ರಾಮ ಮಂದಿರದ ಪರ ಮತ ನೀಡುತ್ತೀರಾ? ಸಮೀಕ್ಷೆಯಲ್ಲಿ ಬಂದ ಉತ್ತರಗಳಿಂದ ಹೌಹಾರಿದ ಕಾಂಗ್ರೆಸ್!

|

Updated on: Mar 28, 2024 | 10:10 AM

ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ನಡೆಸಿ ಅದರಂತೆ ತಂತ್ರಗಾರಿಕೆ ರೂಪಿಸಿ ಬಿಜೆಪಿಯನ್ನು ಹೀನಾಯವಾಗಿ ಮಣಿಸಿದ್ದ ಕಾಂಗ್ರೆಸ್ ಇದೀಗ ಲೋಕಸಭೆ ಚುನಾವಣೆ ಬಗ್ಗೆಯೂ ಕೆಲವು ತಿಂಗಳುಗಳ ಹಿಂದಿನಿಂದಲೇ ಜನಾಭಿಪ್ರಾಯ ಸಂಗ್ರಹಿಸಿರುವುದು ತಿಳಿದುಬಂದಿದೆ. ಆದರೆ, ಈ ಬಾರಿಯ ಸಮೀಕ್ಷೆಯಲ್ಲಿ ಕೆಲವು ವಿಚಾರಗಳಲ್ಲಿ ಜನರ ಬಿಜೆಪಿ ಪರ ಒಲವು ಹೆಚ್ಚಾಗಿದ್ದನ್ನು ಕಂಡು ಹೌಹಾರಿದೆ. ಇದೀಗ ಪ್ರತಿ ತಂತ್ರ ಹೆಣೆಯಲು ಮುಂದಾಗಿದೆ. ಈ ಕುರಿತ ವಿವರ ಇಲ್ಲಿದೆ.

ರಾಮ ಮಂದಿರದ ಪರ ಮತ ನೀಡುತ್ತೀರಾ? ಸಮೀಕ್ಷೆಯಲ್ಲಿ ಬಂದ ಉತ್ತರಗಳಿಂದ ಹೌಹಾರಿದ ಕಾಂಗ್ರೆಸ್!
ರಾಮ ಮಂದಿರದ ಪರ ಮತ ನೀಡುತ್ತೀರಾ? ಸಮೀಕ್ಷೆಯಲ್ಲಿ ಬಂದ ಉತ್ತರಗಳಿಂದ ಹೌಹೌರಿದ ಕಾಂಗ್ರೆಸ್!
Follow us on

ಬೆಂಗಳೂರು, ಮಾರ್ಚ್​ 28: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಕರ್ನಾಟಕದ (Karnataka) ಕ್ಷೇತ್ರಗಳಲ್ಲಿ ಬಿಜೆಪಿಯ (BJP) ಓಟಕ್ಕೆ ಬ್ರೇಕ್ ಹಾಕಲು ಶತಾಯಗತಾಯ ಯತ್ನಿಸುತ್ತಿರುವ ಕಾಂಗ್ರೆಸ್ (Congress), ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭ ಮಾಡಿಸಿದ ರೀತಿಯ ಸಮೀಕ್ಷೆ ಮಾಡಿಸಿದೆ. ಈ ಸಮೀಕ್ಷಾ ವರದಿಯ ಆಧಾರದಲ್ಲಿ ತಂತ್ರಗಳನ್ನು ಹೆಣೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ಡಿಸೆಂಬರ್​​ನಿಂದ ಸಮೀಕ್ಷೆ ಆರಂಭಿಸಲಾಗಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಜನರ ಒಲವು ಬಿಜೆಪಿ ಕಡೆ ಹೆಚ್ಚಾಗಿರುವುದನ್ನೂ ಗಮನಿಸಿದೆ. ಇದು ಕಾಂಗ್ರೆಸ್​ಗೆ ತುಸು ಕಳವಳವನ್ನೂ ಉಂಟುಮಾಡಿದೆ.

‘ಬಿಜೆಪಿಯ ದೊಡ್ಡ ಸಾಧನೆ ರಾಮಮಂದಿರ ನಿರ್ಮಾಣ, ಉದ್ಘಾಟನೆ ಎಂಬುದನ್ನು ನಮ್ಮ ಸಮೀಕ್ಷೆಗಳು ತೋರಿಸಿವೆ. ರಾಮಮಂದಿರದ ಪರ (ಅಂದರೆ, ಬಿಜೆಪಿಗೆ) ಮತ ನೀಡುತ್ತೀರಾ ಎಂದು ಜನರನ್ನು ಕೇಳಿದಾಗ, ‘ಬಹುಶಃ’ ಎಂಬ ಉತ್ತರಗಳು ಬಂದಿವೆ’ ಎಂದು ಕಾಂಗ್ರೆಸ್​​ನ ಹಿರಿಯ ನಾಯಕರೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಜನರ ‘ಬಹುಶಃ’ ಎಂಬ ಉತ್ತರವನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು. ಮೊದಲನೆಯದಾಗಿ, ರಾಮಮಂದಿರದ ಉದ್ಘಾಟನೆಯು ತಳಮಟ್ಟದಲ್ಲಿ ಜನರನ್ನು ತಲುಪಿದೆ ಎಂಬುದನ್ನು ಇದು ದೃಢಪಡಿಸುತ್ತದೆ. ಎರಡನೆಯದಾಗಿ, ರಾಮ ಮಂದಿರದ ಉದ್ಘಾಟನೆ ವಿಚಾರ ಬಿಜೆಪಿಗೆ ಮತವಾಗಿ ಪರಿವರ್ತನೆಗೊಂಡರೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದ್ದಾರೆ.

ರಾಮ ಮಂದಿರ ಉದ್ಘಾಟನೆ ಖಂಡಿತವಾಗಿಯೂ ಬಿಜೆಪಿಯ ವೋಟರ್ ಬೇಸ್​​ ಅನ್ನು ಗಟ್ಟಿಗೊಳಿಸಿದೆ. ಆದರೆ ಇದು ಬಿಜೆಪಿಗೆ ಹೆಚ್ಚುವರಿ ಮತದಾರರನ್ನು ತರುತ್ತದೆಯೇ ಎಂಬುದು ಪ್ರಶ್ನೆಯಾಗಿದೆ ಎಂದು ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರಿನಿಂದ ಸ್ಪರ್ಧಿಸುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

ಗ್ಯಾರಂಟಿ ಪ್ರತ್ಯಸ್ತ್ರಕ್ಕೆ ಕಾಂಗ್ರೆಸ್ ಸನ್ನದ್ಧ

ಬಿಜೆಪಿಯ ರಾಮ ಮಂದಿರ ಅಸ್ತ್ರಕ್ಕೆ ಪ್ರತಿಯಾಗಿ ಉಚಿತ ಗ್ಯಾರಂಟಿ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ. ರಾಮ ಮಂದಿರ ನಿರ್ಮಾಣ ಮತ್ತು ಉದ್ಘಾಟನೆ ಬಿಟ್ಟರೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಿಂದ ನಾಗರಿಕರಿಗೆ ವೈಯಕ್ತಿಕವಾಗಿ ಏನೂ ಕೊಡುಗೆ ದೊರೆತಿಲ್ಲ. ಪ್ರಮುಖ ಐದು ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗದ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ತಲುಪಿದೆ ಎಂಬ ಸಂದೇಶವನ್ನು ಮನೆ ಮನೆಗೆ ತಲುಪಿಸಲು ಕಾಂಗ್ರೆಸ್ ಮುಂದಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲೂ ಭುಗಿಲೆದ್ದ ಕಾಂಗ್ರೆಸ್ ಭಿನ್ನಮತ: ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಫೆಬ್ರವರಿ ಕೊನೆಯ ವಾರದಲ್ಲಿ ನಾವು ‘ಯುವ ಸಮೃದ್ಧಿ’ ಉದ್ಯೋಗ ಮೇಳವನ್ನು ನಡೆಸಿದ್ದೇವೆ. ಅದಕ್ಕೆ 84,000 ಮಂದಿ ಬಂದಿದ್ದರು. ಇದು ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರಲಿಲ್ಲ. ಇದರ ಮೂಲಕ ನಾವು ಉದ್ಯೋಗದ ಭರವಸೆ ನೀಡಿದ್ದೇವೆ. ಇದರಿಂದ ನಮಗೆ ಲಾಭವಾಗಲಿದೆ ಎಂದು ಹಿರಿಯ ಸಚಿವರೊಬ್ಬರು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಕಾಂಗ್ರೆಸ್ ಸಮೀಕ್ಷೆ ಪರ ಯಾರಿಗೆ ಎಷ್ಟು ಮತ?

ಕಾಂಗ್ರೆಸ್​ನ ಆಂತರಿಕ ಸಮೀಕ್ಷೆಗಳ ಪ್ರಕಾರ, ಪ್ರತಿಕ್ರಿಯಿಸಿದ ಪ್ರತಿ 10 ಮಂದಿಯಲ್ಲಿ ನಾಲ್ವರು ಬಿಜೆಪಿಗೆ, ಮೂವರು ಕಾಂಗ್ರೆಸ್‌ಗೆ ಮತ ಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ಉಳಿದ ಮೂವರು ನಿರ್ದಿಷ್ಟವಾಗಿ ಯಾವುದೇ ಪಕ್ಷದ ಪರ ಒಲವು ಬಹಿರಂಗಪಡಿಸಿಲ್ಲ. ಈ ಮೂವರು ಅಭ್ಯರ್ಥಿಯ ಜಾತಿ ಸೇರಿದಂತೆ ಸ್ಥಳೀಯ ಅಂಶಗಳ ಆಧಾರದ ಮೇಲೆ ಮತ ಹಾಕುವ ನಿರ್ಧಾರ ಕೈಗೊಳ್ಳುವವರು ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:01 am, Thu, 28 March 24