ಬೆಂಗಳೂರು, ಫೆ.4: ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹೇಳಿಕೆ ನೀಡಿದ್ದರು. ಇದರ ವಿರುದ್ಧ ದೇಶಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆಯನ್ನು ಜನರ ಮೇಲೆ ಹೇರಿ ಕೈತೊಳೆಯುವ ಪ್ರಯತ್ನ ಮಾಡಿದ್ದರು. ಇದೀಗ ತನ್ನ ಹೇಳಿಕೆಯನ್ನು ತಿರುಚುತ್ತಿದ್ದಾರೆ ಎಂದು ಹೇಳುವ ಮೂಲಕ ಯುಟರ್ನ್ ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಸುರೇಶ್, ನನ್ನ ಹೇಳಿಕೆಗಳನ್ನ ಬಿಜೆಪಿಯವರು ತಿರುಚುತ್ತಿದ್ದಾರೆ. ದೇಶವಿಭಜನೆ ಬಗ್ಗೆ ನಾನು ಹೇಳಿಲ್ಲ. ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ. ಬಿಜೆಪಿ ಕಾರ್ಯಕರ್ತರ ಹೋರಾಟಕ್ಕೆ ನನ್ನ ಸಹಕಾರ ಇದೆ. ದೇವರು ಅವರಿಗೆ ಒಳ್ಳೇದನ್ನ ಮಾಡಲಿ ಎಂದರು. ಅಲ್ಲದೆ, ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಿದರೆ ತಪ್ಪೇನಿದೆ. ನನ್ನ ಹೇಳಿಕೆಗಳು ಬಹಳ ಸ್ಪಷ್ಟವಾಗಿದೆ. ಬಿಜೆಪಿ ಕಾರ್ಯಕರ್ತರ ಹೋರಾಟದಲ್ಲಿ ತಪ್ಪೇನಿದೆ? ಹೋರಾಟಗಳು, ಪ್ರತಿಭಟನೆ ಪ್ರಜಾಪ್ರಭುತ್ವದ ಭಾಗ ಎಂದರು.
ಡಿಕೆ ಬ್ರದರ್ಸ್ ಮನೆಗೆ ಬಿಜೆಪಿ ಮುತ್ತಿಗೆ ವಿಚಾರವಾಗಿ ಮಾತನಾಡಿದ ಡಿಕೆ ಸುರೇಶ್, ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಯಾರನ್ನ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಹೋರಾಟಕ್ಕೆ ಸಂಪೂರ್ಣ ಸಹಕಾರ ಸರ್ಕಾರ ಕೊಡುತ್ತದೆ. ನಾನು ಬಿಜೆಪಿ ಪ್ರತಿಭಟನೆಯನ್ನು ಸ್ವಾಗತ ಮಾಡುತ್ತೇನೆ. ದೇವರು ಬಿಜೆಪಿಗೆ ಒಳ್ಳೆಯದು ಮಾಡಲಿ ಎಂದರು.
ಇದನ್ನೂ ಓದಿ: ಡಿಕೆ ಸುರೇಶ್ ನಿಜಾಮನಾಗುವುದು ಬೇಡ, ನಿಜಾಮನನ್ನು ಬಗ್ಗುಬಡಿದ ಸರ್ದಾರ್ ಪಟೇಲ್ ರಂಥ ನೇತೃತ್ವ ಬಿಜೆಪಿಯಲ್ಲಿದೆ: ಸಿಟಿ ರವಿ
ಈ ದೇಶ ವಿಭಜನೆ ಆಗಬೇಕು ಅಂತ ಹೇಳಿಲ್ಲ. ನನ್ನ ಹೇಳಿಕೆ ಬಹಳ ಸ್ಪಷ್ಟವಾಗಿದೆ. ಹಾಗಾಗಿ ಬಿಜೆಪಿಯವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಅವರ ಹೋರಾಟ ಯಶಸ್ವಿಯಾಗಲಿದೆ. ಅವರವರ ಭಾವನೆ ಹೇಳಲು ಎಲ್ಲರಿಗೂ ಹಕ್ಕಿದೆ. ನನ್ನ ಹೇಳಿಕೆಯನ್ನ ಸ್ಪಷ್ಟವಾಗಿ ರಾಜ್ಯ ಮತ್ತು ದೇಶದ ಜನತೆಗೆ ತೊರಿಸಬೇಕು. ಪ್ರಜಾಪ್ರಭುತ್ವದ ನಾಲ್ಕು ಅಂಗ ಮಾಧ್ಯಮ. ಮಾದ್ಯಮಗಳು ಕೆಲವರನ್ನ ಗುರಿ ಮಾಡುತ್ತಿರುವುದು ಸರಿನಾ ತಪ್ಪಾ ಎಂದು ವಿಶ್ಲೇಷಣೆ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ಪ್ರತ್ಯೇಕ ರಾಷ್ಟ್ರ ಹೇಳಿಕೆ ಖಂಡಿಸಿ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಪ್ರತಿಭಟಿಸುತ್ತಿದೆ. ಈ ನಡುವೆ ಕಾರ್ಯಕರ್ತರು ಡಿ.ಕೆ.ಸುರೇಶ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅದರಂತೆ ಬೆಂಗಳೂರಿನ ಸದಾಶಿವನಗರದ ಡಿಕೆ ಸುರೇಶ್ ನಿವಾಸದ ಬಳಿ ಕೆಲ ಕಾಲ ಹೈಡ್ರಾಮಾ ನಡೆಯಿತು. ಡಿ.ಕೆ.ಸುರೇಶ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಲಾಯಿತು. ಇದೇ ವೇಳೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದು, ಈ ಬಜೆಟ್ ಅನ್ನು ಟೀಕಿಸುವ ಬರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಪ್ರತ್ಯೇಕ ರಾಷ್ಟ್ರದ ಹೇಳಿಕೆಯನ್ನು ನೀಡಿದ್ದರು. ಕೇಂದ್ರದ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ. ದಕ್ಷಿಣ ಭಾರತದವರು ಧ್ವನಿ ಎತ್ತಬೇಕಾಗುತ್ತದೆ ಎಂದಿದ್ದರು.
ಪ್ರತ್ಯೇಕ ರಾಷ್ಟ್ರದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಡಿಕೆ ಸುರೇಶ್ ಅವರು ಜನರ ಮೇಲೆ ಹೇರಿ ಕೈತೊಳೆಯುವ ಪ್ರಯತ್ನ ಮಾಡಿದ್ದರು. ತಾವು ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡಿದ ಡಿಕೆ ಸುರೇಶ್, ಜನರ ಭಾವನೆಗಳನ್ನು ಹೇಳಿದ್ದೇನೆಯೇ ಹೊರತು ಬೇರೇನೂ ಹೇಳಿಲ್ಲ ಎಂದು ಹೇಳಿದ್ದರು. ಅಲ್ಲದೆ, ನನ್ನ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ