ಲೋಕಸಭೆ ಟಿಕೆಟ್​: ಇಲ್ಲಿದೆ ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್, ಯಾರು-ಯಾವ ಕ್ಷೇತ್ರದಿಂದ ಸ್ಪರ್ಧೆ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸೀಟಿಗೆ ಮುಕಾಡೆ ಮಲಗಿದ್ದ ಕಾಂಗ್ರೆಸ್​​ಗೆ ಈ ಬಾರಿ ಗೆಲ್ಲುವ ಹುರುಪು ಬಂದು ಬಿಟ್ಟಿದೆ. ತಲೆ ಕೆಳಗಾದರೂ ಪರವಾಗಿಲ್ಲ, ಆಕಾಶ ಭೂಮಿ ಒಂದಾದರೂ ಪರವಾಗಿಲ್ಲ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಕಾಂಗ್ರೆಸ್ ಹಗಲು ರಾತ್ರಿ ಬೆವರು ಸುರಿಸುತ್ತಿದೆ. ಈ ಕಾರಣಕ್ಕೆ ಗೆಲುವಿನ ಕುದುರೆ ಹತ್ತೋಕೆ ಸಿದ್ಧವಾಗಿರೋ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಿಕೊಂಡಿದೆ. ಹಾಗಾದ್ರೆ, ಯಾವ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡಬಹುದು ಎನ್ನುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ಲೋಕಸಭೆ ಟಿಕೆಟ್​: ಇಲ್ಲಿದೆ ಕರ್ನಾಟಕ ಕಾಂಗ್ರೆಸ್ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್, ಯಾರು-ಯಾವ ಕ್ಷೇತ್ರದಿಂದ ಸ್ಪರ್ಧೆ?
Follow us
ರಮೇಶ್ ಬಿ. ಜವಳಗೇರಾ
|

Updated on:Feb 04, 2024 | 2:01 PM

ಬೆಂಗಳೂರು, (ಫೆಬ್ರವರಿ 04): ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಬಿಜೆಪಿಯನ್ನ ಮಣಿಸಿ ಗೆದ್ದು ಬಿಗಿರಬಹುದು. ಆದ್ರೆ ಲೋಕಸಭಾ ಚುನಾವಣೆಯಲ್ಲಿ(Lok Sabha Elections 2024) ನರೇಂದ್ರ ಮೋದಿ (Narendra Modi) ಎಂಬ ಹೆಸರಿನ ಅಲೆ ಕಾಂಗ್ರೆಸ್​ ಮುಂದಿದೆ. ಹೀಗಾಗಿ ಮೋದಿ ಅಲೆಯನ್ನ ಕೆಡವಿ, ಮತದಾರರ ಮನಗೆದ್ದು, ವಿಜಯದ ಮಾಲೆಯನ್ನ ತನ್ನ ಕೊರಳಿಗೆ ಹಾಕಿಕೊಳ್ಳಬೇಕು ಎಂದು ಕಾಂಗ್ರೆಸ್​ ಅಖಾಡದಲ್ಲಿ ಗೆಲ್ಲುವಂತಹ ಹುರಿಯಾಳುಗಳನ್ನ ಹುಡುಕುತ್ತಿದೆ. ಇದರ ಭಾಗವಾಗಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ಧ ಮಾಡಿಕೊಂಡಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು, ಶಾಸಕರು ಈ ಬಗ್ಗೆ ಮ್ಯಾರಥಾನ್​ ಸಭೆ​ ನಡೆಸಿದ್ದು, 15 ಹೆಚ್ಚು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಈ ಪಟ್ಟಿಗೆ ಕಂಡಿಷನ್ಸ್ ಅಪ್ಲೈ ಅನ್ನೋ ಕೊನೆ ಕ್ಷಣದ ಬದಲಾವಣೆ ಹೊರತುಪಡಿಸಿದ್ರೆ, ಬಹುತೇಕ ಸಂಭಾವ್ಯ ಅಭ್ಯರ್ಥಿಗಳ ಇದೆ ಅಂತ ಹೇಳಲಾಗುತ್ತಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಟಿವಿ9ಗೆ ಎಕ್ಸ್​​ಕ್ಲೂಸಿವ್ ಆಗಿ ಸಿಕ್ಕಿದೆ.

ಇದನ್ನೂ ಓದಿ: ಮಂಡ್ಯ ಕ್ಷೇತ್ರ ಬಹುತೇಕ ಜೆಡಿಎಸ್​​ಗೆ ಫಿಕ್ಸ್​: ಮೈತ್ರಿ ಅಭ್ಯರ್ಥಿ ಯಾರು? ಸುಮಲತಾ ಅಂಬರೀಶ್ ಮುಂದಿನ ನಡೆ ಏನು?

ಕೆಲ ಸಚಿವರಿಗೆ ಟಿಕೆಟ್​ ನೀಡಲು ತೀರ್ಮಾನ

ಸದ್ಯ ಸಿದ್ದರಾಮಯ್ಯನವರ ಸರ್ಕಾರದಲ್ಲಿರುವ ಕೆಲ ಸಚಿವರನ್ನ ಲೋಕಸಭಾ ಚುನಾವಣಾ ಕಣಕ್ಕಿಳಿಸಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ಪ್ರಮುಖವಾಗಿ ಕೋಲಾರ ಕದನ ಕಣದಲ್ಲಿ ಸಚಿವ ಕೆ,ಹೆಚ್​ ಮುನಿಯಪ್ಪ ಅಥವಾ ಚಿಕ್ಕಪೆದ್ದಣ್ಣಗೆ ಟಿಕೆಟ್​ ಸಿಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ನರಸಿಂಹರಾಜು ಹೆಸರು ಕೇಳಿ ಬಂದಿದೆ. ಮೈಸೂರು ಕೊಡಗು ಲೋಕಸಭೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್​ ಅಥವಾ ವೈದ್ಯ ಶುಶ್ರುತ್​ ಗೌಡ ಹೆಸರು ಮುಂಚೂಣಿಯಲ್ಲಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯನವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆಗಳು ನಡೆದಿವೆ.

ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯ ಅಥವಾ ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಮಣೆ ಹಾಕುವ ಸಾಧ್ಯತೆ. ಬೆಳಗಾವಿಯಲ್ಲಿ ವೈದ್ಯ ಗಿರೀಶ್​ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್​, ಉತ್ತರ ಕನ್ನಡದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್​ ಅಥವಾ ಭೀಮಣ್ಣ ನಾಯಕ್, ತುಮಕೂರಿನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ, ಮಂಡ್ಯದಲ್ಲಿ ಸಮಾಜ ಸೇವಕ ಸ್ಟಾರ್​ ಚಂದ್ರು, ಕೊಪ್ಪಳ ರಾಘವೇಂದ್ರ ಹಿಟ್ನಾಳ್​ ಸಹೋದರ ರಾಜಶೇಖರ್ ಹಿಟ್ನಾಳ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಹಾಗೂ ಮಾಜಿ ಸಂಸದ ಶಿವರಾಮೇಗೌಡ ಹೆಸರು ಕೇಳಿಬರುತ್ತಿದೆ.

ಚಾಮರಾಜನಗರದಲ್ಲಿ ಸಚಿವ ಹೆಚ್​.ಸಿ ಮಹದೇವಪ್ಪ, ಬಳ್ಳಾರಿಯಲ್ಲಿ ಇ.ತುಕರಾಂ ಮಗಳು ಸೌಪರ್ಣಿಕಾ, ಬೀದರ್​ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಕಲಬುರಗಿ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣಗೆ ಟಿಕೆಟ್​ ಕೊಡುವ ಸಾಧ್ಯತೆ ಇದೆ. ಇಷ್ಟೇ ಅಲ್ಲ, ಬೆಂಗಳೂರು ದಕ್ಷಿಣಕ್ಕೆ ಎನ್​. ರಮೇಶ್​ ಕುಮಾರ್, ಬೆಂಗಳೂರು ಕೇಂದ್ರ ಹ್ಯಾರಿಸ್, ಬೆಂಗಳೂರು ಉತ್ತರಕ್ಕೆ ಕುಸುಮಾ ಹನುಮಂತರಾಯಪ್ಪ, ಹಾಸನಕ್ಕೆ ಶ್ರೇಯಸ್​ ಪಟೇಲ್​, ಹುಬ್ಬಳ್ಳಿ ಧಾರವಾಡಕ್ಕೆ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ, ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿಗೆ ಟಿಕೆಟ್ ನೀಡುವ ನಿರೀಕ್ಷೆ ಇದ್ದು, ಈ ಹೆಸರುಗಳನ್ನು ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಇಂತಿದೆ

  • ಕೋಲಾರ- ಕೆ,ಹೆಚ್​ ಮುನಿಯಪ್ಪ ಅಥವಾ ಚಿಕ್ಕಪೆದ್ದಣ್ಣ
  • ಮೈಸೂರು ಕೊಡಗು -ಎಂ.ಲಕ್ಷ್ಮಣ್​, ವೈದ್ಯ ಶುಶ್ರುತ್​ ಗೌಡ ಅಥವಾ ಯತೀಂದ್ರ ಸಿದ್ದರಾಮಯ್ಯ
  • ಚಿಕ್ಕಬಳ್ಳಾಪುರ-ರಕ್ಷಾ ರಾಮಯ್ಯ ಅಥವಾ ಮಾಜಿ ಸಿಎಂ ವೀರಪ್ಪ ಮೊಯ್ಲಿ
  • ಚಾಮರಾಜನಗರ-ಹೆಚ್​.ಸಿ ಮಹದೇವಪ್ಪ
  • ಬಳ್ಳಾರಿ-ಇ.ತುಕರಾಂ ಮಗಳು ಸೌಪರ್ಣಿಕಾ
  • ಬೀದರ್-ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ
  • ಕಲಬುರಗಿ-ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ
  • ಬೆಂಗಳೂರು ದಕ್ಷಿಣ-ಎನ್​. ರಮೇಶ್​ ಕುಮಾರ್
  • ಬೆಂಗಳೂರು ಕೇಂದ್ರ- ಹ್ಯಾರಿಸ್
  • ಬೆಂಗಳೂರು ಉತ್ತರ-ಕುಸುಮಾ ಹನುಮಂತರಾಯಪ್ಪ, ಸೌಮ್ಯಾ ರೆಡ್ಡಿ
  • ಹುಬ್ಬಳ್ಳಿ ಧಾರವಾಡ-ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ, ರಜತ್ ಉಳ್ಳಾಗಡ್ಡಿ
  • ಚಿಕ್ಕೋಡಿ-ಪ್ರಕಾಶ್ ಹುಕ್ಕೇರಿ
  • ಬೆಳಗಾವಿ-ವೈದ್ಯ ಗಿರೀಶ್​ ಅಥವಾ ಲಕ್ಷ್ಮೀ ಹೆಬ್ಬಾಳ್ಕರ್​ ಪುತ್ರ ಮೃಣಾಲ್
  • ಮಂಡ್ಯ-ಸಮಾಜ ಸೇವಕ ಸ್ಟಾರ್​ ಚಂದ್ರು ಅಥವಾ ಸುಮಲತಾ ಅಂಬರೀಶ್
  • ಕೊಪ್ಪಳ-ರಾಜಶೇಖರ್ ಹಿಟ್ನಾಳ್, ಅಮರೇಗೌಡ ಬಯ್ಯಾಪುರ, ಶಿವರಾಮೇಗೌಡ.
  • ತುಮಕೂರು; ಮುದ್ದಹನುಮೇಗೌಡ(ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ

ಕೊನೆ ಕ್ಷಣದಲ್ಲಿ ಲೆಕ್ಕಾಚಾರ ಬದಲಾಗಬಹುದು

ಸದ್ಯ ಇದು ಅಂತಿಮ ಅಭ್ಯರ್ಥಿಗಳ ಪಟ್ಟಿ ಅಲ್ಲ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಸಹಜವಾಗಿ ಜೆಡಿಎಸ್, ಬಿಜೆಪಿ ಎದುರಿಸಿ ಗೆಲ್ಲಬೇಕಿದೆ. ಹೀಗಾಗಿ ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಪಟ್ಟಿ ನೋಡಿಕೊಂಡು ತನ್ನ ಸ್ಟ್ರ್ಯಾಟಜಿ ಬದಲಾಯಿಸಬಹುದು. ಶಾರ್ಟ್ ಲಿಸ್ಟ್​​ನಲ್ಲಿರುವ ಅಭ್ಯರ್ಥಿಗಳ ಜಾಗಕ್ಕೆ ಹೊಸ ಮುಖಗಳೇ ಬಂದು ಸೇರಬಹುದು.

ಸದ್ಯದ ಪರಿಸ್ಥಿತಿಯಲ್ಲಿ ಒಂದೆರಡು ಸಚಿವರನ್ನು ಹೊರತುಪಡಿಸಿ ಉಳಿದಂತೆ ಯಾವ ಸಚಿವರು ಕೂಡ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಿಲ್ಲ. ಶಾರ್ಟ್ ಲಿಸ್ಟ್ ಆಗಿರುವ ಪ್ರಕಾರ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡುವುದಿಲ್ಲವೇನೋ ಅನ್ನೋ ಅನುಮಾನ ಹುಟ್ಟಿಕೊಂಡಿವೆ. ಪ್ರತಾಪ್ ಸಿಂಹ ಎದುರಾಳಿಯಾಗಿ ಬಹುತೇಕ ಒಕ್ಕಲಿಗ ನಾಯಕರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ತಯಾರಿ ಮಾಡಿಕೊಂಡಂತಿದೆ. ಮಂಡ್ಯದಲ್ಲಿ ಸುಮಲತಾರನ್ನ ಕರೆತರುವ ಬಗ್ಗೆ ಬಹುತೇಕ ಕೈ ನಾಯಕರಿಗೆ ಒಲವು ಇದ್ದಂತಿಲ್ಲ. ಪ್ರಹ್ಲಾದ್ ಜೋಶಿ ಪವರ್ ಕಡಿಮೆ ಮಾಡಲು ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಉತ್ತರ ಕನ್ನಡ, ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹುಡುಕಾಟ ಮಾಡುತ್ತಿದೆ.

ಎಲ್ಲವೂ ಅಂದುಕೊಂಡಂತೆ ಆದ್ರೆ ಫೆಬ್ರವರಿ ಅಂತ್ಯದ ವೇಳೆಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿ ರಿಲೀಸ್ ಮಾಡಿದ್ರು ಮಾಡಬಹುದು. ಏನೇ ಹೇಳಿ ರಾಜಕೀಯದಲ್ಲಿ ಒಂದು ನಿರ್ಣಯ ಶಾಶ್ವತ ಅಲ್ಲ. ರಾಜಕೀಯ ನಿರ್ಣಯ ಕ್ಷಣದಿಂದ ಕ್ಷಣಕ್ಕೆ, ಲೆಕ್ಕಚಾರದಿಂದ ಲೆಕ್ಕಾಚಾರಕ್ಕೆ ಬದಲಾಗುತ್ತೆ ಎನ್ನುವುದು ಮಾತ್ರ ವಾಸ್ತವ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Sun, 4 February 24