ಯಾದಗಿರಿ ಜಿಲ್ಲೆಯಲ್ಲಿದೆ 101 ದೇವಸ್ಥಾನ; ಪುರಾಣ ಪ್ರಸಿದ್ಧ ದೇವಾಲಯವನ್ನು ಸಂರಕ್ಷಿಸುವಂತೆ ಗ್ರಾಮಸ್ಥರ ಒತ್ತಾಯ

ಹಗರಟಗಿ ಗ್ರಾಮದಲ್ಲಿ ಮತ್ತೊಂದು ವಿಶೇಷವೆಂದರೆ ಧರ್ಮರಾಯನ ಗರ್ಭಗುಡಿಯಲ್ಲಿರುವ ಲಿಂಗವು ಎಡಗಡೆ ಮುಖ ಹೊಂದಿದೆ. ಬೇರೆ ದೇವಸ್ಥಾನಗಳಲ್ಲಿ ಬಲಗಡೆ ಮುಖ ಹೊಂದಿದೆ.

ಯಾದಗಿರಿ ಜಿಲ್ಲೆಯಲ್ಲಿದೆ 101 ದೇವಸ್ಥಾನ; ಪುರಾಣ ಪ್ರಸಿದ್ಧ ದೇವಾಲಯವನ್ನು ಸಂರಕ್ಷಿಸುವಂತೆ ಗ್ರಾಮಸ್ಥರ ಒತ್ತಾಯ
ಯಾದಗಿರಿಯ ಪುರಾಣ ಪ್ರಸಿದ್ಧ ದೇವಾಲಯ
Follow us
preethi shettigar
| Updated By: Skanda

Updated on: Apr 09, 2021 | 9:36 AM

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮದಲ್ಲಿ 101 ದೇವಸ್ಥಾನವಿದ್ದು, ಅದರ ಪಕ್ಕದಲ್ಲಿ 101 ಬಾವಿಗಳಿರುವುದು ವಿಶೇಷವಾಗಿದೆ. ಪುರಾಣ ಪ್ರಸಿದ್ಧವಾದ ಈ ಗ್ರಾಮದಲ್ಲಿ ಚಾಲುಕ್ಯರ ಶೈಲಿಯ ದೇವಸ್ಥಾನ, ಅವರಿಗೆ ಸಂಬಂಧಿಸಿದ ಲಾಂಛನ ಇರುವುದನ್ನು ಕಾಣಬಹುದಾಗಿದೆ. ದೇವಸ್ಥಾನಗಳನ್ನು ಕಲ್ಲು, ಮಣ್ಣಿನಿಂದ ನಿರ್ಮಿಸಲಾಗಿದ್ದು, ದೇಗುಲಕ್ಕೆ ನೀರಿನ ಅವಶ್ಯಕತೆ ಇರುವುದರಿಂದ ದೇಗುಲ ಕಟ್ಟುವ ಜಾಗದಲ್ಲಿ ಬಾವಿ ತೊಡಲಾಗಿದೆ. ಹೀಗಾಗಿ ದೇವಸ್ಥಾನಗಳ ಪಕ್ಕದಲ್ಲಿ ಬಾವಿಗಳಿವೆ. ಇನ್ನು ಗ್ರಾಮದಲ್ಲಿ ವಿಶೇಷವಾಗಿ 101 ಕೆರೆಗಳು ಇದ್ದವು ಎನ್ನುತ್ತಾರೆ ಗ್ರಾಮಸ್ಥರು.

ಪಂಚ ಪಾಂಡವರ ದೇಗುಲ ಗ್ರಾಮದಲ್ಲಿ ಪಂಚ ಪಾಂಡವರ ದೇಗುಲಗಳೂ ಇವೆ. ಧರ್ಮರಾಯ, ಅರ್ಜುನ, ಭೀಮ, ನಕುಲ, ಸಹದೇವ, ಕುಂತಿ ದೇವಿ ದೇವಸ್ಥಾನ ಇದೆ. ಪಾಂಡವರು ವನವಾಸದ ವೇಳೆ ಈ ಮಾರ್ಗವಾಗಿ ಬಂದಿದ್ದರು. ಹೀಗಾಗಿ ಪಾಂಡವರ ದೇಗುಲ ನಿರ್ಮಿಸಿರಬೇಕು ಎಂಬುದು ಗ್ರಾಮಸ್ಥರ ನಂಬಿಕೆ. ಪ್ರತಿ ವರ್ಷ ಗ್ರಾಮದಲ್ಲಿ ಯುಗಾದಿ ವೇಳೆ ಧರ್ಮರಾಯನ ಜಾತ್ರೆ ನಡೆಯುತ್ತದೆ. ಚಿಕ್ಕ ರಥವನ್ನು ಮಹಿಳೆಯರು ಎಳೆದರೆ, ದೊಡ್ಡ ರಥವನ್ನು ಪುರುಷರು ಎಳೆಯುತ್ತಾರೆ. ಇದರಿಂದ ಇಲ್ಲಿ ಸ್ತ್ರೀಯರಿಗೂ ರಥ ಎಳೆಯುವ ಧಾರ್ಮಿಕ ಕೈಂಕರ್ಯವನ್ನು ಕಲ್ಪಿಸಿಕೊಡಲಾಗಿದೆ.

ನಿಧಿ ಆಸೆಗೆ ದೇಗುಲಗಳು ಹಾಳು ಹಗರಟಗಿ ಗ್ರಾಮದಲ್ಲಿರುವ ದೇವಸ್ಥಾನಗಳನ್ನ ನಿಧಿಗಳ್ಳರು ನಿಧಿ ಆಸೆಗಾಗಿ ಹಾಳುಗಡೆವಿದ್ದಾರೆ. ಇದರಿಂದ ಹಲವಾರು ದೇಗುಲಗಳು ಶಿಥಿಲಗೊಂಡಿವೆ. ಹೆಸರಿಗೆ ಮಾತ್ರ ಹೇಳಿಕೊಳ್ಳಲು ದೇಗುಲ, ಬಾವಿ, ಕೆರೆಗಳಿವೆ. ಆದರೆ ಬಹುತೇಕ ದೇಗುಲಗಳು ಹಾಗೂ ಬಾವಿಗಳು ನಿಧಿ ಆಸೆಯಿಂದ ಹಾಳು ಮಾಡಿದ್ದಾರೆ.

historical temple

ಧರ್ಮರಾಯ ದೇವಾಲಯದ ಚಿತ್ರಣ

ಎಡಗಡೆ ಮುಖವಿರುವ ಲಿಂಗ ಗ್ರಾಮದಲ್ಲಿ ಮತ್ತೊಂದು ವಿಶೇಷವೆಂದರೆ ಧರ್ಮರಾಯನ ಗರ್ಭಗುಡಿಯಲ್ಲಿರುವ ಲಿಂಗವು ಎಡಗಡೆ ಮುಖ ಹೊಂದಿದೆ. ಬೇರೆ ದೇವಸ್ಥಾನಗಳಲ್ಲಿ ಬಲಗಡೆ ಮುಖ ಹೊಂದಿದೆ. ಇಂತಹ ಚರಿತ್ರೆ ಹೊಂದಿರುವ ಗ್ರಾಮದ ದೇವಸ್ಥಾನ ಮತ್ತು ಬಾವಿಗಳನ್ನು ಸಂರಕ್ಷಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ

ಹಗರಟಗಿ ಹೆಸರಿನ ಹಿಂದೆ ರೋಚಕ ಕತೆ ವನವಾಸದ ವೇಳೆ ಗ್ರಾಮದಲ್ಲಿ ಕುಂತಿದೇವಿ, ಪಂಚ ಪಾಂಡವರು ನೆಲೆಸಿದ್ದರು. ಈ ವೇಳೆ ರಾಕ್ಷಸನೊಬ್ಬ ಗ್ರಾಮಸ್ಥರಿಗೆ ತೊಂದರೆ ಮಾಡಿದ್ದನು. ಅನ್ನ ಮತ್ತು ಒಬ್ಬ ಮನುಷ್ಯ ಅವನಿಗೆ ಆಹಾರವಾಗಬೇಕಿತ್ತು. ಬ್ರಾಹ್ಮಣ ಕುಟುಂಬದ ವಿಧೆವೆಗೆ ಒಬ್ಬ ಮಗನಿದ್ದನು. ಅಂದು ಅವರ ಪಾಳಿ ಬಂದಿತು. ವಿಧವೆ ಇದನ್ನು ತಿಳಿದು ರೋದಿಸ ತೊಡಗಿದಳು. ಬಾವಿಗೆ ನೀರು ಸೇದಲು ಬಂದಿದ್ದ ಕುಂತಿ ದೇವಿ ನಡೆದ ವಿಷಯವನ್ನು ತಿಳಿದು ನನಗೆ ಐದು ಮಕ್ಕಳಿದ್ದಾರೆ. ಅವರಲ್ಲಿ ಒಬ್ಬರನ್ನು ಕಳಿಸುತ್ತೇನೆ ನೀನು ಧೈರ್ಯದಿಂದ ಇರು ಎಂದು ಸಮಾಧಾನ ಪಡಿಸಿದ್ದರು. ಮನೆಗೆ ಬಂದು ಭೀಮನಿಗೆ ಈ ವಿಷಯ ತಿಳಿಸಿದ ಕುಂತಿದೇವಿ, ಮಗನನ್ನು ಅನ್ನದ ಸಮೇತ ಕಳಿಸಿದಳು. ಅನ್ನ ತೆಗೆದುಕೊಂಡು ಹೋದ ಭೀಮ ಅನ್ನ ತಿಂದು ನೀರು ಕುಡಿದು ರಾಕ್ಷಾನಿಗೆ ಎದುರಾಗಿ ನಿಂತನು. ಇದನ್ನು ಕಂಡ ರಾಕ್ಷಸ ಭೀಮನ ಮೇಲೆ ಮುಗಿಬೀಳಲು ಭೀಮನು ಒಂದು ಏಟು ಹಾಕಿದನು. ಇದರಿಂದ ರಾಕ್ಷಸನು ಸತ್ತನು. ನಂತರ ಗ್ರಾಮದೊಳಗೆ ಬಂದ ಭೀಮನನ್ನು ಗ್ರಾಮಸ್ಥರು ಪ್ರಶ್ನಿಸಿದ್ದು, ಭೀಮನು ಹಗುರ ಏಟು ಹೊಡೆದು ರಾಕ್ಷಸನನ್ನು ಸಾಯಿಸಿದೆ ಎಂದಿದ್ದನಂತೆ. ಅಂದಿನಿಂದ ಆ ಊರಿನ ಹೆಸರು ಹಗರಟಗಿ ಎಂದು ಬದಲಾಯಿತು ಎಂದು ಇಲ್ಲಿನ ಗ್ರಾಮಸ್ಥರಾದ ಗುರು ಬಂಡಿ ಹೇಳುತ್ತಾರೆ.

historical temple

ಪುರಾತನ ಕಾಲದ ದೇವಾಲು ಶಿಥಿಲಗೊಂಡಿರುವುದು

ನಮ್ಮ ಹಿರಿಯರು ಅಂತರ್ಜಲ ಮೂಲವನ್ನು ತಿಳಿದುಕೊಂಡಿದ್ದರು. ಹೀಗಾಗಿ ಬಾವಿ, ಕೆರೆ ಕಟ್ಟಿ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಿದ್ದರು. ಇನ್ನು ಭೀಮನ ದೇವಸ್ಥಾನದ ಕಂಬಗಳಲ್ಲಿ ತಣ್ಣನೆಯ ನೀರು ಜಿನುಗಿದಂತೆ ಭಾಸವಾಗುತ್ತದೆ. ಇಲ್ಲಿ ಎಲ್ಲ ಕಾಲದಲ್ಲಿ ತಂಪಿನ ವಾತಾವರಣ ಇರುತ್ತದೆ ಎಂದು ಗ್ರಾಮಸ್ಥರಾದ ಗುರು ಬಂಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಲಕ್ಷ್ಮಿ ರಂಗನಾಥ ಜೋಡಿಯಾಗಿರುವ ಅಪರೂಪದ ದೇವಾಲಯದಲ್ಲಿ ನಡೆಯುತ್ತೆ ಮದ್ಯದ ನೈವೇದ್ಯ; ಭಕ್ತರ ಪಾಲಿಗೆ ಇದು ಎಣ್ಣೆಯಲ್ಲ ತೀರ್ಥ

(Villagers insist to preserve the famous temple of Purana in yadgir)