ನವದೆಹಲಿ, (ಅಕ್ಟೋಬರ್ 24): ಬಾಕಿ ಉಳಿದಿದ್ದ ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಆಯ್ಕೆ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆದೇಶದ ಮೇರೆಗೆ ಎಐಸಿಸಿ ಜನರಲ್ ಸೆಕ್ರೆಟರಿ ಕೆಸಿ ವೇಣುಗೋಪಾಲ್ ಅವರು ಇಂದು (ಅಕ್ಟೋಬರ್ 24) ಅಧಿಕೃತ ಆದೇಶ ಹೊರಡಿಸಿದ್ದಾರೆ. ಇನ್ನು ಧಾರವಾಡ ಶಾಸಕ ವಿನಯ್ ಕುಲಕರ್ಣಿ ಪುತ್ರಿಗೆ ಟಿಕೆಟ್ ನೀಡಲಾಗುತ್ತೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದ್ರೆ, ಹೈಕಮಾಂಡ್ , ಅಂತಿಮವಾಗಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.
ಹಾನಗಲ್ ತಾಲೂಕಿನ ಬೊಮ್ಮನಳ್ಳಿ ಗ್ರಾಮದವರಾದ ಯಾಸೀರ್ ಅಹ್ಮದ್ ಖಾನ್ ಪಠಾಣ್ , ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ವಿರುದ್ಧ ಸೋಲುಕಂಡಿದ್ದರು. ಇದೀಗ ಉಪಚುನಾವಣೆಗೂ ಸಹ ಕಾಂಗ್ರೆಸ್, ಹೈಕಮಾಂಡ್ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರನ್ನೇ ಕಣಕ್ಕಿಳಿಸಿದೆ.
ಇದನ್ನೂ ಓದಿ: ಚನ್ನಪಟ್ಟಣ, ಸಂಡೂರು ಬೈ ಎಲೆಕ್ಷನ್: ಸಿಪಿ ಯೋಗೇಶ್ವರ್, ಅನ್ನಪೂರ್ಣ ತುಕಾರಾಂಗೆ ಕಾಂಗ್ರೆಸ್ ಟಿಕೆಟ್
ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಭಾರಿ ಪೈಪೋಟಿ ನಡೆದಿತ್ತು. ಕಳೆದ ಐದು ಚುನಾವಣೆಗಳಲ್ಲೂ ಸಹ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲಾಗಿದ್ದು, ಈ ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಕೂಗು ಕೇಳಿಬಂದಿದ್ದವು.
ಅಲ್ಪಸಂಖ್ಯಾ ಸಮುದಾಯದಿಂದ ಅಜ್ಜಂಫೀರ್ ಖಾದ್ರಿ ಹಾಗೂ ಯಾಸೀರ್ ಖಾನ್ ಪಠಾಣ್ ನಡುವೆ ಪೈಪೋಟಿ ಇತ್ತು. ಮತ್ತೊಂದೆಡೆ ಲಿಂಗಾಯತ ಸಮುದಾಯದಿಂದ ಸಂಜೀವ್ ನೀರಲಗಿ , ಸೋಮಣ್ಣ ಬೇವಿನಮರ ಅವರು ಟಿಕೆಟ್ಗಾಗಿ ಕಸರತ್ತು ನಡೆಸಿದ್ದರು. ಆದ್ರೆ, ಅಂತಿಮವಾಗಿ ಹೈಕಮಾಂಡ್ ಮತ್ತೆ ಯಾಸೀರ್ ಖಾನ್ ಪಠಾಣ್ ಅವರಿಗೆ ಮಣೆ ಹಾಕಿದೆ.
ಹಾವೇರಿ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಬೊಮ್ಮಾಯಿ ಅವರು ಸಂಸದರಾಗಿ ಆಯ್ಕೆಯಾಗಿದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಉಪಚುನಾವಣೆಗೆ ಬಿಜೆಪಿಯಿಂದ ಬೊಮ್ಮಾಯಿ ಅವರ ಪುತ್ರ ಭರತ್ ಕಣಕ್ಕಿಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್ನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಅವರು ಕಳೆದ ಚುನಾವಣೆಯಲ್ಲಿ ತಂದೆಯನ್ನು ಎದುರಿಸಿದ್ದರೆ ಈ ಉಪಚುನಾವಣೆಯಲ್ಲಿ ಪುತ್ರನನ್ನು ಎದುರಿಸಲಿದ್ದಾರೆ. ಆದ್ರೆ, ಫಲಿತಾಂಶ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Thu, 24 October 24