ರಾಜ್ಯಪಾಲರ ಪ್ರಾಸಿಕ್ಯೂಷನ್​ಗೆ ತಿರುಗೇಟು ನೀಡಲು ಸಿಎಂ ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್

| Updated By: Ganapathi Sharma

Updated on: Aug 20, 2024 | 11:58 AM

ಮುಡಾ ಹಗರಣದಲ್ಲಿ ತಾತ್ಕಾಲಿಕವಾಗಿ ಬಚಾವ್ ಆಗಿರುವ ಸಿಎಂ ಸಿದ್ದರಾಮಯ್ಯ ಇದೀಗ ಮುಂದಿನ ನಡೆಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಶುಕ್ರವಾರ ಹೈಕಮಾಂಡ್ ಭೇಟಿಯಾಗಲಿರುವ ಅವರು, ಕೇಂದ್ರದ ಎನ್​ಡಿಎ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಪ್ಲಾನ್ ಮಾಡುತ್ತಿದ್ದಾರೆ. ಇದಕ್ಕಾಗಿ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಭವನ ದುರ್ಬಳಕೆ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ.

ರಾಜ್ಯಪಾಲರ ಪ್ರಾಸಿಕ್ಯೂಷನ್​ಗೆ ತಿರುಗೇಟು ನೀಡಲು ಸಿಎಂ ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್
ಸಿದ್ದರಾಮಯ್ಯ
Image Credit source: PTI
Follow us on

ಬೆಂಗಳೂರು, ಆಗಸ್ಟ್ 20: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್​​​ನಲ್ಲಿ ತಾತ್ಕಾಲಿಕ ರಿಲೀಫ್ ದೊರೆತಿದೆ. ಆದಾಗ್ಯೂ ಪ್ರಕರಣದಲ್ಲಿ ಸಿದ್ದರಾಮಯ್ಯ ನಿರಾಳ ಎನ್ನುವಂತಿಲ್ಲ. ಹೀಗಾಗಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಗೆ ತಿರುಗೇಟು ನೀಡಲು ಅವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ರಾಜ್ಯಪಾಲರು ಕ್ಲಾಸಿಕ್ಯೂಷನ್ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಭವನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೌಂಟರ್ ಕೊಡಲು ಅವರು ಸಿದ್ಧತೆ ನಡೆಸುತ್ತಿದ್ದಾರೆ.

ವಿವಿಧ ರಾಜ್ಯಗಳಲ್ಲಿ ರಾಜ್ಯಪಾಲರ ರಾಜಕೀಯ ಅನುಮತಿ ನೀಡಿರುವ ಮಾಹಿತಿ ಸಂಗ್ರಹಿಸುತ್ತಿರುವ ಅವರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದಲೂ ಸಲಹೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಲ್ಲ ರೀತಿಯಲ್ಲಿ ಮಾಹಿತಿ ಕಲೆಹಾಕಿದ ನಂತರ ಅವುಗಳನ್ನು ಕಾಂಗ್ರೆಸ್ ಹೈಕಮಾಂಡ್​ಗೆ ಸಿದ್ಧರಾಮಯ್ಯ ರವಾನಿಸಲಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಇದೇ ಶುಕ್ರವಾರ ದೆಹಲಿಗೆ ತೆರಳಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ಪ್ರಾಸಿಕ್ಯೂಷನ್ ಸಂಬಂಧಪಟ್ಟಂತೆ ವರಿಷ್ಠರಿಗೆ ಎಲ್ಲ ಮಾಹಿತಿ ನೀಡಲಿರುವ ಸಿದ್ಧರಾಮಯ್ಯ, ಕೇಂದ್ರದ ವಿರುದ್ಧ ಕಾನೂನು ಹೋರಾಟಕ್ಕೆ ವರಿಷ್ಠರ ಬಳಿ ಮಾಡುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್ ವಿಚಾರವಾಗಿ ಸೋಮವಾರ ಹೈಕೋರ್ಟ್​​​ನಲ್ಲಿ ವಿಚಾರಣೆ ನಡೆದಿತ್ತು. ಇಡೀ ದಿನ ಆತಂಕದಲ್ಲಿದ್ದ ಸಿದ್ದರಾಮಯ್ಯ, ಖಾಸಗಿ ಹೋಟೆಲ್‌ನಲ್ಲಿ ವಕೀಲರ ಜೊತೆಗೆ ಚರ್ಚಿಸಿದ್ದರು. ಬಳಿಕ ಕೋರ್ಟ್‌ನಲ್ಲಿ ವಾದ ಪ್ರತಿವಾದ ಮುಗಿಯುವವರೆಗೂ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು. ಹಿರಿಯ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಮತ್ತು ಕಪಿಲ್ ಸಿಬಲ್ ಜೊತೆ ಚರ್ಚಿಸಿದ್ದರು. ಕೋರ್ಟ್ ಆದೇಶದ ಬಳಿಕವೂ ವಕೀಲರ ಜೊತೆಗೆ ಹೋಟೆಲ್‌ನಲ್ಲೇ ಚರ್ಚಿಸಿದ್ದರು. ಬಳಿಕ ಕಾವೇರಿ ನಿವಾಸಕ್ಕೆ ತೆರಳಿದ್ದರು.

ಇದನ್ನೂ ಓದಿ: ಸತ್ಯಮೇವ ಜಯತೆ: ಹೈಕೋರ್ಟ್​ ಆದೇಶದ ಬಳಿಕ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ಇಲ್ಲಿದೆ

ಆಗಸ್ಟ್‌ 29 ರವರೆಗೂ ಸಿಎಂಗೆ ಹೈಕೋರ್ಟ್​ನಲ್ಲಿ ತಾತ್ಕಾಲಿಕ ರಿಲೀಫ್‌ ಸಿಕ್ಕಿತ್ತು. ಮುಂದಿನ 10 ದಿನ ಸಿಎಂ ವಿರುದ್ಧ ಯಾವುದೇ ತನಿಖೆ, ಯಾವುದೇ ವಿಚಾರಣೆ ನಡೆಸುವಂತಿಲ್ಲ. ಯಾವುದೇ ಎಫ್ಐಆರ್ ದಾಖಲಾದರೂ ಆಗಸ್ಟ್ 29ರವರೆಗೂ ಸಿಎಂರನ್ನ ವಿಚಾರಣೆ ನಡೆಸುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ. ಸದ್ಯದ ಮಟ್ಟಿಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿರುವ ಸಿದ್ದರಾಮಯ್ಯ, ಮುಂದಿನ ದಿನಗಳಲ್ಲಿ ಸಮಸ್ಯೆಯಿಂದ ಪಾರಾಗುವುದಕ್ಕೆ ತಂತ್ರ ಹೆಣೆಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Tue, 20 August 24