂಗಾಲುಗಳು ಮಾತ್ರ ಲಭ್ಯವಾಗಿದ್ದವು. ರಾಜ್ಯದಲ್ಲಿ 5 ಹುಲಿಗಳ ಸಾವಿನ ವಿಚಾರ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದಿರೋದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಘಟನೆ ಸಂಬಂಧ ಪಿಸಿಸಿಎಫ್ ತಂಡದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದರು. ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ಅಧಿಕಾರಿಗಳು 8 ದಿನಗಳ ಒಳಗೆ ವರದಿ ಸಲ್ಲಿಸಿ, ಹುಲಿಯ ಹಂತಕರನ್ನು ಪತ್ತೆಮಾಡಲು ಮುಂದಾಗಬೇಕು ಎಂದು ಸೂಚಿಸಿದ್ದರು. 12 ವರ್ಷದ ಗಂಡು ಹುಲಿ ಕೊಲೆ ವಿಚಾರವಾಗಿ ಇಬ್ಬರು ಶಂಕಿತರನ್ನ ನಿನ್ನೆ ವಶಕ್ಕೆ ಪಡೆದು, ಅಜ್ಞಾತ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದರು. ಕೃತ್ಯಕ್ಕೆ ಯಾರೆಲ್ಲ ಸಾಥ್​ ನೀಡಿದ್ದಾರೆ, ಹುಲಿಯನ್ನು ಕೊಂದಿದ್ದು ಹೇಗೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.