ಕಾಂಗ್ರೆಸ್ಸಿಗರ ನೆಮ್ಮದಿ ಕೆಡಿಸಿ ಯೋಗೇಶ್ವರ್‌ ನಿದ್ದೆಗೆಡಿಸಿದೆ ಜಮೀರ್!

| Updated By: ರಮೇಶ್ ಬಿ. ಜವಳಗೇರಾ

Updated on: Nov 15, 2024 | 3:11 PM

ಸಚಿವ ಜಮೀರ್ ಅಹಮ್ಮದ್ ಖಾನ್ ಆಡಿದ ಮಾತೀಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಕಂಪನ ಎಬ್ಬಿಸಿದೆ. ಫಲಿತಾಂಶಕ್ಕೂ ಮುನ್ನವೇ ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ನೀಡಿದ ಹೇಳಿಕೆ ಕಾಂಗ್ರೆಸ್ ಮನೆಯಲ್ಲಿ ನಾನಾ ಚರ್ಚೆ ಹುಟ್ಟು ಹಾಕಿದೆ. ಯೋಗೇಶ್ವರ್ ಹೇಳಿಕೆಯಿಂದ ಕಾಂಗ್ರೆಸ್ಸಿಗರ ಸಿಟ್ಟು ಸಚಿವ ಜಮೀರ್ ಕಡೆಗೆ ತಿರುಗಿದೆ.

ಕಾಂಗ್ರೆಸ್ಸಿಗರ ನೆಮ್ಮದಿ ಕೆಡಿಸಿ ಯೋಗೇಶ್ವರ್‌ ನಿದ್ದೆಗೆಡಿಸಿದೆ ಜಮೀರ್!
Follow us on

ಬೆಂಗಳೂರು, (ನವೆಂಬರ್ 15): ಸಂಡೂರು ಹಾಗೂ ಶಿಗ್ಗಾಂವಿ ಉಪಚುನಾವಣೆ ಫಲಿತಾಂಶಕ್ಕಿಂತ ಚನ್ನಪಟ್ಟಣ ರಿಸಲ್ಟ್​ ಭಾರೀ ಕುತೂಹಲ ಕೆರಳಿಸಿದೆ. ಚನ್ನಪಟ್ಟಣದಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಜೋರಾಗಿವೆ. ಆದ್ರೆ, ಫಲಿತಾಂಶಕ್ಕೂ ಮುನ್ನವೇ ಯೋಗೇಶ್ವರ್​ ಆಡಿದ ಹತಾಶೆಯ ಮಾತುಗಳನ್ನು ಗಮನಿಸಿದರೆ ಕಾಂಗ್ರೆಸ್​ ಸೋಲು ಆತಂಕದಲ್ಲಿದೆ. ಒಕ್ಕಲಿಗ ಸಮುದಾಯದ ಮತಗಳು ತಮಗೆ ಕಡಿಮೆ ಬಂದಿರಬಹುದೆಂಬ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಮಾಜಿ ಸಂಸದ ಡಿ.ಕೆ ಸುರೇಶ ಪ್ರತಿಕ್ರಿಯಿಸಿದ್ದಾರೆ. ನಾವೆಲ್ಲಾ ಆತ್ಮವಿಶ್ವಾಸದಿಂದ ಇದ್ದೇವೆ. ಯೋಗೇಶ್ವರ್ ಯಾವ ಆಯಾಮದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಯೋಗೇಶ್ವರ್ ಹೇಳಿಕೆ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ, ಯೋಗೇಶ್ವರ್ ಅಲ್ಲಿನ ರಾಜಕೀಯ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಅವರ ಹೇಳಿಕೆಗೆ ಮಹತ್ವ ಕೊಡೋದು ಬೇಡ ಎಂದಿದ್ದಾರೆ. ಅಷ್ಟಕ್ಕೂ ವಿಷ್ಯ ಏನಂದ್ರೆ, ಜಮೀರ್ ಆಡಿದ್ದ ಮಾತೇ ಚನ್ನಪಟ್ಟಣದಲ್ಲಿ ಮುಳುವಾಗುತ್ತೆಂಬ ಚರ್ಚೆ ಶುರುವಾಗಿದೆ. ದೇವೇಗೌಡರ ಕುಟುಂಬವನ್ನ ಖರೀದಿಸ್ತೀವಿ. ಕರಿಯಾ ಎಂದು ನೀಡಿದ್ದ ಹೇಳಿಕೆಗಳು ಉಲ್ಟಾ ಹೊಡೆದಿವೆ ಎನ್ನಲಾಗ್ತಿದೆ. ಹೀಗಾಗಿಯೇ ಸಿ.ಪಿ ಯೋಗೇಶ್ವರ್, ಜಮೀರ್ ಹೇಳಿಕೆಯಿಂದ ಲಾಭವೂ ಆಗಿದೆ, ನಷ್ಟವೂ ಆಗಿದೆ ಅನ್ನೋ ಅರ್ಥದಲ್ಲಿ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ, JDS ಕೆಲಸ ಬಹಳಷ್ಟು ವರ್ಕೌಟ್ ಆಗಿದೆ: ಫಲಿತಾಂಶಕ್ಕೂ ಮುನ್ನವೇ ಯೋಗೇಶ್ವರ್ ಸೋಲೋಪ್ಪಿಕೊಂಡ್ರಾ?

ಆದ್ರೆ, ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ಜಮೀರ್, ನನ್ನ ಅವರು ಕುಳ್ಳ ಅಂತಾರೆ ಎಂದಿದ್ರು. ಇದಕ್ಕೆ ತಿರುಗೇಟು ಕೊಟ್ಟಿರೋ ಹೆಚ್‌ಡಿಕೆ, ನಾನು ಯಾವತ್ತೂ ಜಮೀರ್‌ರನ್ನ ಕುಳ್ಳ ಎಂದಿಲ್ಲ ಎಂದಿದ್ದಾರೆ. ಇನ್ನೂ ಡಿ.ಕೆ ಸುರೇಶ್, ಕರಿಯಾ ಅಂದ್ರೆ ಏನ್ ಮಾಡೋಕಾಗುತ್ತೆ ಅಂತೇಳೋ ಮೂಲಕ ಜಮೀರ್ ಹೇಳಿಕೆಯಿಂದ ಎಫೆಕ್ಟ್ ಆಗಿಲ್ಲ ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ.

ಇನ್ನೂ ದೇವೇಗೌಡರ ಕುಟುಂಬವನ್ನ ಖರೀದಿ ಮಾಡುವ ತಾಕತ್ತಿದೆ ಎಂಬ ಹೇಳಿಕೆಯಿಂದಲೂ ಹಿನ್ನೆಡೆಯಾಯ್ತು ಎಂಬ ಚರ್ಚೆಯೂ ಆಗುತ್ತಿದೆ. ಈ ಬಗ್ಗೆ ವಾಗ್ದಾಳಿ ನಡೆಸಿರುವ ಹೆಚ್‌ಡಿಕೆ, ಇದೆಲ್ಲ ದುಡ್ಡಿನ ಮದ ಎಂದು ತಿವಿದಿದ್ದಾರೆ. ಇದಕ್ಕೂ ಸಮರ್ಥನೆ ನೀಡಿರೋ ಡಿಕೆ ಸುರೇಶ್, ಆ ರೀತಿಯಾಗಿ ಜಮೀರ್ ಹೇಳಿಲ್ಲ ಎಂದಿದ್ದಾರೆ.

ಜಮೀರ್ ಹೇಳಿಕೆ ಮೈತ್ರಿ ನಾಯಕರಿಗೆ ಅಸ್ತ್ರವಾಗಿದ್ರೆ, ಯೋಗೇಶ್ವರ್ ಹೇಳಿಕೆ ಬಳಿಕ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ. ಆದ್ರೆ, ಕಾಂಗ್ರೆಸ್ ಮನೆಯಲ್ಲೇ ಆಕ್ರೋಶ ಭುಗಿಲೆದ್ದಿದ್ದು, ಮಂಡ್ಯದಲ್ಲಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಜಮೀರ್‌ರನ್ನ ಪ್ರಚಾರಕ್ಕೆ ಕರೆಸಬಾರದಿತ್ತು. ಪ್ರಚಾರಕ್ಕೆ ಕರೆಸಿ ತಪ್ಪು ಮಾಡಿದ್ರು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಮಧ್ಯೆ ಜಮೀರ್ ವಿರುದ್ಧ ಒಕ್ಕಲಿಗ ಸಮುದಾಯವೂ ಸಿಡಿದೆದ್ದಿದ್ದು, ನೆಲಮಂಗಲದಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಕುಣಿಗಲ್ ಸರ್ಕಲ್‌ನಿಂದ ಱಲಿ ನಡೆಸಿ ಜಮೀರ್ ಪ್ರತಿಕೃತಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀರ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಜಮೀರ್ ಆಡಿದ ಎರಡು ಮಾತು, ಯೋಗೇಶ್ವರ್‌ ನಿದ್ದೆಗೆಡಿಸಿದೆ. ಕಾಂಗ್ರೆಸ್ಸಿಗರ ನೆಮ್ಮದಿ ಕೆಡಿಸಿದೆ. ಒಕ್ಕಲಿಗರನ್ನ ಬಡಿದೆಬ್ಬಿಸಿದೆ. ರಿಸಲ್ಟ್ ಏನಾಗುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.