KSRTC BMTC Strike: ನಾಳೆಯೂ ಮುಂದುವರಿಯಲಿದೆ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 11, 2021 | 5:42 PM

ನಮ್ಮನ್ನು ಸರ್ಕಾರಿ ನೌಕರರು ಅಂತ ಒಪ್ಪಲು ಆಗಲ್ಲ ಅಂತ ಹೇಳ್ತಿದ್ದಾರೆ. ಹಾಗಿದ್ರೆ ಆಂಧ್ರದಲ್ಲಿ ಹೇಗೆ ಒಪ್ಪಿಕೊಂಡ್ರು? ಇಚ್ಛಾಶಕ್ತಿಯಿದ್ರೆ ಎಲ್ಲವೂ ಸಾಧ್ಯವಿದೆ ಎಂದು ಆಗ್ರಹಿಸಿದರು.

KSRTC BMTC Strike: ನಾಳೆಯೂ ಮುಂದುವರಿಯಲಿದೆ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್ (ಎಡ); ಬಿ.ಎಸ್​. ಯಡಿಯೂರಪ್ಪ (ಬಲ)
Follow us on

ಬೆಂಗಳೂರು: ಈಗಾಗಲೇ ಸಾರಿಗೆ ನಿಗಮಗಳ ಸಿಬ್ಬಂದಿ ನಡೆಸುತ್ತಿರುವ ಮುಷ್ಕರ 5 ದಿನ ಕಳೆದಿದೆ. ನಾಳೆಯೂ (ಏಪ್ರಿಲ್ 12) ಮುಷ್ಕರ ಮುಂದುವರೆಯುತ್ತದೆ. ಸರ್ಕಾರಕ್ಕೆ ಉಪ ಚುನಾವಣೆ ಬಗ್ಗೆ ಚಿಂತೆ ಇದೆ, ಆದರೆ ನೌಕರರ ಸಮಸ್ಯೆ ಕಾಣಿಸುತ್ತಿಲ್ಲ. ಇಂತಹ ಸರ್ಕಾರ ಇರುವುದು ಈ ರಾಜ್ಯದ ಜನರ ದುರಂತ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಸಾರಿಗೆ ನೌಕರರ ಸಭೆ ಮುಕ್ತಾಯಗೊಂಡ ನಂತರ ಆಕ್ರೋಶ ವ್ಯಕ್ತಪಡಿಸಿದರು.

ಕೊಟ್ಟ ಮಾತು ಜಾರಿ ಮಾಡದೇ ಸರ್ಕಾರ ತಪ್ಪು ಮಾಡುತ್ತಿದೆ. ಮಾರ್ಚ್​​​ 16ರಂದು ಸರ್ಕಾರಕ್ಕೆ ನೋಟಿಸ್​ ಕೊಟ್ಟಿದ್ದೆವು. ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶವನ್ನೂ ಕೊಟ್ಟಿದ್ದೇವೆ. ಸರ್ಕಾರದ ಮಾತುಕತೆಗಳು ವಿಫಲವಾದಾಗ ಚಳುವಳಿಗಳು ಆರಂಭವಾಗಿವೆ. ಸಿಎಂ ಯಡಿಯೂರಪ್ಪ ಅಥವಾ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನಮ್ಮನ್ನು ಚರ್ಚೆಗೆ ಕರೆದಿಲ್ಲ ಎಂದು ಟೀಕಿಸಿದರು.

ಸರ್ಕಾರ ಸ್ಪಂದಿಸದಿರುವುದು ದುರಂತದ ಸಂಗತಿ. ನಮಗೆ ಅರ್ಧಕೂಲಿ, ಅರೆಹೊಟ್ಟೆ ಊಟ ಹಾಕುತ್ತಿದ್ದೀರಿ. ಮನೆಯಲ್ಲಿ ಯುಗಾದಿ ಊಟ ಮಾಡಲು ಆಗುತ್ತಿಲ್ಲ ಅಂತ ಹೇಳೋಕೆ ನಿಯಮಗಳ ಅಡ್ಡಿ ಬರುತ್ತಾ? ಇದಕ್ಕೆ ಎಸ್ಮಾ ಜಾರಿ ಆಗುತ್ತಾ? ಸಾರಿಗೆ ಸಂಸ್ಥೆಯ ನೌಕರರ ಸಮುದಾಯ ದೊಡ್ಡಸಂಖ್ಯೆಯಲ್ಲಿದೆ. ಇವರ ಕಷ್ಟ ನಿವಾರಣೆಗೆ ಸರ್ಕಾರ ಇಚ್ಛಾಶಕ್ತಿ ತೋರಬೇಕು. 6ನೇ ವೇತನ ಆಯೋಗ ಜಾರಿ ಮಾಡ್ತೀವಿ ಅಂತ ಸರ್ಕಾರವೇ ಒಪ್ಪಿದೆ. ನಮ್ಮನ್ನು ಸರ್ಕಾರಿ ನೌಕರರು ಅಂತ ಒಪ್ಪಲು ಆಗಲ್ಲ ಅಂತ ಹೇಳ್ತಿದ್ದಾರೆ. ಹಾಗಿದ್ರೆ ಆಂಧ್ರದಲ್ಲಿ ಹೇಗೆ ಒಪ್ಪಿಕೊಂಡ್ರು? ಇಚ್ಛಾಶಕ್ತಿಯಿದ್ರೆ ಎಲ್ಲವೂ ಸಾಧ್ಯವಿದೆ ಎಂದು ಆಗ್ರಹಿಸಿದರು.

ಎಸ್ಮಾ ತಂದ್ರೆ ಭಸ್ಮ ಆಗ್ತಾರೆ: ಎಐಟಿಯುಸಿ
ಆಂಧ್ರದಲ್ಲಿ, ತೆಲಂಗಾಣದಲ್ಲಿ ಮಾಡಿದ್ದಾರೆ. ಅಲ್ಲಿ ಮಾಡಿದ ಮೇಲೆ ನೀವ್ಯಾಕೆ ಮಾಡೋಕೆ ಆಗ್ತಿಲ್ಲ. ಅವರು ಮಾಡಿಲ್ಲ ಅಂದ್ರೆ ನಾವು ಕೇಳ್ತಾ ಇರ್ಲಿಲ್ಲ. 6ನೇ ವೇತನಶ್ರೇಣಿ ಕೊಡ್ತೀವಿ ಅಂತ ಸರ್ಕಾರವೇ ಒಪ್ಪಿಕೊಂಡಿತ್ತು. ಆದರೆ ಈಗ ಕೊಡ್ತಿಲ್ಲ. ಸಂಬಳ ಕೊಡದೇ ಕಿರುಕುಳ ಕೊಡ್ತಿದ್ದೀರಿ. ಸಾರಿಗೆ ನಿಗಮಗಳ ನೌಕರರ ಕುಟುಂಬಗಳು ಸಂಕಷ್ಟದಲ್ಲಿವೆ. ಸಾರಿಗೆ ಸಂಸ್ಥೆ ಕಾರ್ಮಿಕರನ್ನು ಎದುರು ಹಾಕಿಕೊಂಡವರು ಯಾರೂ ಉಳಿದಿಲ್ಲ. ಎಸ್ಮಾ ತಂದ್ರೆ ಅವರೇ ಭಸ್ಮವಾಗ್ತಾರೆ ಎಂದು ಸಾರಿಗೆ ನಿಗಮದ ಐಎನ್​ಟಿಯುಸಿ ಪ್ರಧಾನ ಕಾರ್ಯದರ್ಶಿ ಬೋರ್ ಶೆಟ್ಟಿ ಎಚ್ಚರಿಸಿದರು.

ಉಪಚುನಾವಣೆಯಲ್ಲಿ ಸಿಎಂ ಬ್ಯುಸಿ: ವಿಜಯ್​ಕುಮಾರ್
6ನೇ ವೇತನ ಆಯೋಗ ಸಾಧ್ಯವಾಗದಿದ್ರೆ ಪರ್ಯಾಯವಾಗಿ ಏನು ಪರಿಹಾರ ಕೊಡ್ತೀರಿ ಅಂತ ತಿಳಿಸಿ. ಮುಖ್ಯಮಂತ್ರಿಗಳು ಉಪಚುನಾವಣೆ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಲಕ್ಷಾಂತರ ನೌಕರರ ಬದುಕು ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರ ತನ್ನ ಮುಖವನ್ನೂ ಉಳಿಸಿಕೊಂಡು ವಿನ್-ವಿನ್ ಪರಿಹಾರ ಮಾಡಬೇಕು ಎಂದು ಕಾರ್ಮಿಕ ಮುಖಂಡ ವಿಜಯ್​ಕುಮಾರ್ ಹೇಳಿದರು.

ಇದನ್ನೂ ಓದಿ: ನಾಳೆಯಿಂದ ಎಂದಿನಂತೆ ಬಸ್​ಗಳು ಸಂಚರಿಸಲಿವೆ: ಕೆಎಸ್‌ಆರ್‌ಟಿಸಿ ಮುಖ್ಯ ವ್ಯವಸ್ಥಾಪಕ ಪ್ರಭಾಕರ್‌ ರೆಡ್ಡಿ ವಿಶ್ವಾಸ

ಇದನ್ನೂ ಓದಿ: Explainer | ಆಂಧ್ರ ಸಾರಿಗೆ ನಿಗಮ ಸಿಬ್ಬಂದಿ ಈಗ ರಾಜ್ಯ ಸರ್ಕಾರಿ ನೌಕರರು: ಏನಿದು ‘ಆಂಧ್ರ ಮಾಡೆಲ್‘?