ಸಾರಿಗೆ ಮುಷ್ಕರ; ಕೋಡಿಹಳ್ಳಿ ಚಂದ್ರಶೇಖರ್ಗೆ 10 ಲಕ್ಷ ರೂ. ಪರಿಹಾರ ಕೇಳಿ ಲೀಗಲ್ ನೋಟಿಸ್ ನೀಡಿದ ಬಿ.ಇ. ವಿದ್ಯಾರ್ಥಿನಿ
ವಿದ್ಯಾರ್ಥಿನಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಿಎಂಟಿಸಿ ಎಂಡಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಬೆಂಗಳೂರು: ಸಾರಿಗೆ ಇಲಾಖೆಯ ನೌಕರರು ಆರನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ಹೆಚ್ಚಳ ಮಾಡ್ಬೇಕು ಎಂದು ಪಟ್ಟು ಹಿಡಿದಿದ್ದು ಏಪ್ರಿಲ್ 07 ರಿಂದ ಮುಷ್ಕರ ಕೈಗೊಂಡಿದ್ದಾರೆ. ಇಂದಿಗೆ ಈ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಯಾವುದೇ ಸರ್ಕಾರಿ ಸಾರಿಗೆ ರಸ್ತೆಗೆ ಇಳಿಯುತ್ತಿಲ್ಲ. ಕೊರೊನಾದಿಂದ ಕಂಗಾಲಾದ ಜನ ಸಾರಿಗೆ ಇಲ್ಲದೆ ದುಪ್ಪಟ್ಟು ಹಣ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದರಿಂದ ನೊಂದ ವಿದ್ಯಾರ್ಥಿನಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಿಎಂಟಿಸಿ ಎಂಡಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಕೆಂಗೇರಿ ಜೆಎಸ್ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ಕಾಲೇಜಿನಲ್ಲಿ ಬಿಇ ಮೊದಲ ಸೆಮಿಸ್ಟರ್ ಓದುತ್ತಿರುವ ತುಮಕೂರಿನ ಪಾವನ ಎಂಬ ವಿದ್ಯಾರ್ಥಿನಿ ಲೀಗಲ್ ನೋಟಿಸ್ ಕಳಿಸಿದ್ದಾರೆ. ವಕೀಲ ರಮೇಶ್ ನಾಯಕ್ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಿಎಂಟಿಸಿ ಎಂಡಿಗೆ ಪರಿಹಾರ ಕೇಳಿ ನೋಟಿಸ್ ನೀಡಿದ್ದಾರೆ. ನಾವು ಬಿಎಂಟಿಸಿ ವಾರ್ಷಿಕ ಪಾಸ್ ಖರೀದಿಸಿದ್ದೇವೆ. ಆದರೆ ನಮ್ಮ ಬಳಿ ಪಾಸ್ ಇದ್ದರೂ ಹಣ ಕೊಟ್ಟು ಸಂಚಾರ ಮಾಡಬೇಕಾಗುತ್ತಿದೆ. 2 ದಿನದಿಂದ ಹೆಚ್ಚುವರಿ ಹಣ ನೀಡಿ ಬಸ್‌ನಲ್ಲಿ ಸಂಚರಿಸುತ್ತಿದ್ದೇವೆ. ಪಾಸ್ ಹೊಂದಿರುವರಿಗೆ ಬಸ್ ಸೌಲಭ್ಯ ಒದಗಿಸಿಲ್ಲ. ಇದು ಸೇವಾ ನ್ಯೂನತೆ, ಅನುಚಿತ ವ್ಯಾಪಾರ ಪದ್ಧತಿ. ಹೀಗಾಗಿ ₹10 ಲಕ್ಷ ಪರಿಹಾರ ನೀಡಬೇಕೆಂದು ವಿದ್ಯಾರ್ಥಿನಿ ಪಾವನ ಕೋಡಿಹಳ್ಳಿ ಚಂದ್ರಶೇಖರ್ರಿಗೆ ಲೀಗಲ್ ನೋಟಿಸ್ ಕಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಸರ್ಕಾರಿ ಸಾರಿಗೆ ಸಂಚಾರ ಬಂದ್ ಆಗಿದ್ದು ಇದರಿಂದ ಜನ ಸಾಮಾನ್ಯರು ಪರದಾಡುತ್ತಿದ್ದಾರೆ. ಖಾಸಗಿ ಬಸ್, ಆಟೋ, ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ. ಆದ್ರೆ ಮುಷ್ಕರದ ಲಾಭ ಪಡೆದು ಖಾಸಗಿ ಬಸ್ಗಳು, ಆಟೋ ಚಾಲಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು ಇದರ ವಿರುದ್ಧ ಧ್ವನಿ ಎತ್ತಿ ವಿದ್ಯಾರ್ಥಿನಿಯೊಬ್ಬರು ನೋಟಿಸ್ ಕಳಿಸಿದ್ದಾರೆ.
ಇದನ್ನೂ ಓದಿ: ಕೋಡಿಹಳ್ಳಿ ಚಂದ್ರಶೇಖರ್ ಮಾಡೋದೆಲ್ಲ ಕೇವಲ ಸ್ವಾರ್ಥಕ್ಕೆ, ಸಾರಿಗೆ ನೌಕರರ ಪರ ಮುಷ್ಕರವನ್ನು ನಿಲ್ಲಿಸಬೇಕು: ಸುಭಾಷ ಐಕೂರ
(Student Send Legal Notice to Kodihalli Chandrashekar Claiming Rs 10 Lakhs)
Published On - 9:21 am, Fri, 9 April 21