ಹಾಸನಾಂಬೆ ದರ್ಶನೋತ್ಸವ ತಯಾರಿಯಲ್ಲಿ ಭಾರೀ ಅಕ್ರಮ; ದೇವರಾಜೇಗೌಡ ಆರೋಪ
ಹಾಸನಾಂಬೆಯ ದರ್ಶನಕ್ಕೆ ದಿನಗಣನೆ ಶುರುವಾದ ಬೆನ್ನಲ್ಲೇ ಆರೋಪವೊಂದು ಕೇಳಿ ಬರುತ್ತಿದೆ. ಭಕ್ತರ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆಸಿರುವಾಗಲೇ ಹಾಸನಾಂಬೆ ದರ್ಶನೋತ್ಸವ ತಯಾರಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿಯುವ ಮೊದಲೇ ಕಾಮಗಾರಿ ಆರಂಭ ಮಾಡಲು ಅವಕಾಶ ನೀಡಲಾಗಿರುವುದು ಅನುಮಾನ ಮೂಡಿಸಿದೆ.

ಹಾಸನ, ಅಕ್ಟೊಬರ್ 5: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ (Hassan) ಅಧಿದೇವತೆ ಹಾಸನಾಂಬೆ ದರ್ಶನೋತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದೆ. ಲಕ್ಷ ಲಕ್ಷ ಭಕ್ತರು ಹಾಸನದತ್ತ ಲಗ್ಗೆಯಿಡುವ ತಯಾರಿಯಲ್ಲಿದ್ದಾರೆ. ಜಿಲ್ಲಾಡಳಿತ ಕೂಡ ಭಕ್ತರ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆಸಿರುವಾಗಲೇ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಲಕ್ಷ ಲಕ್ಷ ಕಾಮಗಾರಿಗೆ ಕರೆಯಲಾಗಿರುವ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ಆಗಿದೆ ಎಂದು ಬಿಜೆಪಿ ಮುಖಂಡ ಆರೋಪಿಸಿದ್ದಾರೆ.
ದುಪ್ಪಟ್ಟು ಹಣ ಕೊಟ್ಟು ಟೆಂಡರ್ ಕರೆಯಲಾಗಿದೆ ಎಂಬ ಆರೋಪ
ಈ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದ್ದು, ಅಕ್ಟೋಬರ್ 9ಕ್ಕೆ ದೇಗುಲದ ಬಾಗಿಲು ತೆರೆದರೆ ಅಕ್ಟೋಬರ್ 23ಕ್ಕೆ ಮತ್ತೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ನಡುವೆ 13 ದಿನಗಳಲ್ಲಿ ದೇವಿಯ ದರ್ಶನಕ್ಕೆ ಅವಕಾಶವಿರಲಿದೆ. ಅಪಾರ ಸಂಖ್ಯೆಯಲ್ಲಿ ಬರುವ ಭಕ್ತರ ಸ್ವಾಗತಕ್ಕೆ ಹಾಸನದ ಜಿಲ್ಲಾಡಳಿತ ಕೋಟಿ ಕೋಟಿ ಖರ್ಚು ಮಾಡಿ ಇಡೀ ನಗರವನ್ನು ಸಿಂಗರಿಸಿದೆ. ಬ್ಯಾರಿಕೇಡ್ ಅಳವಡಿಕೆ, ಟೆಂಟ್ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆ ಹೀಗೆ ಹತ್ತು ಹಲವು ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದ್ದು, ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಗೋಲ್ಮಾಲ್ ಆಗಿದೆ ಎಂದು ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಆರೋಪಿಸಿದ್ದಾರೆ.
20 ಲಕ್ಷಕ್ಕೆ ಖರೀದಿ ಮಾಡಬಹುದಾದ ಸಿಸಿ ಕ್ಯಾಮೆರಾಗಳಿಗೆ 60 ಲಕ್ಷಕ್ಕೆ ಬಾಡಿಗೆ ಟೆಂಡರ್ ಕರೆಯಲಾಗಿದೆ, 87 ಲಕ್ಷಕ್ಕೆ ಬ್ಯಾರಿಕೇಡ್ ಹಾಗೂ ಟೆಂಟ್ ಅಳವಡಿಕೆಗೆ ಟೆಂಡರ್ ಕರೆದಿದ್ದು, 74 ಲಕ್ಷಕ್ಕೆ ಕೆಲಸ ಮಾಡುವವರನ್ನು ಬಿಟ್ಟು 86 ಲಕ್ಷದ 99 ಸಾವಿರಕ್ಕೆ ಟೆಂಡರ್ ಹಾಕಿದವರ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಸತತ ಏಳು ವರ್ಷಗಳಿಂದ ಒಬ್ಬನೇ ವ್ಯಕ್ತಿಗೆ ಅಧಿಕಾರಿಗಳು ಟೆಂಡರ್ ನೀಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೇವರ ಹೆಸರಿನಲ್ಲಿ ಜನರ ಹಣ ಲೂಟಿ ಮಾಡಲಾಗ್ತಿದೆ ಎಂದು ಕಿಡಿಕಾರಿರುವ ದೇವರಾಜೇಗೌಡ ಈ ಬಗ್ಗೆ ಕಾನೂನು ಹೊರಾಟದ ಎಚ್ಚರಿಕೆ ನೀಡಿದ್ದಾರೆ.
ಗೋಲ್ಡ್ ಪಾಸ್ನ ಹೆಸರಿನಲ್ಲಿ ಅಕ್ರಮ
ಬೇಡಿದ ವರವನ್ನು ಕರುಣಿಸುವ ಮಹಾತಾಯಿಯನ್ನು ನೋಡಲು ಅವಕಾಶ ಸಿಗುವುದೇ ವರ್ಷಕ್ಕೆ ಒಂದು ಬಾರಿ. ಹುತ್ತದ ರೂಪದಲ್ಲಿ ನೆಲೆಯಿರುವ ಹಾಸನಾಂಬೆಯನ್ನು ಕಣ್ಣು ತುಂಬಿಕೊಳ್ಳಲು ಲಕ್ಷ ಲಕ್ಷ ಭಕ್ತರು ಕಾಯುತ್ತಾರೆ. ಹೀಗೆ ಬರುವ ಭಕ್ತರಿಗಾಗಿ ವಿತರಣೆ ಮಾಡುವ ಪಾಸ್ಗಳಲ್ಲಿ ಕಳೆದ ವರ್ಷ ದೊಡ್ಡ ಪ್ರಮಾಣದ ಗೋಲ್ಮಾಲ್ ಮಾಡಲಾಗಿತ್ತು. ಈ ವರ್ಷ ಕೂಡ ಪಾಸ್ ಇಲ್ಲ ಎಂದು ಹೇಳಿ ಗೋಲ್ಡ್ ಪಾಸ್ ಹೆಸರಿನಲ್ಲಿ 47 ಸಾವಿರಕ್ಕೂ ಅಧಿಕ ಪಾಸ್ ಮುದ್ರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ ಹಾಸನಾಂಬೆ ದರ್ಶನಕ್ಕೆ ಹೈಟೆಕ್ ಸ್ಪರ್ಶ: ವಾಟ್ಸಾಪ್ ಚಾಟ್ ಮೂಲಕವೇ ಪಡೆಯಿರಿ ಟಿಕೆಟ್, ಮಾಹಿತಿ
ಭಕ್ತರ ಸುಲಲಿತ ದರ್ಶನಕ್ಕಾಗಿ ಮಾಡಲಾಗುತ್ತಿರುವ ವ್ಯವಸ್ಥೆಗಳಲ್ಲಿ ಸರ್ಕಾರಕ್ಕೆ ಹಣ ಉಳಿಸಲು ಅವಕಾಶ ಇದ್ದರೂ ದುಬಾರಿಯಾಗಿ ವೆಚ್ಚ ಮಾಡಲಾಗುತ್ತಿದೆ. ಹೆಸರಿಗಷ್ಟೇ ಟೆಂಡರ್ ಕರೆದು ಟೆಂಡರ್ ಪ್ರಕ್ರಿಯೆ ಮುಗಿಯುವ ಮೊದಲೇ ಕಾಮಗಾರಿ ಆರಂಭ ಮಾಡಲು ಅವಕಾಶ ನೀಡಲಾಗಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು, ಅರ್ಹ ಇರುವ ಯಾರೇ ಆದರೂ ಅವರಿಗೆ ಅವಕಾಶ ಸಿಗಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:50 pm, Sun, 5 October 25



