ಖಾಸಗಿ ಶಾಲೆಗಳ ಬೋಧನಾ ಶುಲ್ಕ ನಿಗದಿಗೆ ಸಮಿತಿ ರಚನೆ ಪ್ರಸ್ತಾಪ: ವಿರೋಧಿಸಿದ ಕ್ಯಾಮ್ಸ್, ಸ್ವಾಗತಿಸಿದ ರುಪ್ಸಾ

ಸರ್ಕಾರ ಸಮಿತಿ ರಚಿಸಿ ಶುಲ್ಕ ನಿಗದಿ ಪಡಿಸುವುದು ಒಳ್ಳೆಯ ನಿರ್ಧಾರವಾಗಿದ್ದು, ಸರ್ಕಾರದ ನಡೆಯನ್ನು ಅನುದಾನ ರಹಿತ ಶಾಲೆಗಳ ಸಂಘಟನೆ ರುಪ್ಸಾ ಸ್ವಾಗತಿಸಿದೆ. ಆದರೆ ಸರ್ಕಾರ ಗೊಂದಲದ ಮೇಲೆ ಗೊಂದಲ ಸೃಷ್ಟಿಸಬಾರದು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಶಾಲೆಗಳ ಬೋಧನಾ ಶುಲ್ಕ ನಿಗದಿಗೆ ಸಮಿತಿ ರಚನೆ ಪ್ರಸ್ತಾಪ: ವಿರೋಧಿಸಿದ ಕ್ಯಾಮ್ಸ್, ಸ್ವಾಗತಿಸಿದ ರುಪ್ಸಾ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರದ ಸಮಿತಿ ಸೂಚನೆಯಂತೆ ಶುಲ್ಕ ನಿಗದಿ ಪರಿಶೀಲನೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಖಾಸಗಿ ಶಾಲೆಗಳಿಗೆ ಲಾಭವಿಲ್ಲದೇ ಬೋಧನಾ ಶುಲ್ಕ ನಿಗದಿ ಮಾಡುವ ಹಕ್ಕಿದೆ. ಸರ್ಕಾರ ಸಮಿತಿ ರಚಿಸಿ ಶುಲ್ಕ ನಿಗದಿ ಮಾಡಲು ಆಗುವುದಿಲ್ಲ. ಸರ್ಕಾರದ ಈ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗುತ್ತೇವೆ. ನಾವು ಮತ್ತೆ ಕೋರ್ಟ್​ ಮೊರೆ ಹೋಗಬೇಕಾಗುತ್ತದೆ. ನಾವು ಎರಡು ವರ್ಷದ ಹಿಂದಿನ ಶುಲ್ಕ ಪಡೆಯುತ್ತಿದ್ದೇವೆ. ಸರ್ಕಾರ ಗೊಂದಲದ ಮೇಲೆ ಗೊಂದಲ ಸೃಷ್ಟಿಸಬಾರದು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರ ಸಮಿತಿ ರಚಿಸಿ ಶುಲ್ಕ ನಿಗದಿ ಪಡಿಸುವುದು ಒಳ್ಳೆಯ ನಿರ್ಧಾರವಾಗಿದ್ದು, ಸರ್ಕಾರದ ನಡೆಯನ್ನು ಅನುದಾನ ರಹಿತ ಶಾಲೆಗಳ ಸಂಘಟನೆ ರುಪ್ಸಾ ಸ್ವಾಗತಿಸಿದೆ. ಸರ್ಕಾರದ ಈ ನಿರ್ಧಾರದಿಂದ ವಿದ್ಯಾರ್ಥಿಗಳು, ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಅನುಕೂಲವಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಕಳೆದ ಬಾರಿಯೇ ಸರ್ಕಾರಕ್ಕೆ ಸಮಿತಿ ರಚಿಸುವಂತೆ ಹೇಳಲಾಗಿತ್ತು. ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಖಾಸಗಿ ಶಾಲೆಗಳ ಬೋಧನಾ ಶುಲ್ಕ ನಿಗದಿಗೆ ಸಮಿತಿ ರಚನೆ ಪ್ರಸ್ತಾಪ
ಖಾಸಗಿ ಶಾಲೆಗಳಲ್ಲಿನ ಬೋಧನಾ ಶುಲ್ಕ ವಿಚಾರವಾಗಿ ಕರ್ನಾಟಕ ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಈ ಬಗ್ಗೆ ಇಂದು (ಜೂನ್ 15) ಹೇಳಿಕೆ ನೀಡಿದ್ದಾರೆ. ಖಾಸಗಿ ಶಾಲೆಗಳಲ್ಲಿನ ಶುಲ್ಕ ನಿಗದಿ ಬಗ್ಗೆ ಸಮಿತಿ ರಚನೆ ಮಾಡುವಂತೆ ಪ್ರಸ್ತಾಪ ಮಾಡಲಾಗಿದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಸಮಿತಿ ರಚನೆ ಮಾಡಬೇಕು. ಬಳಿಕ, ಸಮಿತಿ ಸೂಚನೆಯಂತೆ ಶುಲ್ಕ ನಿಗದಿ ಮಾಡಲು ಪರಿಶೀಲನೆ ನಡೆಸಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ವಿಚಾರಣೆಯನ್ನು ಜೂನ್ 21ಕ್ಕೆ ಹೈಕೋರ್ಟ್ ನಿಗದಿಪಡಿಸಿದೆ.

ಶೇಕಡಾ 70ರಷ್ಟು ಶುಲ್ಕ ಪಡೆಯುವಂತೆ ಸರ್ಕಾರ ಆದೇಶಿಸಿತ್ತು. ಶೇಕಡಾ 30ರಷ್ಟು ಶುಲ್ಕ ರಿಯಾಯಿತಿ ನೀಡುವಂತೆ ಸೂಚಿಸಿತ್ತು. ಆದರೆ, ಇದರ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ರಿಟ್ ಅರ್ಜಿ ಸಲ್ಲಿಸಿತ್ತು. ಕೊವಿಡ್​ನಿಂದ ಪೂರ್ಣ ಶುಲ್ಕ ಭರಿಸಲು ಪೋಷಕರಿಗೆ ಕಷ್ಟವಾಗಬಹುದು. ಕೊರೊನಾ ಹಾಗೂ ಲಾಕ್​ಡೌನ್​ನಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಶುಲ್ಕದ ವಿಚಾರದಲ್ಲಿ ಸರ್ಕಾರ ಆದೇಶ ನೀಡಿತ್ತು.

ಇದೀಗ ಕರ್ನಾಟಕ ರಾಜ್ಯ ಸರ್ಕಾರದಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ ಸಲ್ಲಿಕೆಯಾಗಿದೆ. ಹೈಕೋರ್ಟ್​ಗೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಜೂನ್ 21ಕ್ಕೆ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ನಿಗದಿಪಡಿಸಿದೆ.

ಇದನ್ನೂ ಓದಿ: ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು, ಅಕ್ಟೋಬರ್ ಮೊದಲ ವಾರದಲ್ಲಿ ಪದವಿ ತರಗತಿಗೆ ದಾಖಲಾತಿ: ಡಿಸಿಎಂ ಅಶ್ವತ್ಥ್ ನಾರಾಯಣ 

School Fees: ಪೋಷಕರಿಂದ ಫೀಸ್ ವಸೂಲಿ ಮಾಡುವಲ್ಲಿ ಖಾಸಗಿ ಶಾಲೆಗಳ ಜತೆ ಖಾಸಗಿ ಫೈನಾನ್ಸ್​ಗಳು ಶಾಮೀಲು: ಸಚಿವ ಸುರೇಶ್ ಕುಮಾರ್

(Committee formation proposal for private school cams Opposed Rupsa welcomed)