ನಮ್ಮಲ್ಲಿರುವುದು ಒಂದೇ ಅಖಿಲ ಭಾರತ ಕಾಂಗ್ರೆಸ್ ಬಣ; ನಾನೆಲ್ಲೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ: ಸಿದ್ದರಾಮಯ್ಯ

| Updated By: ganapathi bhat

Updated on: Jun 21, 2021 | 5:29 PM

ನರೇಂದ್ರ ಮೋದಿ ಅಚ್ಛೇದಿನ್ ಬರುತ್ತೆ ಅಂದ್ರು, ಬಂದಿದೆಯಾ? ಯಡಿಯೂರಪ್ಪ ನೇತೃತ್ವದ ಸರ್ಕಾರ ಲೂಟಿ ಹೊಡೆಯುತ್ತಿದೆ. ಲೂಟಿ ಹೊಡೆಯುವುದನ್ನು ಬಿಟ್ಟರೆ ಬೇರೇನನ್ನೂ ಮಾಡುತ್ತಿಲ್ಲ. ಯಡಿಯೂರಪ್ಪ, ಮಗ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ.

ನಮ್ಮಲ್ಲಿರುವುದು ಒಂದೇ ಅಖಿಲ ಭಾರತ ಕಾಂಗ್ರೆಸ್ ಬಣ; ನಾನೆಲ್ಲೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ: ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಕೊಪ್ಪಳ: ನಾನು ಎಲ್ಲೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ಮುಖ್ಯಮಂತ್ರಿ ವಿಚಾರದ ಬಗ್ಗೆ ಚುನಾವಣೆಯಲ್ಲಿ ಗೆದ್ದ ಬಳಿಕ ಹೈಕಮಾಂಡ್​ ತೀರ್ಮಾನಿಸುತ್ತದೆ. ಕೂಸು ಹುಟ್ಟೋ ಮುನ್ನ ಕುಲಾಯಿ ಹೊಲಿಸ್ತಾರೆಂಬ ಬಿ.ಸಿ. ಪಾಟೀಲ್ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಅವನು ವ್ಯಾಪಾರಿ, ಅವನ ಹೇಳಿಕೆಗೆ ಪ್ರತಿಕ್ರಿಯಿಸಲ್ಲ ಎಂದು ಕೊಪ್ಪಳದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮಲ್ಲಿ ಯಾವುದೇ ಬಣ ಇಲ್ಲ, ಇರುವುದು ಒಂದೇ ಬಣ. ಸಿದ್ದರಾಮಯ್ಯ ಬಣವೂ ಇಲ್ಲ, ಡಿಕೆಶಿ ಬಣವೂ ನಮ್ಮಲ್ಲಿಲ್ಲ. ನಮ್ಮಲ್ಲಿರುವುದು ಒಂದೇ ಅಖಿಲ ಭಾರತ ಕಾಂಗ್ರೆಸ್ ಬಣ. ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿರೋದು ಬೇರೆ ಕೆಲಸಕ್ಕೆ. ಡಿ.ಕೆ. ಶಿವಕುಮಾರ್ ನನಗೆ ಹೇಳಿಯೇ ದೆಹಲಿಗೆ ಹೋಗಿದ್ದಾರೆ. ವಲಸೆ ಹೋದ ಶಾಸಕರು ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ನಾನೀಗ ಬಾದಾಮಿ ಕ್ಷೇತ್ರದ ಶಾಸಕ, ಮುಂದೆ ನೋಡೋಣ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಸುಮ್ನೆ ಬಂದಿದ್ರಾ. ಬಿಜೆಪಿಯಲ್ಲಿ ಗೊಂದಲ ಇಲ್ಲದೆಯೇ ಸುಮ್ಮನೆ ಬಂದಿದ್ರಾ? ಮುಖ್ಯಮಂತ್ರಿ ಬದಲಾವಣೆ ವಿಚಾರ ಚರ್ಚೆಗೆ ಬಂದಿತ್ತು. ನನಗಿರೋ ಮಾಹಿತಿ ಪ್ರಕಾರ ಯಡಿಯೂರಪ್ಪ ಬದಲಾಗ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮೋದಿ ಸರ್ಕಾರ ಜನರ ರಕ್ತ ಹೀರುತ್ತಿದೆ ಎಂದೂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ನರೇಂದ್ರ ಮೋದಿ ಅಚ್ಛೇದಿನ್ ಬರುತ್ತೆ ಅಂದ್ರು, ಬಂದಿದೆಯಾ? ಯಡಿಯೂರಪ್ಪ ನೇತೃತ್ವದ ಸರ್ಕಾರ ಲೂಟಿ ಹೊಡೆಯುತ್ತಿದೆ. ಲೂಟಿ ಹೊಡೆಯುವುದನ್ನು ಬಿಟ್ಟರೆ ಬೇರೇನನ್ನೂ ಮಾಡುತ್ತಿಲ್ಲ. ಯಡಿಯೂರಪ್ಪ, ಮಗ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ, ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಎಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ್​ ಆರೋಪ ಮಾಡ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಬೆಲೆ ಹೆಚ್ಚಳವಾಗಿದೆ ಎಂದು ಕೊಪ್ಪಳದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು, 4 ಸಾವಿರದಲ್ಲಿ ಜೀವನ ಸಾಗಿಸುತ್ತಿದ್ದವರಿಗೆ 10,000 ರೂಪಾಯಿ ಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದೆ. ದೇಶ, ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರವಿದೆ. ಅನುದಾನ ಕೇಳಿದರೆ ಸಿಎಂ ಬಿಎಸ್​ವೈ ಕೊರೊನಾ ಅಂತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದೇ ವೇಳೆ, ಶಾಸಕ ರಾಘವೇಂದ್ರ ಹಿಟ್ನಾಳ್​ರಿಂದ ಆಯೋಜಿಸಲ್ಪಟ್ಟಿದ್ದ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಈ ಸಂದರ್ಭ, ಫುಡ್​ ಕಿಟ್ ಪಡೆಯಲು ಜನರ ನೂಕುನುಗ್ಗಲು ಕಂಡುಬಂದಿದೆ. ಸಾರ್ವಜನಿಕ ಮೈದಾನದಲ್ಲಿ ಸಿದ್ದರಾಮಯ್ಯರಿಂದ ಕಿಟ್ ವಿತರಣೆ ಮಾಡಲಾಗಿದ್ದು, ಕಿಟ್ ಪಡೆಯಲು ಜನರು ಹರಸಾಹಸ ಪಟ್ಟಿದ್ದಾರೆ.

ಸಿದ್ದರಾಮಯ್ಯಗೆ ಸ್ವಾಗತ ಕೋರುವ ವೇಳೆ ಕೂಡ ಜನರಿಂದ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ. ದೈಹಿಕ ಅಂತರ ಮರೆತು ನೂರಾರು ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಬಸಾಪುರ ಹೆಲಿಪ್ಯಾಡ್‌ ಬಳಿ ಕೊವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ. ದೈಹಿಕ ಅಂತರವೂ ಇಲ್ಲ, ಮಾಸ್ಕ್ ಕೂಡ ಧರಿಸದೆ ಜನರು ನಿರ್ಲಕ್ಷ್ಯ ವಹಿಸಿದ್ದಾರೆ.

ಕೊರೊನಾ ಸೋಂಕು ಹೋಗಿಲ್ಲ, ಕಡಿಮೆಯಾಗಿದೆ ಅಷ್ಟೇ. ಎಲ್ಲರೂ ಮಾಸ್ಕ್ ಧರಿಸಿ ಎಂದು ಸಿದ್ದರಾಮಯ್ಯ ಕೈಮುಗಿದು ಕೇಳಿಕೊಂಡಿದ್ದಾರೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಕಾರ್ಯಕ್ರಮಕ್ಕೆ ಬಂದಿದ್ದವರಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಬಳಿಕ, ಕೊಪ್ಪಳ ನಗರದ ಗವಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಗವಿ ಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪ, ಮಗ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ; ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ: ಸಿದ್ದರಾಮಯ್ಯ

ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!