ಕಲಬುರಗಿ: ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ 3 ಕ್ಷೇತ್ರಗಳ ಉಪಚುನಾವಣೆ ಬಗ್ಗೆ ಬಿಜೆಪಿ ಧೃತಿಗೆಟ್ಟಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವ್ಯಾಪಕ ಬೆಂಬಲ ಸಿಗುತ್ತಿದೆ. ಇದನ್ನು ನೋಡಿ ಬಿಜೆಪಿಯವರು ಹಣ ಹಂಚುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕೂಡಲೇ ಚುನಾವಣಾ ಆಯೋಗ ಮಧ್ಯಪ್ರವೇಶಿಸಲಿ. ಹಣ ಹಂಚಿಕೆ ವಿಡಿಯೋಗಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ. ನಮ್ಮ ಕಾರ್ಯಕರ್ತರು ಈ ಬಗ್ಗೆ ದೂರು ನೀಡುತ್ತಾರೆ. ಈ ಹಿಂದೆ ನನ್ನ ಮತವನ್ನೇ ಅನರ್ಹ ಮಾಡಿದ್ದರು ಎಂದು ಕಿಡಿಕಾರಿದ್ದಾರೆ. ಈ ಚುನಾವಣೆ ಮುಗಿದ ಮೇಲೆ ಏನಾಗುತ್ತೆಂದು ಗೊತ್ತಿಲ್ಲ. ಆಗ ಈ ಎಲ್ಲಾ ಅಧಿಕಾರಿಗಳು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಾರಕೊಡದಲ್ಲಿ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿ
30 ಕೋಟಿ ಹಣ ಕೊಟ್ಟು ಬಿಜೆಪಿಯವರು ಎಂಎಲ್ಎಗಳನ್ನು ಖರೀದಿ ಮಾಡಿದರು. ಆಗ ಬಿ.ನಾರಾಯಣರಾವ್ ಅವರ ಮೇಲೆ ಒತ್ತಡ ಇತ್ತು. ಆದರೆ ಅವರು ಆಪರೇಷನ್ ಕಮಲಕ್ಕೆ ಒಳಗಾಲಿಲ್ಲ. ಬಸವಕಲ್ಯಾಣ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದರು. ಬಿಜೆಪಿಯವರು ಕಲ್ಯಾಣ ಕರ್ನಾಟಕ ಅಂತಾ ಹೆಸರು ಮಾತ್ರ ಬದಲಾವಣೆ ಮಾಡಿದರು. ಆದರೆ ಈ ಭಾಗದ ಅಭಿವೃದ್ಧಿ ಬಗ್ಗೆ ಅವರು ತೆಲೆಕೆಡಿಸಿಕೊಂಡಿಲ್ಲ. ಸಮಾಜವನ್ನು ಒಡೆಯಲು ಬಿಜೆಪಿ ನಿಂತಿದೆ ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ ಮತದಾರರಿಗೆ ಬಿಜೆಪಿಯಿಂದ ಹಣ ಹಂಚಿಕೆ ಆರೋಪ
ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಹಣ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಸ್ಕಿಯಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದಾರೆ. ಧ್ರುವನಾರಾಯಣ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆದಿದ್ದು, ಚುನಾವಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ಮಾಡಲಾಗಿದೆ. ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ಸರ್ಕಾರ ಅವೈಜ್ಞಾನಿಕ ಕಾನೂನುಗಳನ್ನು ತರುತ್ತಿದೆ; ಎಂ.ಲಕ್ಷ್ಮಣ್
ಅವೈಜ್ಞಾನಿಕವಾದ ಕಾನೂನುಗಳನ್ನ ಬಿಜೆಪಿ ಸರ್ಕಾರ ತರಲು ಪ್ರಯತ್ನಿಸುತ್ತಿದೆ. ಚುನಾವಣೆ ಪ್ರಚಾರಕ್ಕೆ ಸಾವಿರಾರು ಜನ ಸೇರುತ್ತಾರೆ. ಆಗ ಕೊರೊನಾದ ಆತಂಕ ಇರುವುದಿಲ್ಲವೇ? ಜಿಮ್‌ಗಳನ್ನ ಬಂದ್ ಮಾಡುತ್ತಾರೆ. ಜಿಮ್‌ಗೆ ಹೋದರೆ ಫಿಟ್ನೆಸ್ ಚೆನ್ನಾಗಿರುತ್ತದೆ. ತಲೆಬುಡ ಇರದ ಆದೇಶ ಜಾರಿಗೆ ತರುತ್ತಿದ್ದಾರೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಸ್ಕಿ ವಿಧಾನಸಭಾ ಉಪಚುನಾವಣೆ; ಪ್ರಚಾರದ ವೇಳೆ ಹಣ ಹಂಚಿಕೆ ಆರೋಪ, ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ
ಕೆಪಿಸಿಸಿ ಕಚೇರಿಯಿಂದಲೇ ಲೈಂಗಿಕ ಸಿಡಿ ಕೇಸ್ ನಿರ್ವಹಣೆಯಾಗುತ್ತಿದೆ: ಬಿಜೆಪಿ ಟ್ವೀಟ್