ರೋಗಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ವಂಚಕರು: ಚಿಕಿತ್ಸೆ ಕೊಡಿಸುವ ನೆಪದಲ್ಲಿ ವಂಚನೆ
ಕಾಯಿಲೆಯಿಂದ ಕಂಗಾಲಾಗಿರುವ ರೋಗಿಗಳ ಅಸಹಾಯಕತೆಯನ್ನೇ ವಂಚಕರ ಗ್ಯಾಂಗ್ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ವಂಚಕರು ಕೇವಲ ಒಂದು ಲೋಟ ಜೀರಿಗೆ ಕಷಾಯ ಕುಡಿಸಿ ಬರೋಬ್ಬರಿ 70 ಸಾವಿರ ರೂ ಹಣ ಪಡೆದು ಎಸ್ಕೇಪ್ ಆಗಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು, ಜೂನ್ 05: ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಅಪರಿಚಿತರಿಬ್ಬರು ವಂಚನೆ (fraud) ಮಾಡಿದ್ದಾರೆ. ಜೀರಿಗೆ ಕಷಾಯ ಕುಡಿಸಿ 70 ಸಾವಿರ ರೂ ಹಣ ಪಡೆದು ಪರಾರಿಯಾಗಿರುವಂತಹ ಘಟನೆ ಬೆಂಗಳೂರು (bengaluru) ಚಂದ್ರಾಲೇಔಟ್ ವ್ಯಾಪ್ತಿಯ ಕಲ್ಯಾಣನಗರದಲ್ಲಿ ನಡೆದಿದೆ. ಸದ್ಯ ಮೋಸ ಹೋಗಿರುವ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರ ಸೆರೆಗೆ ಖಾಕಿ ಬಲೆ ಬೀಸಿದೆ.
ಮುಖ್ಯಾಂಶಗಳು
- ರೋಗಿಯ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಕಿರಾತಕರು
- 20 ದಿನದಲ್ಲಿ ಎದ್ದು ಓಡಾಡ್ತೀರಿ ಅಂತ ಪುಂಗಿದ್ದರು ವಂಚಕರು
- ಜೀರಿಗೆ ಕಷಾಯ ಕುಡಿಸಿ 70 ಸಾವಿರ ಪೀಕಿದರು
ಅಪರಿಚಿತರಿಬ್ಬರಿಂದ ವಂಚನೆ
ಬೆಂಗಳೂರಿನ ಚಂದ್ರಾಲೇಔಟ್ ಬಳಿಯ ಕಲ್ಯಾಣನಗರ ನಿವಾಸಿ ಲಕ್ಷ್ಮಣ್ ಎಂಬುವವರಿಗೆ ಅಪರಿಚಿತರಿಬ್ಬರು ವಂಚನೆ ಮಾಡಿದ್ದಾರೆ. ಲಕ್ಷ್ಮಣ್ ಎಂಬುವವರು ಸುಮಾರು ವರ್ಷಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಏನು ಪ್ರಯೋಜನ ಆಗಿರಲಿಲ್ಲ. ಹೀಗಿರುವಾಗ ಅದೊಂದು ವಂಚನೆಯ ಗ್ಯಾಂಗ್ ಇವರ ಬೆನ್ನು ಬಿದ್ದಿದ್ದಾರೆ. ಲಕ್ಷ್ಮಣ್ರವರ ಮಾಹಿತಿ ಪಡೆದು ಸಂಪರ್ಕ ಮಾಡಿದ ಐನಾತಿಗಳು ಪಾರ್ಶ್ವವಾಯುಗೆ ಚಿಕಿತ್ಸೆ ಕೊಡುತ್ತೇವೆ ಅಂತ ಹೇಳಿದ್ದಾರೆ. ಇವರ ಮಾತು ನಂಬಿದ ಲಕ್ಷ್ಮಣ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಪಾಕ್ ಉಗ್ರನ ಜತೆ ಯುವಕರಿಬ್ಬರ ನಂಟು ಬೆಸಿದಿದ್ಹೇಗೆ? ಇಲ್ಲಿದೆ ಕರ್ನಾಟಕ-ಪಾಕ್ ಜಾಲದ ರಹಸ್ಯ
ಪಾರ್ಶ್ವವಾಯುಗೆ ಗುಣಪಡಿಸುವುದಾಗಿ ಲಕ್ಷ್ಮಣ್ ಮನೆಗೆ ಬಂದಿದ್ದ ಇಬ್ಬರು ಅಪರಿಚಿತರು, ಮೊದಲಿಗೆ ಮಲ್ಲೇಶ್ವರಂನ ಸಿದ್ದಾಶ್ರಮದಿಂದ ಬಂದಿರುವುದಾಗಿ ಹೇಳಿದ್ದಾರೆ. ನಂತರ ಲಕ್ಷಣ್ ಅವರ ಮನೆಯಲ್ಲೇ ಒಂದು ಗ್ಲಾಸ್ನಲ್ಲಿ ಜೀರಿಗೆ ಕಷಾಯ ರೆಡಿ ಮಾಡಿ ಕುಡಿಸಿದ್ದಾರೆ. ಕಷಾಯ ಕುಡಿದ ನಂತರ ಈ ಕಿರಾತಕರು, ಇನ್ನು 20 ಇಪ್ಪತ್ತು ದಿನಗಳಲ್ಲಿ ನೀವು ಎದ್ದು ಓಡಾಡುತ್ತೀರಿ ಅಂತ ಪುಂಗಿದ್ದಾರೆ. ಅಲ್ಲದೆ ಇದಕ್ಕೆ 70 ರೂ ಸಾವಿರ ಖರ್ಚಾಗತ್ತೆ ಅಂತ ಹೇಳಿದ್ದಾರೆ.
70 ಸಾವಿರ ರೂ ಹಣ ಪಡೆದು ಎಸ್ಕೇಪ್
ನಾಳೆಯಿಂದ ನಿಮ್ಮ ಮನೆಗೆ ಬಂದು ನಾವೇ ಮಸಾಜ್ ಮಾಡುತ್ತೇವೆ ಅಂತ ನಂಬಿಸಿದ್ದಾರೆ. ಕೇವಲ ಒಂದು ಲೋಟ ಕಷಾಯ ಕೊಟ್ಟು 70 ಸಾವಿರ ರೂ ಹಣ ಪಡೆದು ವಂಚಕರು ಎಸ್ಕೇಪ್ ಆಗಿದ್ದಾರೆ. ಇದಾದನಂತರ, ಯಾವುದೇ ಚಿಕಿತ್ಸೆಯನ್ನ ನೀಡದೆ, ಫೋನ್ ಸ್ವಿಚ್ ಆಫ್ ಮಾಡ್ಕೊಂಡು ಕಳ್ಳಾಟವಾಡಿದ್ದಾರೆ. ಇತ್ತ ಅನುಮಾನಗೊಂಡ ಲಕ್ಷ್ಮಣ್ ಮಲ್ಲೇಶ್ವರಂನ ಸಿದ್ದಾಶ್ರಮದ ಬಳಿ ಹೋಗಿ ವಿಚಾರಿಸಿದ್ದಾರೆ. ಆವಾಗ ಬಂದಿರುವವರು ವಂಚಕರು ಅನ್ನೋದು ಗೊತ್ತಾಗಿದೆ.
ಇದನ್ನೂ ಓದಿ: ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ! ನಾಲ್ವರ ಬಂಧನ
ಹಣ ಕೊಟ್ಟು ಮೋಸ ಹೋದ ಲಕ್ಷ್ಮಣ್, ಕೂಡಲೇ ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಕೆಲವು ವೈದ್ಯರು ಕೊಡುವ ಔಷಧಿಗಳಿಂದಲೇ ಕಾಯಿಲೆ ವಾಸಿಯಾಗುವುದಿಲ್ಲ. ಹೀಗಿರುವಾಗ ಜೀರಿಗೆ ನೀರು ಕುಡಿದರೆ ವಾಸಿಯಾಗುತ್ತಾ. ಇಂತಹ ಐನಾತಿಗಳ ಮಾತನ್ನ ನಂಬುವ ಮುಂಚೆ ಹುಷಾರಾಗಿರಿ. ಇಲ್ಲಾ ಅಂದರೆ ನೀವು ಸಾವಿರಾರ ರೂ ಕಳೆದುಕೊಳ್ಳಬಹುದು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:24 pm, Fri, 5 June 26




