
ಬೆಂಗಳೂರು, ಡಿಸೆಂಬರ್ 23: ಕರ್ನಾಟಕ ಕಾಂಗ್ರೆಸ್ (Congress) ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಯಾರನ್ನೇ ಕೇಳಿದರೂ ಎಲ್ಲರ ಬೆರಳು ಸೀದಾ ಹೈಕಮಾಂಡ್ ಕಡೆಗೆ ತಿರುಗುತ್ತದೆ. ಆದರೆ ಗೊಂದಲ ಬಗೆಹರಿಸಿಬೇಕಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಅರ್ಥಾತ್ ಹೈಕಮಾಂಡ್ನ ಮುಖ್ಯ ನಾಯಕನೇ ‘ಗೊಂದಲ ಸೃಷ್ಟಿ ಮಾಡಿದ್ದು ಹೈಕಮಾಂಡ್ ಅಲ್ಲ. ಅಲ್ಲಿ ಸ್ಥಳೀಯವಾಗಿ ಏನು ಆಗಿದೆಯೋ ಅಲ್ಲೇ ಸೆಟಲ್ ಮಾಡಿಕೊಳ್ಳಿ’ ಎಂದಿದ್ದಾರೆ.
ಆದರೆ ಖರ್ಗೆ ಅವರ ಲೋಕಲ್ ಸೂತ್ರವನ್ನು ಸಿದ್ದರಾಮಯ್ಯ ಸುತರಾಂ ಒಪ್ಪುವ ಹಾಗೆ ಕಾಣಿಸುತ್ತಿಲ್ಲ. ಡಿಕೆ ಶಿವಕುಮಾರ್ ನಿವಾಸಕ್ಕೆ ಬ್ರೇಕ್ಫಾಸ್ಟ್ ಮೀಟಿಂಗ್ಗೆ ಬಂದಂದಿನಿಂದ ಅವರು ಹೈಕಮಾಂಡ್ ನಾಯಕರು, ರಾಹುಲ್ ಗಾಂಧಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ಬದ್ಧ ಎಂದು ಹೇಳುತ್ತಲೇ ಇದ್ದಾರೆ.
ಅದಾದ ಬಳಿಕ ನಾಯಕತ್ವ ಬದಲಾವಣೆ ವಿಚಾರದಲ್ಲಿ ಏನೆಲ್ಲ ಗೊಂದಲ ಎದ್ದಿದೆ. ಸಿದ್ದರಾಮಯ್ಯ ಬಣ ಹಾಗೂ ಡಿಕೆ ಬಣದ ಆಡಿದ ಮಾತುಗಳೇನು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಹೈಕಮಾಂಡ್ನ ಭಾಗವೇ ಆಗಿರುವ ಮಲ್ಲಿಕಾರ್ಜುನ ಖರ್ಗೆ ಭಾನುವಾರ, ನೀವು ಸೃಷ್ಟಿಮಾಡಿರುವ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದಿದ್ದಾರೆ. ಆದರೆ, ಸಿದ್ದರಾಮಯ್ಯ ಮತ್ತೆ ಮಾತನಾಡಿ, ರಾಹುಲ್ ಗಾಂಧಿಯೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಮತ್ತೊಮ್ಮೆ ದಿಲ್ಲಿಗೆ ತಮ್ಮ ಚೆಂಡು ಎಸೆದಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಹಿಂದೆ ದೆಹಲಿಗೆ ಹೋಗಿದ್ದಾಗ, ‘ನಾನು ಪಕ್ಷ ಕಟ್ಟಿದ್ದೇನೆ, ಬ್ಲ್ಯಾಕ್ ಮೇಲ್ ಮಾಡಲ್ಲ’ ಎಂದಿದ್ದರು. ಇದಕ್ಕೆ ಸೋಮವಾರ ಪ್ರತಿಕ್ರಿಯೆ ನೀಡಿದ್ದ ಖರ್ಗೆ, ನಾನೇ ಪಕ್ಷ ಕಟ್ಟಿದೆ, ಒಬ್ಬರಿಂದ ಪಕ್ಷ ಎಂಬುದನ್ನು ಬಿಡಬೇಕು ಎಂದಿದ್ದಾರೆ. ಖರ್ಗೆ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಖರ್ಗೆ ಅವರು ಹೇಳಿದ್ದು ‘ಎಲ್ಲರೂ ಒಪ್ಪಬೇಕಿರುವ ವಿಚಾರ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಶನಿವಾರ ರಾತ್ರಿ ಸಿಎಂ ಆಪ್ತ ಕೆಎನ್ ರಾಜಣ್ಣ ನಿವಾಸಕ್ಕೆ ಹೋಗಿ ಭೇಟಿಯಾಗಿದ್ದರು. ನಂತರ ಸೋಮವಾರ ಡಿಕೆ ಶಿವಕುಮಾರ್ ಇದ್ದ ಕಡೆಗೇ ಬಂದು ರಾಜಣ್ಣ ಭೇಟಿಯಾಗಿದ್ದಾರೆ. ಈ ಮಧ್ಯೆ, ಸೋಮವಾರ ಮಾತನಾಡಿದ ಡಿಕೆ ಶಿವಕುಮಾರ್, ರಾಜಣ್ಣಗೆ ಸಿದ್ದರಾಮಯ್ಯಗಿಂತ ನಾನೇ ಆಪ್ತ. ಅವರನ್ನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಾಡಿದ್ದೇ ನಾನು ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ, ಅಧ್ಯಕ್ಷ ಮಾಡಿದ್ದು ಅಂದಿನ ಸಿಎಂ ಎಸ್ಎಂ ಕೃಷ್ಣ ಎಂದಿದ್ದಾರೆ.
ಇಷ್ಟೇ ಅಲ್ಲದೆ ಸಂಕ್ರಾಂತಿ ಕ್ರಾಂತಿ ವಿಚಾರವಾಗಿಯೂ ಮಾತನಾಡಿರುವ ಸಿಎಂ, ಅದೆಲ್ಲ ಮುಗಿದು ಹೋಗಿದೆ. ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪುನರುಚ್ಚರಿಸಿದ್ದಾರೆ. ಆಡಳಿತ ಪಕ್ಷದ ಈ ಗೊಂದಲವೇ ವಿಪಕ್ಷ ನಾಯಕರಿಗೆ ಅಸ್ತ್ರವಾಗಿದೆ.
ಇದನ್ನೂ ಓದಿ: ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಮಲ್ಲಿಕಾರ್ಜುನ ಖರ್ಗೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ನಾಯಕತ್ವ ಬದಲಾವಣೆಯ ಗೊಂದಲ ರಾಜ್ಯ ನಾಯಕರ ಸೃಷ್ಟಿ ಎಂದಿದ್ದಾರೆ. ಅಂದರೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಂದಲೇ ಗೊಂದಲ ಸೃಷ್ಟಿಯಾಗಿದೆ ಎಂಬುದು ಅರ್ಥ. ಆದರೆ ಈ ಗೊಂದಲ ಬಗೆಹರಿಸಲು ಹೈಕಮಾಂಡ್ ಯಾಕೆ ಇನ್ನೂ ಮುಂದಾಗುತ್ತಿಲ್ಲ ಎಂಬ ಅನುಮಾನ ಹುಟ್ಟಿದೆ. ಸಿಎಂ ಸ್ಥಾನದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೇ ಕೂತು ಬಗೆಹರಿಸಿಕೊಳ್ಳುವ ಪರಿಸ್ಥಿತಿ ಇದೆಯಾ? ಅಲ್ಲಿಗೆ, ಅತ್ತ ಬದಲಾವಣೆಯೂ ಇಲ್ಲ, ಇತ್ತ ಪರಿಹಾರವೂ ಇಲ್ಲ ಎಂಬಂತಾಗಿದೆ. ಗೊಂದಲ ಬಗೆಹರಿಸಬೇಕಿದ್ದ ಹೈಕಮಾಂಡೇ ತಾವು ಆಟಕ್ಕಿಲ್ಲ ಎಂಬಂತೆ ವರ್ತಿಸುತ್ತಿರುವುದು ಸಮಸ್ಯೆಯ ಗಂಭೀರತೆಯನ್ನು ಹೆಚ್ಚಿಸುವ ಸುಳಿವು ನೀಡಿದೆ.