ಕೋಲಾರ, ಮಾ.18: ಲೋಕಸಭೆ ಚುನಾವಣೆಗೆ (Lok Sabha Election) 2024 ದಿನಾಂಕ ಘೋಷಣೆ ಹಿನ್ನೆಲೆ ಇಡೀ ದೇಶಾದ್ಯಂತ ನೀತೆ ಸಂಹಿತೆ (Code Of Conduct) ಜಾರಿಯಾಗಿದ್ದು, ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿರುವ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ಚುನಾವಣಾ ಅಕ್ರಮಗಳನ್ನು ತಡೆಯಲು ಹದ್ದಿನ ಕಣ್ಣಿಟ್ಟಿದ್ದಾರೆ. ಇಂದು ದಾವಣಗೆರೆ, ಕೋಲಾರ ಸೇರಿದಂತೆ ಕರ್ನಾಟಕದ (Karnataka) ಕೆಲವು ಜಿಲ್ಲೆಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ, ವಾಹನ, ಸೀರೆಗಳನ್ನು ಜಪ್ತಿ ಮಾಡಲಾಗಿದೆ.
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಲೋಕಿಕೆರೆ ಚೆಕ್ ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಚುನಾವಣಾಧಿಕಾರಿಗಳು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.89 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಚೆಕ್ ಪೋಸ್ಟ್ ಮುಖ್ಯಸ್ಥ ಮಲ್ಲಿಕಾರ್ಜುನ ನೇತೃತ್ವದಲ್ಲಿ ಎಸ್ಎಸ್ಟಿ ತಂಡವು 3,89,780 ನಗದು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ: ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 3.82 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಬಳಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ಕಿರೇಸೂರದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಓಂ ಪ್ರಕಾಶ್ ಎಂಬವರ ಕಾರನ್ನು ತಪಾಸಣೆ ನಡೆಸಲಾಗಿದೆ. ಈ ವೇಳೆ ಹಣ ಪತ್ತೆಯಾಇದ್ದು, ಇದನ್ನು ನೋಡಲ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಚೆಕ್ಪೋಸ್ಟ್ ಬಳಿ ಚಿಂತಾಮಣಿಯಿಂದ ಆಂಧ್ರಕ್ಕೆ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 1.90 ಲಕ್ಷ ರೂಪಾಯಿ ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಚಿಂತಾಮಣಿ ಮೂಲದ ಕೃಷ್ಣಪ್ಪಗೆ ಸೇರಿದ ಹಣ, ಕಾರು ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದಲ್ಲಿ ಲೋಕಸಭಾ, ವಿಧಾನಸಭಾ ಚುನಾವಣೆ ಹಿನ್ನೆಲೆ ಅಂತಾರಾಜ್ಯ ಗಡಿ ಭಾಗದ ಚೆಕ್ಪೋಸ್ಟ್ನಲ್ಲಿ ಇನ್ಸ್ಪೆಕ್ಟರ್ ಗೊರವಿನಕೊಳ್ಳ ನೇತೃತ್ವದಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಬೆಳಗಾವಿಯಲ್ಲಿ 2 ಲಕ್ಷ ರೂ. ಜಪ್ತಿ: ರಾಮನಗರದಲ್ಲಿ ಕುಕ್ಕರ್, ತವಾ ಹಂಚಿಕೆ ಆರೋಪ
ಬಾಗಲಕೋಟೆ: ಜಿಲ್ಲೆಯ ತೇರದಾಳ ಬಳಿಯ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದ 1.72 ಲಕ್ಷ ಹಣ ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಸಾಜಿದ್ ಅಹಮದ್ ನೇತೃತ್ವದಲ್ಲಿ ತೆರದಾಳ ಕಾಲುವೆ 4ರ ಬಳಿಯ ಚೆಕ್ ಪೋಸ್ಟ್ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮಾಹಿತಿ ನೀಡಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಎರಡು ಚೆಕ್ಪೋಸ್ಟ್ಗಳಲ್ಲಿ ಪೊಲೀಸರು ಹಾಗೂ ಚುನಾವಣಾಧಿಕಾರಿಗಳು ನಗದು ಮತ್ತು ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೊಪ್ಪ ತಾಲೂಕಿನ ಗಡಿಕಲ್ ಚೆಕ್ಪೋಸ್ಟ್ನಲ್ಲಿ 1 ಲಕ್ಷದ 20 ಸಾವಿರ ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಲಾಗಿದೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿಯ ಚೆಕ್ಪೋಸ್ಟ್ನಲ್ಲಿ 95 ಸಾವಿರ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಸೂಕ್ತ ದಾಖಲೆ ನೀಡದ ಹಿನ್ನೆಲೆ ಹಣ ಹಾಗೂ ಸೀರೆಗಳನ್ನು ಜಪ್ತಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Mon, 18 March 24