ಮಸ್ಕಿ ವಿಧಾನಸಭಾ ಉಪಚುನಾವಣೆ; ಪ್ರಚಾರದ ವೇಳೆ ಹಣ ಹಂಚಿಕೆ ಆರೋಪ, ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ
ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ತುರವಿಹಾಳಕ್ಕೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತುರವಿಹಾಳದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರು.
ರಾಯಚೂರು: ಏಪ್ರಿಲ್ 17ರಂದು ಮಸ್ಕಿ ವಿಧಾನಸಭಾ ಉಪಚುನಾವಣೆ ನಡೆಯಲಿದ್ದು ಪ್ರಚಾರದ ಭರಾಟೆ ಜೋರಾಗಿದೆ. ರಾಜಕಾರಣಿಗಳು ಮಸ್ಕಿಗೆ ತೆರಳಿ ತಮ್ಮದೇ ಶೈಲಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಎಲ್ಲಾ ಪಕ್ಷದವರಿಗೂ ಇದು ಪ್ರತಿಷ್ಠೆಯ ಕಣ. ಆದ್ರೆ ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ತುರವಿಹಾಳದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ತುರವಿಹಾಳಕ್ಕೆ ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತುರವಿಹಾಳದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಹಾಸನ ಮೂಲದ ಇಬ್ಬರು ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ಹೀಗಾಗಿ 200 ಜನರ ಗುಂಪು ಬಿಜೆಪಿ ಪ್ರಚಾರಕ್ಕೆ ಅಡ್ಡಿ ಪಡಿಸಿ ಹಣ ಹಂಚುತ್ತಿದ್ದ, ಬಿ.ವೈ.ವಿಜಯೇಂದ್ರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ನಿನ್ನೆ ತಡ ರಾತ್ರಿ ತುರವಿಹಾಳ ಠಾಣೆ ಮುಂದೆ ಕಾಂಗ್ರೆಸ್ ಮುಖಂಡರು ಧರಣಿ ನಡೆಸಿದ್ದು ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ನಡೆಸಿದ ಮೂವರು ಸೇರಿ ಇತರರ ವಿರುದ್ಧ ಕೇಸ್ ದಾಖಲಾಗಿದೆ.
ಹಣ ಹಂಚಿಕೆ ವಿಡಿಯೋ ವೈರಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿ ಬಂದ ಬೆನ್ನಲ್ಲೆ ಮಸ್ಕಿಯಲ್ಲಿ ವೋಟ್‌ಗೆ 200 ರೂಪಾಯಿಯಂತೆ ಹಣ ಹಂಚಿಕೆ ಮಾಡ್ತಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಹಾಸನ, ಶಿವಮೊಗ್ಗ, ಬೆಂಗಳೂರಿನ ಬಿಜೆಪಿ ಕಾರ್ಯಕರ್ತರು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ತೆರಳಿ ಹಣ ಹಂಚಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಸ್ಕಿ ಉಪಚುನಾವಣಾ ಪ್ರಚಾರದ ವೇಳೆ ಮಿರ್ಚಿ ಕರಿದ ಶಾಸಕ ರೇಣುಕಾಚಾರ್ಯ
(BJP And Congress Workers Fight During Maski by Election Campaign in Raichur)
Published On - 8:03 am, Fri, 9 April 21