AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐದಕ್ಕೂ ಹೆಚ್ಚು ಹುಲಿಗಳು ಸಾವನ್ನಪ್ಪಿದ್ದ ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಹುಲಿ ಕಳೇಬರ ಪತ್ತೆ

ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿಯ ಅರ್ಧ ಕಳೇಬರ ಪತ್ತೆಯಾಗಿದ್ದು, ಕಳ್ಳಬೇಟೆಗಾರರ ಕೈವಾಡದ ಅನುಮಾನ ಸೃಷ್ಟಿಯಾಗಿದೆ. ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ಬಳಿ ಮಣ್ಣಿನಲ್ಲಿ ಹುದುಗಿಸಿದ್ದ ಹುಲಿಯ ತಲೆ, ಭುಜ ಮತ್ತು ಮುಂಗಾಲುಗಳು ಲಭ್ಯವಾಗಿವೆ. ಈ ಹಿಂದೆ 5 ಹುಲಿಗಳು ಸಾವಿಗೀಡಾಗಿದ್ದ ಘಟನೆಯ ನಂತರ ಮತ್ತೆ ಇಂತಹ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಐದಕ್ಕೂ ಹೆಚ್ಚು ಹುಲಿಗಳು ಸಾವನ್ನಪ್ಪಿದ್ದ ಮಲೆಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಮತ್ತೆ ಹುಲಿ ಕಳೇಬರ ಪತ್ತೆ
ಸಾಂದರ್ಭಿಕ ಚಿತ್ರ ಮತ್ತು ಬಲಚಿತ್ರದಲ್ಲಿ ಹುಲಿಯ ಕಳೇಬರ
ಸೂರಜ್ ಪ್ರಸಾದ್ ಎಸ್.ಎನ್
| Updated By: Ganapathi Sharma|

Updated on: Oct 03, 2025 | 12:01 PM

Share

ಚಾಮರಾಜನಗರ, ಅಕ್ಟೋಬರ್ 3: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದಲ್ಲಿ (Malai Mahadeshwara Wildlife Sanctuary) 5 ಹುಲಿಗಳು (Tigers) ಸಾವಿಗೀಡಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಆ ನಂತರ ಹುಲಿಗಳ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಂಡಿತ್ತು. ಆದರೆ, ಇದೀಗ ಮಾದಪ್ಪನ ಬೆಟ್ಟದ ತಪ್ಪಲಲ್ಲಿ ಮತ್ತೆ ಬೇಟೆಗಾರರು ಸಕ್ರಿಯರಾಗಿರುವ ಅನುಮಾನ ಸೃಷ್ಟಿಯಾಗಿದೆ. ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಗ್ರಾಮದ ಹತ್ತಿರ ಭೂಮಿಯಲ್ಲಿ ಮಣ್ಣಿನಲ್ಲಿ ಮರೆಮಾಡಿ ಇಡಲಾಗಿದ್ದ ಹುಲಿಯ ಅರ್ಧ ಕಳೇಬರ ಪತ್ತೆಯಾಗಿದೆ. ಹುಲಿಯ ತಲೆ, ಭುಜ, ಮುಂಗಾಲುಗಳು ಮಾತ್ರ ಲಭ್ಯವಾಗಿದೆ. ಉಳಿದ ಭಾಗಗಳು ನಾಪತ್ತೆಯಾಗಿದೆ. ಈ ಘಟನೆ ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಪಿಸಿಸಿಎಫ್ ತಂಡದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ. ಪಿಸಿಸಿಎಫ್ ತಂಡದ ಸ್ಮಿತಾ ಬಿಜ್ಜೂರು ಅಧಿಕಾರಿಗಳ ನೇತೃತ್ವದಲ್ಲಿ 8 ದಿನಗಳಲ್ಲಿ ವರದಿ ಸಲ್ಲಿಸಿ, ಹುಲಿಯ ಹಂತಕರನ್ನು ಪತ್ತೆಮಾಡಲು ಮುಂದಾಗಬೇಕು ಎಂದು ಸಚಿವ ಖಂಡ್ರೆ ಸೂಚಿಸಿದ್ದಾರೆ.

ಮಲೆಮಹದೇಶ್ವರ ವನ್ಯಜೀವಿಧಾಮದಲ್ಲಿ ಕಳ್ಳಬೇಟೆ ಘಟನೆ ಬಗ್ಗೆ ಸ್ಥಳೀಯರು ಮತ್ತು ಪರಿಸರ ಸಂರಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸರ ಇಲಾಖೆ ಮತ್ತು ವನ್ಯಜೀವಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದೇನು?

ಹುಲಿ ಕಳೇಬರ ಸಿಕ್ಕಿದ ವಿಚಾರವಾಗಿ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅಧಿಕಾರಿಗಳು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಹನೂರು ಗಸ್ತಿನಲ್ಲಿರುವ ಪಚ್ಚೆದೊಡ್ಡಿ ಗ್ರಾಮದ ಹತ್ತಿರ ಗುರುವಾರ (2ನೇ ಅಕ್ಟೋಬರ್ 2025) ಸಂಜೆ ನಮ್ಮ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಸತ್ತ ಹುಲಿಯ ಅರ್ಧ ಕಳೇಬರವೊಂದು ಮಣ್ಣಿನಲ್ಲಿ ಹುದುಗಿಸಿದ್ದು ಪತ್ತೆಯಾಗಿದೆ. ಹುಲಿಯ ತಲೆ, ಭುಜ ಮುಂದಿನ ಕಾಲುಗಳು ಪತ್ತೆಯಾಗಿದ್ದು ಉಳಿದ ಭಾಗಗಳು ಇನ್ನು ಪತ್ತೆಯಾಗಿಲ್ಲ. ಸಿಕ್ಕಿರುವ ಕಳೇಬರದ ಭಾಗದಲ್ಲಿ ಉಗುರುಗಳು ಮತ್ತು ಹಲ್ಲುಗಳು ಇದ್ದು, ಕಳೇಬರದ ಇನ್ನುಳಿದ ಭಾಗವನ್ನು ಹುಡುಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹುಲಿ ಸಂತತಿ ಅಪಾಯದಲ್ಲಿ: ಐದು ವರ್ಷಗಳಲ್ಲಿ 75 ವ್ಯಾಘ್ರಗಳ ಸಾವು

ಇದನ್ನು ಕಳ್ಳ ಬೇಟೆಯ ಪ್ರಕರಣವೆಂದೇ ಪರಿಗಣಿಸಿ ತನಿಖೆ ಮಾಡಲಾಗುತ್ತಿದೆ. ಸೀನ್ ಆಫ್ ಕೈಂ (SoCo), ಶ್ವಾನ ತನಿಖಾ ದಳ ಮತ್ತಿತರ ಸಹಾಯದಿಂದ ಅರಣ್ಯ ಇಲಾಖೆ ತಕ್ಷಣವೇ ತನಿಖೆ ಪ್ರಾರಂಭಿಸಿದೆ. ಪ್ರಕರಣಕ್ಕೆ ಕಾರಣ ಮತ್ತು ಕಾರಣಕರ್ತರನ್ನು ಅದಷ್ಟು ಬೇಗೆ ಪತ್ತೆ ಹಚ್ಚಲಾಗುವುದು. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿಯನ್ನು ನಂತರ ನೀಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ