ಸಿಎಮ್​ ಬಿಎಸ್ ಯಡಿಯೂರಪ್ಪಗೆ ಎಚ್​ಕೆ ಪಾಟೀಲ್​ ಪತ್ರ: ಕೋವಿಡ್​ ರೋಗಿಗಳಿಗೆ ಎಲ್ಲ ಸೇವೆ, ಔಷಧಿ, ಹಾಸಿಗೆ ಸಿಗುವಂತೆ ಮಾಡಿ

ಸಿಎಮ್​ ಬಿಎಸ್ ಯಡಿಯೂರಪ್ಪಗೆ ಎಚ್​ಕೆ ಪಾಟೀಲ್​ ಪತ್ರ: ಕೋವಿಡ್​ ರೋಗಿಗಳಿಗೆ ಎಲ್ಲ ಸೇವೆ, ಔಷಧಿ, ಹಾಸಿಗೆ ಸಿಗುವಂತೆ ಮಾಡಿ
ಎಚ್​.ಕೆ. ಪಾಟೀಲ್​

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇಂದು ಪತ್ರ ಬರೆದಿರುವ ಎಚ್​.ಕೆ. ಪಾಟೀಲ್​ ಹಿಂದಿನ ವರ್ಷ ಮಾಡಿದ ತಪ್ಪನ್ನು ಮತ್ತೆ ಮಾಡಬೇಡಿ ಎಂದು ಹೇಳುತ್ತ ಕೆಲವು ಉಪಯುಕ್ತ ಸಲಹೆ ಕೂಡ ನೀಡಿದ್ದಾರೆ.

bhaskar hegde

|

Apr 14, 2021 | 3:01 PM


ಕಳೆದ ವರ್ಷದ ಬಂದು ಹೋಗಿದ್ದ ಕೊರನಾ ಮೊದಲ ಅಲೆಗಿಂತ ಈಗ ಬಂದಿರುವ ಎರಡನೇ ಅಲೆ ತೀವ್ರವಾಗಿರುವಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹಾಸಿಗಗಳು, ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಈ ಕುರಿತು ಸರಕಾರ ಎಚ್ಚೆತ್ತುಕೊಂಡು ರೋಗಿಗಳಿಗೆ ಎಲ್ಲಾ ತರಹದ ವೈದ್ಯಕೀಯ ಚಿಕಿತ್ಸೆ ಮತ್ತು ಸರಿಯಾದ ಆರೈಕೆ ಸಿಗುವಂತೆ ಮಾಡಬೇಕೆಂದು ಹಿರಿಯ ಕಾಂಗ್ರೆಸ್​ ನಾಯಕ ಎಚ್​.ಕೆ. ಪಾಟೀಲ್​ ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸವಿವರವಾಗಿ ಹೇಳಿರುವ ಪಾಟೀಲ್​, ಹಿಂದೆ ಮಾಡಿದ ತಪ್ಪನ್ನು ಮತ್ತೆ ಮಾಡದಿರುವಂತೆ ಒತ್ತಾಯಿಸಿದ್ದಾರೆ.   ರಾತ್ರಿ ಕರ್ಫ್ಯೂವನ್ನು ಹೇರಿರುವ ಸರಕಾರದ ನಿರ್ಧಾರವನ್ನು ಟೀಕಿಸಿರುವ ಪಾಟೀಲ್​, “ಕೊರೊನಾ ಕಫ್ರ್ಯೂ” ಹೆಸರಿನಲ್ಲಿ ಅವೈಜ್ಞಾನಿಕವಾದ ಅರ್ಥವಿಲ್ಲದ “ರಾತ್ರಿ ಕಫ್ರ್ಯೂ” ಹೇರಿಕೆಯಿಂದ ಸರ್ಕಾರ ಏನನ್ನು ಸಾಧಿಸ ಹೊರಟಿದೆ ಗೊತ್ತಿಲ್ಲ. ಇಂದು ನಮ್ಮ ಕರ್ನಾಟಕಕ್ಕೆ 14 ತಿಂಗಳ ಸುಧೀರ್ಘ ಅವಧಿಯ ಕೊರೊನಾ ವೈರಸ್ ಎದುರಿಸಿದ ಅನುಭವವಿದೆ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?     

ಕೊರೊನಾ ವೈರಸ್ ವಿಶ್ವದಲ್ಲಿ ಹರಡುವಿಕೆ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದಿದೆ. ಕರ್ನಾಟಕಕ್ಕೆ ವೈರಸ್ ಕಾಲಿಟ್ಟು ಒಂದು ವರ್ಷ 4 ತಿಂಗಳು ಗತಿಸಿದೆ. ನಾವೆಲ್ಲಾ ಈಗ ಹೇಳುತ್ತಿದ್ದೇವೆ, ಭಾರತಕ್ಕೆ ಕೊರೊನಾ ಎದುರಿಸುವ ಅನುಭವ ಮತ್ತು ಸಾಮಥ್ಯ ಇದೆ. ಕರ್ನಾಟಕದಲ್ಲಿ 2020ರ ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಮೊದಲ ಪ್ರಕರಣ ದಾಖಲಾಗಿ ಕರ್ನಾಟಕವೂ ಸಹ 14 ತಿಂಗಳು ಸತತವಾಗಿ ಪ್ರಕರಣಗಳ ದಾಖಲಾತಿಯಲ್ಲಿ ಏರಿಳಿತ ಕಂಡಿದೆ ಮತ್ತು ಎದುರಿಸುವ ಸಾಮಥ್ರ್ಯ ಹೊಂದಿದೆ ಎಂಬ ಭಾವನೆ ಹೊರಹಾಕಿದೆ. ಕಳೆದ ವರ್ಷ ಈ ರೋಗದ ಹರಡುವಿಕೆ ಭಾರತಕ್ಕೆ ಕಾಲಿಟ್ಟಾಗ, ನಿಯಂತ್ರಣಕ್ಕೆ ಉಪಕ್ರಮಗಳು, ಔಷಧಿ ಮತ್ತು ಇತರೆ ಪರಿಕರಗಳ ಕೊರತೆ ಇತ್ತು ಎಂಬುದನ್ನು ಎಲ್ಲ ಸರ್ಕಾರಗಳು ಹೇಳುತ್ತಲೇ ಬಂದಿವೆ. ನಮ್ಮ ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣದ ಮುಂಜಾಗ್ರತೆ ವಹಿಸಿರುವ ಕುರಿತು ಅನೇಕ ಕೇವಲ “ಶಹಬ್ಬಾಸ್‍ಗಿರಿ” ಪಡೆಯುವ ಮಾತುಗಳನ್ನಾಡಿದೆ. ಆದರೆ ವಾಸ್ತವಿಕ ಸ್ಥಿತಿ ಬೇರೆಯೇ ಇದೆ.

ಕಳೆದ ವರ್ಷದ ಸ್ಥಿತಿಯನ್ನು ಈ ವರ್ಷದ ಸ್ಥಿತಿಯನ್ನು ತುಲನಾತ್ಮಕ ಅಧ್ಯಯನ ಮಾಡಿದಾಗ ಸರ್ಕಾರಿ
ಕ್ರಮಗಳ ವೈಪಲ್ಯದಿಂದಲೇ ಈ ರೋಗ ನಿಯಂತ್ರಣಕ್ಕೆ ಸಾಧ್ಯವಾಗದೇ ಇರುವ ಸ್ಥಿತಿ ನಮ್ಮ ಕಣ್ಣೆದುರಿಗೆ ಬಂದು ನಿಲ್ಲುತ್ತಿದೆ. ಅಂದು 2019ರ ಕೊನೆಯಲ್ಲಿ 2020ರ ಪ್ರಾರಂಭಿಕ ದಿನಗಳಲ್ಲಿ ಕೊರೊನಾ ನಿಯಂತ್ರಣ ಹರಡುವಿಕೆಯನ್ನು ತಡೆಗಟ್ಟುವುದು ಒಂದು ಸವಾಲಾಗಿ ಪರಿಣಮಿಸಿತ್ತು. ಅಂದು ಔಷದಿ ಇರಲಿಲ್ಲ. ಕೊರೊನಾ ಸೈನಿಕರಿಗೆ ಪಿ.ಪಿ.ಈ. ಕಿಟ್‍ಗಳಿರಲಿಲ್ಲ. ಅಗತ್ಯ ಸಲಕರಣೆಗಳಿರಲಿಲ್ಲ, ಉಪಕರಣಗಳಿರಲಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಎದುರಿಗಿತ್ತು, ಖಾಸಗಿ ಆಸ್ಪತ್ರೆಗಳು ಕೊರೊನಾ ರೋಗಿಗಳಿಗೆ ಚಿಕಿತ್ಸೆ
ನೀಡಲು ನಿರಾಕರಿಸುತ್ತಿದ್ದವು, ಹಾಸಿಗೆಗಳನ್ನು ಒದಗಿಸಲು ನಿರಾಕರಿಸಿದ್ದವು, ಆಕ್ಸಿಜನ್ ಕೊರತೆಯಿಂದ ಹಲವು ಕೊರೊನಾ ರೋಗಿಗಳು ತತ್ತರಿಸಿ ಹೋಗಿದ್ದರು, ಹಲವು ಕಡೆ ತೀವ್ರ ಪ್ರಮಾಣದ ಆಕ್ಸಿಜನ್ ಕೊರತೆಯಾಗಿ ಅನೇಕ ರೋಗಿಗಳು ಸಾವಿಗೀಡಾದ ದುರ್ಘಟನೆಗಳು ನಡೆದುಕೊಂಡು ಹೋದರೂ, ಸರ್ಕಾರ ಸತ್ಯವನ್ನು ಒಪ್ಪಿಕೊಳ್ಳದೇ, ಸುಳ್ಳು ಸಮರ್ಥನೆಗಳ ಮೂಲಕ ತನ್ನದೇ ಹಟ ಸಾಧಿಸುತ್ತ ಬಂದಿತು. ಅಂದು ಅನುಭವದ ಕೊರತೆ ಹೆಸರಿನಲ್ಲಿ “ರಕ್ಷಣೆ” ಪಡೆಯುತ್ತಿದ್ದ ಸರ್ಕಾರ ಇಂದು ಅನುಭವವಿದ್ದರೂ ನಿಷ್ಕೀಯವಾಗಿ ಕೊರೊನಾ ಹರಡುವಿಕೆ ಮತ್ತು
ನಿಯಂತ್ರಣಕ್ಕೆ ನಗೆ ಪಾಟಿಲಿನ ಕ್ರಮ ಕೈಗೊಂಡು ಜನರಿಗೆ ತೀವ್ರ ಸಂಕಷ್ಟಕ್ಕೆ ತಳ್ಳುತ್ತಿದೆ.

ಏನೇನು ಕೊರತೆ ಇದೆ?
1. ಇಂದೂ ಸಹ ರೋಗಿಗಳಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ನಮ್ಮ ರಾಜ್ಯಕ್ಕೆ ಹೊರ ದೇಶಗಳಿಂದ, ಹೊರ ರಾಜ್ಯಗಳಿಂದ ಬರುವ ಜನರ ಸಮರ್ಪಕ ವೈದ್ಯಕೀಯ ತಪಾಸಣೆ ಮೇಲ್ವಿಚಾರಣೆ ನಡೆಯುತ್ತಿಲ್ಲ.

2. ರೋಗಿಗಳನ್ನು ಲಕ್ಷಣ ಕಂಡುಬಂದ ಕೆಲವೇ ಗಂಟೆಗಳಲ್ಲಿ ಪ್ರತ್ಯೇಕಿಸುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.

3. ಖಾಸಗಿ ಆಸ್ಪತ್ರೆಗಳು ತಮ್ಮ ಸಾಮಥ್ರ್ಯದ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡುವ ಕ್ರಮವನ್ನು ಯಾವಾಗ ಮತ್ತು ಏಕೆ ಕೈ ಬಿಡಲಾಯಿತೋ ಗೊತ್ತಿಲ್ಲ. ಈಗ ಮತ್ತೆ ಹಾಸಿಗೆಗಳನ್ನು ಪಡೆಯುತ್ತಿದ್ದೇವೆ ಎಂಬ ಹೇಳಿಕೆಗಳು ಬರುತ್ತಿವೆ.

4.ಆಕ್ಸಿಜನ್ ಕೊರತೆ ಎದುರಾಗಿದೆ.

5.ರಾಜ್ಯದ ಶೇ.80ರಷ್ಟು ಆಸ್ಪತ್ರೆಗಳಲ್ಲಿ ಜೀವರಕ್ಷಕ ರೆಮಿಡ್‍ಸ್ವಿಯರ್ ಚುಚ್ಚುಮದ್ದು ಲಭ್ಯವಿಲ್ಲ. ಬೆಂಗಳೂರು, ಬೀದರ್, ಕಲಬುರ್ಗಿ ಭಾಗದಲ್ಲಿ ಭಾರಿ ಕೊರತೆ ಇದೆ. ಈ ಔಷಧಿ ದೊರೆಯುತ್ತಿಲ್ಲ. ಭಾರತ ಸರ್ಕಾರ ರಫ್ತು ಮಾಡುತ್ತಿದೆ. ಈಗ ಈ ರಫ್ತು ನಿಲ್ಲಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ಹೇಳಿಕೊಂಡಿದೆ. ಕರ್ನಾಟಕದಲ್ಲಿ ತೀವೃ ಉಸಿರಾಟದ ತೊಂದರೆಯಿಂದ ಬಳಲುವ ರೋಗಿಗಳ ಸಂಖ್ಯೆ 40 ರಿಂದ 50 ಸಾವಿರದಷ್ಟಿದೆ. ಆಮ್ಲಜನಕ (ಆಕ್ಸಿಜನ್) ಸಹಿತ ಹಾಸಿಗೆಗಳ ಸಂಖ್ಯೆ ಸರ್ಕಾರಿ ಆಸ್ಪತ್ರೆಗಳಲ್ಲಿ 4 ರಿಂದ 5 ಸಾವಿರ ಮಾತ್ರವಿದೆ. ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ಅದೂ ಆಕ್ಸಿಜಿನೇಟೆಡ್ ಹಾಸಿಗೆಗಳನ್ನು ಇನ್ನೂ ಒದಗಿಸಿಲ್ಲ. ಇದು ಸರ್ಕಾರಿ ಅಂಕಿ-ಸಂಖ್ಯೆಗಳಿಂದಲೇ ಸ್ಪಷ್ಟ. ತಾವು ಏನನ್ನು ಮಾಡಲು ಹೊರಟಿದ್ದೀರಿ, ಸರ್ಕಾರಿ ಕ್ರಮಗಳ-ಉಪ ಕ್ರಮಗಳ ಬಗ್ಗೆ ಮಾಹಿತಿ ಇಲ್ಲ. ಕೇವಲ ನಗೆ ಪಾಟಿಲಿಗಾಗಿರುವ “ರಾತ್ರಿ ಕಫ್ರ್ಯೂ”ನಂತಹ ಕ್ರಮಗಳಿಂದ ಯಾವುದೇ ಪುರುಷಾರ್ಥ ಸಾಧನೆಯಾಗದು. “ರಾತ್ರಿ ಕಫ್ರ್ಯೂ” ನಂತಹ ಕ್ರಮಗಳನ್ನು ಬಿಟ್ಟು ಬಿಡಿ.

ಎಚ್​.ಕೆ. ಪಾಟೀಲ್​

ಪಾಟೀಲರು ಕೊಟ್ಟ ಸಲಹೆಗಳೇನು?

1. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ,ಅನುಷ್ಠಾನಗೊಳಿಸಿ.(ಕಾಗದದ ಮೇಲೆ ಉಳಿಯುವ ಆದೇಶ
ಮಾಡಬೇಡಿ).

2. ಆಕ್ಸಿಜನ್ ವಿಪುಲವಾಗಿ ಲಭ್ಯವಾಗುವಂತೆ ವ್ಯವಸ್ಥೆಗೊಳಿಸಿ.ಅಗತ್ಯವೆನಿಸಿದರೆ, ಆಕ್ಸಿಜನ್ ಬಳಕೆ ಮಾಡುವ, ಕೈಗಾರಿಕಾ ಉದ್ದೇಶಕ್ಕೆ ಆಕ್ಸಿಜನ್ ಉಪಯೋಗಿಸುವ ಕೈಗಾರಿಕೆಗಳನ್ನು ಕೆಲ ಕಾಲ ಬಂದ್ ಮಾಡಿ. ಆಕ್ಸಿಜನ್ ಹಾಸಿಗೆಗಳನ್ನು ತುರ್ತಾಗಿ ಹೆಚ್ಚಿಸಿ.

3. ಎಲ್ಲಿ ಜನ ಹೆಚ್ಚು ಸೇರುತ್ತಾರೆ ಎಂಬ ಭಾವನೆ-ಮಾಹಿತಿ ಇದೆಯೋ ಅಲ್ಲಿ ತಾತ್ಕಾಲಿಕ ಕೋರೋನಾ ತಪಾಸಣಾ ಕೇಂದ್ರ ಸ್ಥಾಪಿಸಿ. ಪರೀಕ್ಷೆಗಳನ್ನು ಮಾಡಿ. ಸೊಂಕಿತರು ಮತ್ತು ಶಂಕಿತರನ್ನು ಉಳಿದವರಿಂದ ಪ್ರತ್ಯೇಕಿಸಿ. ಪರೀಕ್ಷೆ ಮತ್ತು ಪರಿಣಾಮಕಾಗಿ ಪ್ರತ್ಯೇಕಿಸುವುದರಿಂದ ಮಾತ್ರ ಈ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು.

4. ತಪಾಸಣಾ ಪರಿಣಾಮ ವಿಳಂಬವಾಗಿ ಬರುತ್ತಿವೆ. ಟೆಸ್ಟ್​ ಕಿಟ್​ಗಳ ಕೊರತೆ ಇದೆ. ಸಕಾಲಿಕ ಪರೀಕ್ಷೆ, ಫಲಿತಾಂಶ ಹಾಗೂ ಚಿಕಿತ್ಸೆ ಕಡೆಗೆ ದೃಢ ಹೆಜ್ಜೆ ಇಡಿ.

5. ಫಾರ್ಮಸಿಗಳಲ್ಲಿ ಔಷಧಿ ಸರಳವಾಗಿ ದೊರಕುವಂತೆ ಮಾಡಿ. ಈಗಿರುವ ಪದ್ಧತಿ ಜನರಿಗೆ ತೊಂದರೆ ಮಾಡುತ್ತಿದೆ.

6. ತುರ್ತಾಗಿ ಅಗತ್ಯ ಪ್ರಮಾಣದಲ್ಲಿ ಔಷಧಿ ಮತ್ತು ಪರಿಕರಗಳ ದಾಸ್ತಾನು ಮಾಡಿಕೊಳ್ಳಿ. ಕೊರೊನಾ ಚಿಕಿತ್ಸೆ ನೀಡುವ ಪ್ರತಿಯೊಂದು ಆಸ್ಪತ್ರೆಯಲ್ಲೂ ಲಭ್ಯವಿರುವ ಔಷಧಿ ಮತ್ತು ಪರಿಕರಗಳ ವಿವರಗಳನ್ನು ಸಾರ್ವಜನಿಕವಾಗಿ ದೈನಿಂದಿನ ಆಧಾರದ ಮೇಲೆ ಪ್ರಕಟಿಸಿ.

7. ಲಸಿಕಾ ಕಾರ್ಯಕ್ರಮ ನಿಸ್ತೇಜಗೊಂಡಿದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಪ್ರಯೋಜನವಾಗಿರುವ ಕುರಿತು
ಜಾಗೃತಿ ಮೂಡಿಲ್ಲ. ಲಸಿಕೆ ಪಡೆದವರೂ ಸಹ ಸೊಂಕಿಗೆ ತುತ್ತಾಗಿರುವುದರಿಂದ ಜನರಲ್ಲಿ ಲಸಿಕೆ ಪಡೆಯುವುದರಿಂದ ಪ್ರಯೋಜನಗಳ ಕುರಿತು ಅನುಮಾನ ಮೂಡಿದೆ. ಒಂದು ವೇಳೆ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೇ, ವೈಜ್ಞಾನಿಕ ಆಧಾರಗಳು ಮತ್ತು ಪ್ರಮಾಣಗಳೊಂದಿಗೆ ಅದನ್ನು ಸಾಬೀತುಪಡಿಸಿ ಜನರ ಗಮನಕ್ಕೆ ಸತ್ಯವಾದ ಮಾಹಿತಿಯನ್ನು ನೀಡಿ, ಜಾಗೃತಿ ಮೂಡಿಸಿ.

8. ಔಷಧಿಯನ್ನು ಪಡೆಯಲು ಕೊರೊನಾ ಸೋಂಕಿತರು ಹರಸಾಹಸ ಮಾಡಬೇಕಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಔಷಧಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿ.

9. ಚುನಾವಣಾ ನೆಪದಿಂದ ಸರ್ವಪಕ್ಷ ಸಭೆ ವಿಳಂಬ ಮಾಡುವದು ಸೂಕ್ತವಲ್ಲ. 18ರ ಬದಲು ತುರ್ತಾಗಿ ಸರ್ವಪಕ್ಷಗಳ ಸಭೆ ಮಾಡಿ. ಸಭೆಯ ಅಜೆಂಡಾ ನಿರ್ಧರಿಸಿ, ಬಹಿರಂಗಗೊಳಿಸಿ.ಈ ಸಭೆಯಲ್ಲಿ
ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಮಂಡಿಸಿ. ಹಲವಾರು ಅಗತ್ಯ ನಿರ್ಣಯಗಳನ್ನು ಕೈಗೊಳ್ಳುವದನ್ನು ವಿಳಂಬ
ಮಾಡಬೇಡಿ. ಕೊರೊನಾ ಔಷಧಿ ನಾಗರೀಕರಿಗೆ ಸುಲಭವಾಗಿ, ಸರಳವಾಗಿ ದೊರೆಯುವಂತೆ ಕ್ರಮಕೈಗೊಳ್ಳಿ, ಅದಕ್ಕಾಗಿ ಮತ್ತೆ ಬೇರೆ ವಿವರಗಳು ಅಂದರೆ, ಸೋಂಕಿತರ ಆಧಾರ್ ಮತ್ತಿತರ ವೈಯಕ್ತಿಕ ವಿವರಗಳು ಮೆಡಿಕಲ್ ಸ್ಟೋರ್‍ಗೆ ಅಗತ್ಯವಿಲ್ಲ. ಉಳಿದ ಔಷಧಿಗಳಂತೆ ಈ ಔಷಧಿಗಳನ್ನು ಲಭ್ಯಗೊಳಿಸಿ. ಈ ಮೇಲಿನ ಕ್ರಮಗಳು ತುರ್ತು ಅಗತ್ಯಗಳು, ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಿ.

ಇದನ್ನೂ ಓದಿ:

ಇಂಥ ಲಕ್ಷಣಗಳಿದ್ದರೆ ಕೊರೊನಾ ಬಂದಿರುವ ಸಾಧ್ಯತೆಯಿದೆ, ಒಮ್ಮೆ ಟೆಸ್ಟ್ ಮಾಡಿಸಿ

 

(Congress leader H.K. Patil writes to chief minister B.S. Yediyurappa suggesting the steps for containing corona in the state)

Follow us on

Related Stories

Most Read Stories

Click on your DTH Provider to Add TV9 Kannada