ಖಾಸಗಿ ಶಾಲೆಗಳ ಶುಲ್ಕ ನಿಗದಿ: ಹೈಕೋರ್ಟ್ನಿಂದ ಸರ್ಕಾರದ ಮಧ್ಯಂತರ ಅರ್ಜಿ ವಿಚಾರಣೆ
ರಾಜ್ಯ ಸರ್ಕಾರದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಖಾಸಗಿ ಶಾಲೆಗಳು ಕೋರಿದವು. ಖಾಸಗಿ ಶಾಲೆಗಳ ಮನವಿ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು.
ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಖಾಸಗಿ ಶಾಲೆಗಳು ಕೋರಿದವು. ಖಾಸಗಿ ಶಾಲೆಗಳ ಮನವಿ ಹಿನ್ನೆಲೆಯಲ್ಲಿ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿತು.
ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರವು ಈ ಬಾರಿ ಒಟ್ಟು ನಿಗದಿತ ಶುಲ್ಕದ ಪೈಕಿ ಶೇ 70ರಷ್ಟನ್ನು ಮಾತ್ರ ಪಡೆಯುವಂತೆ ಆದೇಶಿಸಿತ್ತು. ಶುಲ್ಕದಲ್ಲಿ ಶೇ 30ರಷ್ಟು ಮೊತ್ತವನ್ನು ವಿನಾಯ್ತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಆದೇಶವನ್ನು ಖಾಸಗಿ ಶಾಲೆಗಳ ಒಕ್ಕೂಟ ರಿಟ್ ಅರ್ಜಿ ಸಲ್ಲಿಸುವ ಮೂಲಕ ಪ್ರಶ್ನಿಸಿತ್ತು. ಶುಲ್ಕ ನಿಗದಿಯ ಬಗ್ಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಈ ವೇಳೆ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಈ ವಿಚಾರದಲ್ಲಿ ರಾಜ್ಯ ಸರ್ಕಾರವು ಮಧ್ಯಂತರ ಅರ್ಜಿ ಸಲ್ಲಿಸಿತ್ತು.
ಕರ್ನಾಟಕ ಸರ್ಕಾರದ ಸೂಚನೆಯಂತೆ ಈ ವರ್ಷವೂ ಶಾಲಾ ಶುಲ್ಕದಲ್ಲಿ ಶೇ 30ರಷ್ಟು ರಿಯಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಈ ಹಿಂದೆ ಸ್ಪಷ್ಟಪಡಿಸಿದ್ದವು. ‘ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಈ ವರ್ಷವೂ ಶುಲ್ಕ ರಿಯಾಯ್ತಿ ನೀಡಬೇಕು’ ಎಂದು ಪೋಷಕರ ಒಕ್ಕೂಟಗಳು ಆಗ್ರಹಿಸಿದ್ದವು.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದ ಪೋಷಕರ ಒಕ್ಕೂಟದ ಪ್ರತಿನಿಧಿಗಳು ಕಳೆದ ವರ್ಷವೂ ಕೆಲ ಶಾಲೆಗಳು ರಾಜ್ಯ ಸರ್ಕಾರದ ಸೂಚನೆ ಪಾಲಿಸಿರಲಿಲ್ಲ ಎಂದು ದೂರಿದ್ದವು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಖಾಸಗಿ ಶಾಲೆಗಳಿಗೆ ಇಂಥ ಸೂಚನೆ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ವಾದಿಸಿದ್ದವು.
(Karnataka High Court Adjourns Interem Petition Filed by State Government)
ಇದನ್ನೂ ಓದಿ: BBMP: ಬೆಂಗಳೂರಿನ ಕಸ ನಿರ್ವಹಣೆಗೆ ಕಂಪನಿ ಆರಂಭ; ಪಾಲಿಕೆ ತನ್ನ ಕೆಲಸವನ್ನು ಕಂಪನಿಗೆ ವಹಿಸಬಹುದೇ? ಹೈಕೋರ್ಟ್ ಪ್ರಶ್ನೆ