ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದ ಪತಿ: ಪ್ರಭಾವಿ ಸಚಿವರ ಆಪ್ತರಿಂದಲೇ ನಡೆಯಿತಾ ದೋಖಾ?
ಮದುವೆಯಾದ ಮೊದಲ ದಿನವೇ "ನೀ ನನಗೆ ಇಷ್ಟವಿಲ್ಲ" ಎಂದು ಪತ್ನಿಯನ್ನ ದೂರ ತಳ್ಳಿ, 'ತಲಾಕ್' ನಿಷೇಧದ ನಡುವೆಯೂ ತಲಾಕ್ ನೀಡಿ ವರದಕ್ಷಿಣೆ ಹಾಗೂ ದೈಹಿಕ ಹಿಂಸೆ ನೀಡಿದ ಆರೋಪ ಬೆಂಗಳೂರಿನಲ್ಲಿ ಕೇಳಿ ಬಂದಿದೆ. ಪ್ರಕರಣ ಸಂಬಂಧ ದೂರು ನೀಡಿ 8 ತಿಂಗಳಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದು, ಆರೋಪಿಗಳು ಪ್ರಭಾವಿ ಸಚಿವರ ಕಡೆಯವರು ಎಂದೂ ದೂರಿದ್ದಾಳೆ.

ಮುಖ್ಯಾಂಶಗಳು
- ಮದುವೆಯಾದ ಮೊದಲ ದಿನವೇ ಪತ್ನಿಗೆ ಶಾಕ್ ಕೊಟ್ಟ ಪತಿ
- ನೀ ನನಗೆ ಇಷ್ಟವಿಲ್ಲವೆಂದು ಹೇಳಿ ಪತ್ನಿಗೆ ಪತಿಯಿಂದ ತಲಾಖ್
- ದೂರು ನೀಡಿ 8 ತಿಂಗಳಾದರೂ ಕ್ರಮ ಕೈಗೊಳ್ಳದ ಪೊಲೀಸರು?
ಬೆಂಗಳೂರು, ಆಗಸ್ಟ್ 11: ಮದುವೆಯಾದ ಮೊದಲ ದಿನವೇ ನೀ ನನಗೆ ಇಷ್ಟ ಇಲ್ಲ ಎಂದು ಪತ್ನಿಗೆ ಪತಿ ತಿಳಿಸಿದ್ದು, ತಲಾಕ್ ಬ್ಯಾನ್ ಆಗಿದ್ರು ತಲಾಕ್ ನೀಡಿ ದೂರ ನಡೆದಿದ್ದಾನೆ. ಸಾಲದ್ದಕ್ಕೆ ಪತಿ ಮತ್ತು ಕುಟುಂಬಸ್ಥರು ಹಿಂಸೆ ನೀಡುತ್ತಿದ್ದಾರೆ ಎಂದು ನವ ವಿವಾಹಿತೆ ದೂರು ನೀಡಿ 8 ತಿಂಗಳಾದರೂ ಪೊಲೀಸರು ಕ್ರಮ ಕೈಗೊಳ್ಳದ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ದೂರು ನೀಡಿದ್ದಕ್ಕೆ, ಪರಿಹಾರ ಕೇಳಿದ್ದಕ್ಕೆ ಪತಿ ಕಡೆಯಿಂದ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.
2025ರ ಜೂನ್ನಲ್ಲಿ ನಡೆದಿದ್ದ ವಿವಾಹ
ಶೇಕ್ ಅಫ್ರಾನ್ ಎಂಬಾತನ ವಿರುದ್ಧ ಯುವತಿ ದೂರಿದ್ದು, 2025ರ ಜೂನ್ನಲ್ಲಿ ಇವರಿಬ್ಬರ ಮದುವೆ ಆಗಿತ್ತು. ವಿವಾಹದ ವೇಳೆ ಕಾರು ಸೇರಿದಂತೆ ಸಾಕಷ್ಟು ವರದಕ್ಷಿಣೆಯನ್ನು ಯುವತಿ ಕಡೆಯವರು ಶೇಕ್ ಅಫ್ರಾನ್ಗೆ ನೀಡಿದ್ದರು. ಹೀಗಿದ್ದರೂ ಬೇರೆ ಯುವತಿ ಜೊತೆಗೆ ಆತ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಯುವತಿಗೆ ಹಿಂಸೆ ನೀಡುತ್ತಿದ್ದ. ಅಲ್ಲದೆ ಆತನ ಜೊತೆಗೆ ಕುಟುಂಬಸ್ಥರೂ ಮಸಾಜ್ ಮಾಡುವಂತೆ ಕಿರುಕುಳ ನೀಡುತ್ತಿದ್ದರು. ಕೈ ಮೇಲೆ ಬಿಸಿನೀರು ಸುರಿದು ಚಿತ್ರಹಿಂಸೆ ಕೊಟ್ಟಿದ್ದರು. ನಿನ್ನನ್ನು ಮದುವೆ ಮಾಡಿಸಿ ಮನೆಗೆ ಕರೆತಂದಿದ್ದು, ಮನೆ ಕೆಲಸ ಮಾಡಲು. ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಬೆದರಿಸಿರೋದಾಗಿ ಆರೋಪಿಸಿ ನವೆಂಬರ್ನಲ್ಲಿ ಯುವತಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ನೇಪಾಳಿ ಕುಟುಂಬ ನಂಬಿ ಕೆಟ್ಟ ಮಾಲೀಕ: ಉಂಡ ಮನೆಗೇ ಕನ್ನ ಹಾಕಿದ ಕೆಲಸಗಾರರು
ಕೇಸ್ ದಾಖಲಿಸಲು ಲಂಚ ಪಡೆದಿದ್ದ ಪೊಲೀಸ್?
ಇನ್ನು ಪತಿ ಮನೆಯವರ ಕಿರುಕುಳ ಸಂಬಂಧ ಪ್ರಕರಣ ದಾಖಲಿಸಲು ಸಂತ್ರಸ್ತ ಯುವತಿ ಬಳಿ ಅಂದಿನ ಆಗ್ನೇಯ ಮಹಿಳಾ ಠಾಣಾ ಇನ್ಸ್ಪೆಕ್ಟರ್ 1.2 ಲಕ್ಷ ರೂ. ಲಂಚ ಪಡೆದಿದ್ದರು ಎಂದೂ ದೂರಲಾಗಿದೆ. ಜೊತೆಗೆ ಆರೋಪಿಗಳು ಪ್ರಭಾವಿ ಸಚಿವರೊಬ್ಬರ ಕಡೆಯವರು ಎಂಬ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಸಚಿವರ ಆಪ್ತ ಸಹಾಯಕನೇ ತಮ್ಮ ಅಣ್ಣನ ಮಗ ಎಂದು ಹೇಳಿಸಿ ಈ ಮದುವೆ ಮಾಡಿಸಿದ್ದರು. ಹೀಗಾಗಿ ನಮಗಾದ ಅನ್ಯಾಯದ ಬಗ್ಗೆ ಕೇಳಲು ಹೋದರೆ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಯುವತಿ ಕುಟುಂಬ ದೂರಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:45 am, Tue, 11 August 26




