ಪಾಕ್ ಉಗ್ರನ ಜತೆ ಯುವಕರಿಬ್ಬರ ನಂಟು ಬೆಸಿದಿದ್ಹೇಗೆ? ಇಲ್ಲಿದೆ ಕರ್ನಾಟಕ-ಪಾಕ್ ಜಾಲದ ರಹಸ್ಯ
ಪಾಕ್ನ ಅದೊಬ್ಬನ ವ್ಯವಸ್ಥಿತ ಸಂಚಿಗೆ ಭಾರತೀಯ ಅದರಲ್ಲೂ ಕರ್ನಾಟಕದ ಯುವಕರು ಟಾರ್ಗೆಟ್ ಆಗಿದ್ದಾರಾ ಎನ್ನುವ ಅನುಮಾನಗಳು ಸದ್ಯ ಶುರುವಾಗಿವೆ. ಏಕೆಂದರೆ ಗುಪ್ತಚರ ದಳದ ಮಾಹಿತಿ ಆಧರಿಸಿ ತುಮಕೂರು ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಇಬ್ಬರು ಯುವಕರು ಸಿಕ್ಕಿಬಿದ್ದಿದ್ದೇಗೆ, ಪಾಕ್ನ ಆ ವ್ಯಕ್ತಿಗೆ ಹಾಗೂ ಇವರಿಗೆ ಸಂಪರ್ಕವಾಗಿದ್ದು ಹೇಗೆ ಎಂಬ ಸ್ಫೋಟಕ ಮಾಹಿತಿ ಇಲ್ಲಿದೆ.

ತುಮಕೂರು, ಜೂನ್ 05: ದೇಶದ ಭದ್ರತೆಗೆ ಧಕ್ಕೆ ತರಲು ಸಂಚು ರೂಪಿಸಿದ್ದ ಪಾಕಿಸ್ತಾನ ಮೂಲದ ಮೋಸ್ಟ್ ವಾಂಟೆಡ್ ಉಗ್ರ ರಾಣಾ ಉನೇನ್ ಎಂಬಾತನ ವ್ಯವಸ್ಥಿತ ಜಾಲವನ್ನು ಕೇಂದ್ರ ಗುಪ್ತಚರ ಇಲಾಖೆ ಖಚಿತ ಮಾಹಿತಿ ಆಧರಿಸಿ ತುಮಕೂರು (tumakuru) ನಗರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಪಾಕ್ ಉಗ್ರನೊಂದಿಗೆ ಕಳೆದ ಕೇವಲ 20 ದಿನಗಳಿಂದ ನಿರಂತರ ಸಂಪರ್ಕದಲ್ಲಿದ್ದು ಆಂತರಿಕ ಭದ್ರತೆಗೆ ಕುತ್ತು ತರಲು ಯತ್ನಿಸುತ್ತಿದ್ದ ಆಪಾದನೆ ಮೇಲೆ, ತುಮಕೂರಿನ ಅಲ್ಲಾಬಕ್ಷು ಹಾಗೂ ದಾವಣಗೆರೆಯಲ್ಲಿ ತಲೆಮರೆಸಿಕೊಂಡಿದ್ದ ಜಮೀರ್ ಖಾನ್ ಎಂಬ ಇಬ್ಬರು ಯುವಕರನ್ನು ಉಗ್ರ ನಿಗ್ರಹ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.
ಮುಖ್ಯಾಂಶಗಳು
- ಪಾಕ್ ಉಗ್ರನ ಜಾಲಕ್ಕೆ ಬಿದ್ದ ರಾಜ್ಯದ ಯುವಕರು
- ಇನ್‌ಸ್ಟಾಗ್ರಾಮ್ ಟು ವಾಟ್ಸ್ ಆ್ಯಪ್ ಗ್ರೂಪ್ ಮೂಲಕ ಸಂಪರ್ಕ
- ಇಬ್ಬರು ಯುವಕರನ್ನು ಬಂಧಿಸಿದ ಪೊಲೀಸರು
ವ್ಯವಸ್ಥಿತ ಸಂಚಿಗೆ ಭಾರತೀಯ ಯುವಕರು ಟಾರ್ಗೆಟ್?
ಪಾಕಿಸ್ತಾನದ ಅದೊಂದು ವ್ಯವಸ್ಥಿತ ಸಂಚಿಗೆ ಭಾರತೀಯ ಯುವಕರು ಟಾರ್ಗೆಟ್ ಆಗಿದ್ದಾರಾ ಅನ್ನೋ ಬಲವಾದ ಅನುಮಾನ ಈಗ ಶುರುವಾಗಿದೆ. ಏಕೆಂದರೆ ಗುಪ್ತಚರ ದಳ ನೀಡಿದ ಸ್ಪೋಟಕ ಮಾಹಿತಿ ಆಧರಿಸಿ ತುಮಕೂರು ಪೊಲೀಸರು ಇಬ್ಬರು ಯುವಕರನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರು ಕೇವಲ 20 ದಿನಗಳಲ್ಲಿ ನಡೆಸಿದ ಚರ್ಚೆಗಳು, ಈಗ ಹತ್ತಾರು ಆತಂಕಕಾರಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಮುದಾಯದ ಒಗ್ಗಟ್ಟು ಮುಖ್ಯ ಎಂದು ವಾಟ್ಸ್ ಆ್ಯಪ್ ಗ್ರೂಪ್‌ಗಳನ್ನು ಮಾಡಿಕೊಂಡು ಬ್ರೈನ್ ವಾಶ್ ಮಾಡುತ್ತಿದ್ದ ಪಾಕಿಸ್ತಾನಿ ಉಗ್ರನ ಭೀಕರ ತಂತ್ರ ಈಗ ಬಯಲಾಗಿದ್ದು, ಪೊಲೀಸರ ತನಿಖೆ ತೀವ್ರಗೊಂಡಿದೆ.
ಇದನ್ನೂ ಓದಿ: ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರ ಚಿಕಿತ್ಸೆ ಫಲಿಸದೆ ಸಾವು!
ರಾಣಾ ಉನೇನ್ ಈತ ಸದ್ಯ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್. ಪಾಕಿಸ್ತಾನ ಮೂಲದ ಈ ಉಗ್ರ ಭಾರತದ ಹಲವು ಮುಗ್ಧ ಯುವಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ, ವಿಧ್ವಂಸಕ ಕೃತ್ಯಗಳಿಗೆ ಸಂಘಟನೆ ಕಟ್ಟುತ್ತಿದ್ದ ಅನ್ನೋ ಆಘಾತಕಾರಿ ಸತ್ಯ ಈಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇನ್‌ಸ್ಟಾಗ್ರಾಮ್ ಮುಖಾಂತರ ಪರಿಚಯ
ಅಷ್ಟಕ್ಕೂ ಪೊಲೀಸರ ಬಲೆಗೆ ಬಿದ್ದಿರುವವರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಸಾಮಾನ್ಯ ಯುವಕರು. ಇವರಿಗೆ ಕಳೆದ ಒಂದು ತಿಂಗಳ ಹಿಂದೆ ಪ್ರತ್ಯೇಕವಾಗಿ ಇನ್‌ಸ್ಟಾಗ್ರಾಮ್ ಮುಖಾಂತರ ರಾಣಾ ಜೊತೆ ಪರಿಚಯವಾಗಿದೆ. ನಂತರ ಎಕ್ಸ್ನಲ್ಲಿ ಹಲವು ಸಲ ಚಾಟ್ ಮಾಡಿದ್ದಾರೆ. ನಂತರ ವಾಟ್ಸ್ ಆ್ಯಪ್ ಗ್ರೂಪ್ ಒಂದಕ್ಕೆ ಸೇರಿಕೊಂಡಿದ್ದಾರೆ. ಆರಂಭದಲ್ಲಿ ಇಸ್ಲಾಂ ಧರ್ಮದ ಕುರಿತು ಸಂದೇಶ, ಪ್ರವಾದಿಗಳ ಮಾತುಗಳನ್ನು ಚರ್ಚೆ ಮಾಡಿದ್ದ ರಾಣಾ, ನಂತರ ನಾವೆಲ್ಲಾ ಒಟ್ಟಾಗಬೇಕು ಅಂತೆಲ್ಲಾ ಪ್ರಚೋದಿಸಿ, ಕ್ರಮೇಣ ದೇಶದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಚರ್ಚೆ ಆರಂಭಿಸಿದ್ದ ಎನ್ನಲಾಗಿದೆ.
ಪುಣೆ ಮೌಲ್ವಿ ಹತ್ಯೆಗೆ ಪ್ರತೀಕಾರದ ಸ್ಕೆಚ್
ಇನ್ನು ಒಗ್ಗಟ್ಟಿನ ಸಂದೇಶ ನೀಡಿದ್ದ ರಾಣಾ ಪುಣೆಯಲ್ಲಿ ನಡೆದಿದ್ದ ಮೌಲ್ವಿ ಹತ್ಯೆಗೆ ಪ್ರತಿಕಾರದ ಮಾತುಗಳನ್ನಾಡಿದ್ದ ಎನ್ನಲಾಗಿದೆ. ಇದಕ್ಕೆ ಬೇಕಾದ ತಯಾರಿ ಬಗ್ಗೆ ಸಹ ಚರ್ಚೆ ನಡೆಸಿದ್ದ. ನಮ್ಮ ಸಮುದಾಯದವರೆಲ್ಲಾ ಒಗ್ಗಟ್ಟಾಗಿರಬೇಕು. ಯಾರನ್ನು ಯಾವ ಕಾರಣಕ್ಕೂ ಬಿಡಬಾರದು. ಪ್ರತಿಕಾರ ಇರಬೇಕೆಂದು ಹೇಳಿದ್ದನಂತೆ. ಇನ್ನು ದೇಶದ ಹಲವೆಡೆ ರಾಣಾ ಹಿಂಬಾಲಕರನ್ನು ಹೊಂದಿದ್ದು, ಅವರಲ್ಲಿ ಒಬ್ಬ ಅಲ್ಲಾಬಕ್ಷು ಹಾಗೂ ಜಮೀರ್ ಖಾನ್ನನ್ನು ಪರಿಚಯ ಮಾಡಿದ್ದನಂತೆ.
ದಾವಣಗೆರೆ ಎಸ್ಪಿ ಡಾ.ಎಚ್ ಟಿ ಶೇಖರ್ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ದಾವಣಗೆರೆ ಎಸ್ಪಿ ಡಾ.ಎಚ್ ಟಿ ಶೇಖರ್ ಮಾತನಾಡಿದ್ದು, ತುಮಕೂರು ಪೊಲೀಸರು ಬಂದಿದ್ದರು. ಸ್ಥಳೀಯ ಪೊಲೀಸರ ಸಹಕಾರದಿಂದ ಓರ್ವ ಯುವಕನನ್ನು ವಶಕ್ಕೆ ಪಡೆದಿರುವುದು ನಿಜ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ತುಮಕೂರು ಪೊಲೀಸರಿಗೆ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪ: ಕೋಲಾರದ ಬಾಲಕ ಅರೆಸ್ಟ್
ಸದ್ಯ ರಾಣಾ ಜೊತೆ ಈ ಇಬ್ಬರು ಯುವಕರ ಸಂಪರ್ಕದ ಮಾಹಿತಿ ತಿಳಿದ ಗುಪ್ತಚರ ಇಲಾಖೆ ತುಮಕೂರು ನಗರ ಪೊಲೀಸರಿಗೆ ಮಾಹಿತಿ ನೀಡಿತ್ತು. ಮಾಹಿತಿ ಆಧರಿಸಿ ತುಮಕೂರಿನಲ್ಲಿ ಅಲ್ಲಾಬಕ್ಷು ಹಾಗೂ ದಾವಣಗೆರೆಯಲ್ಲಿ ಜಮೀರ್ ಖಾನ್ನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ರಾಣಾನ ಹಿನ್ನೆಲೆ ಹಾಗೂ ಯಾವ ಸಂಘಟನೆಯಲ್ಲಿ ಈತ ತೊಡಗಿದ್ದಾನೆಂಬ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ಚುರುಕುಗೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 pm, Fri, 5 June 26




