ಮಂಡ್ಯ ಕ್ಷೇತ್ರ ಬಹುತೇಕ ಜೆಡಿಎಸ್ಗೆ ಫಿಕ್ಸ್: ಮೈತ್ರಿ ಅಭ್ಯರ್ಥಿ ಯಾರು? ಸುಮಲತಾ ಅಂಬರೀಶ್ ಮುಂದಿನ ನಡೆ ಏನು?
ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರೇ ಈ ಬಾರಿ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡುವ ಲೆಕ್ಕಾಚಾರದಲ್ಲಿದ್ದರೂ, BJP ಹಾಗೂ JDS ನಡುವಿನ ಮೈತ್ರಿಯಿಂದಾಗಿ ಇದೀಗ ಮಂಡ್ಯ ಲೋಕಸಭಾ ಟಿಕೆಟ್ ಸುಮಲತಾ ಅವರಿಗೆ ಬಹುತೇಕ ಡೌಟ್ ಎನ್ನಲಾಗುತ್ತಿದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರು? ಎಂಬ ಕುತೂಹಲ ಕ್ಷೇತ್ರದ ಮತದಾರರು ಮಾತ್ರವಲ್ಲದೇ ಜೆಡಿಎಸ್ ಹಾಗೂ ಬಿಜೆಪಿ ಮಖಂಡರು ಹಾಗೂ ಕಾರ್ಯಕರ್ತರಲ್ಲೂ ಮನೆ ಮಾಡಿದೆ. ಹಾಗಾದ್ರೆ, ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಯಾರು? ಸುಮಾಲತಾ ಮುಂದಿನ ನಡೆ ಏನು?
ಬೆಂಗಳೂರು.ಮಂಡ್ಯ, (ಫೆಬ್ರವರಿ 04): ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಲೆಕ್ಕ ಒಂದಾದ್ರೆ, ಮಂಡ್ಯ ರಾಜಕಾರಣದ (Mandya Politics) ಲೆಕ್ಕವೇ ಬೇರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಮಂಡ್ಯ ಕಣ ಅಕ್ಷರಶಃ ರಣಾಂಗಣವಾಗಿತ್ತು. ಅಂದಿನ ಚುನಾವಣಾ ಕಾಳಗ ಮತ್ತೆ ಮರುಕಳಿಸೋ ಎಲ್ಲಾ ಲಕ್ಷಣಗಳು ಮಂಡ್ಯದಲ್ಲಿ ಗೋಚರಿಸುತ್ತಿವೆ. ಕಾರಣ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ರಾಜಕೀಯ ನಡೆ. ಹೌದು..ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದೆ. ಹೀಗಾಗಿ ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯಬೇಕೆಂದಿದ್ದ ಸುಮಲತಾ ಅಂಬರೀಶ್ಗೆ ಟಿಕೆಟ್ ಬಹುತೇಕ ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಅವರ ರಾಜಕೀಯ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಸ್ಪರ್ಧಿಸುವಂತೆ ಒತ್ತಡ
ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಹಾಲಿ ಸಂಸದೆ ಸುಮಲತಾ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಲಿದೆ ಎಂಬ ಕುರಿತು ಮಂಡ್ಯ ಜೆಡಿಎಸ್‌ನಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಡೆಸಿದ ಸರ್ವೆ ವರದಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಂತರೆ ಮಂಡ್ಯದಲ್ಲಿ ಗೆಲುವು ಫಿಕ್ಸ್ ಎಂದು ರಿಪೋರ್ಟ್ ಬಂದಿದೆ. ಇದರಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಳಪತಿಗಳು ಪಕ್ಷ ಸಂಘಟನೆಯ ಕೆಲಸ ಆರಂಭಿಸಿದ್ದಾರೆ. ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಹೈಕಮಾಂಡ್ ಕೂಡ ಒತ್ತಡ ಹೇರುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಲೋಕಸಭೆ ಸಮರ: ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯದಲ್ಲಿ ಬಿಜೆಪಿ ಅಲರ್ಟ್; ಇಂದು ಕಾರ್ಯಕಾರಿಣಿ ಸಭೆ
ಒಂದು ವೇಳೆ ಮಂಡ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಗೆಲುವಿನ ಹಾದಿ ಸುಲಭ ಎಂಬ ವರದಿ ಹೇಳಿದೆ. ಈಗಾಗಲೇ ವಿಧಾನಸಭೆಯಲ್ಲಿ ಜೆಡಿಎಸ್ ಗೆ ಸಾಕಷ್ಟು ಹಿನ್ನಡೆ ಆಗಿದೆ. ಇದರಿಂದ ಕಾರ್ಯಕರ್ತರು ಮತ್ತು ಮುಖಂಡರು ಉತ್ಸಾಹ ಕಳೆದುಕೊಂಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬರುತ್ತದೆ. ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ರೆ ಬಿಜೆಪಿ ಕಾರ್ಯಕರ್ತರು ಕೂಡ ಸಂಪೂರ್ಣ ಸಾಥ್ ನೀಡುತ್ತಾರೆ ಎನ್ನುವುದು ಬಿಜೆಪಿ ಹೈಕಮಾಂಡ್ನ ಮಾತು. ಅಲ್ಲದೇ ಕುಮಾರಸ್ವಾಮಿ ಸ್ಪರ್ಧೆ ಮಾಡಬೇಕೆಂದು ಜಿಲ್ಲಾ ಜೆಡಿಎಸ್ ನಾಯಕರು ಮನವಿ ಮಾಡಿದ್ದಾರೆ.
ಇದರ ಮಧ್ಯೆ ಡಿಕೆ ಸುರೇಶ್ನನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿಗೆ ಹೇಳಿದೆಯಂತೆ. ಒಂದು ವೇಳೆ ಮಂಡ್ಯದಲ್ಲಿ ಕುಮಾರಸ್ವಾಮಿ ನಿಲ್ಲಲು ನಿರಾಕರಿಸಿದರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿಎಸ್ ಪುಟ್ಟರಾಜು ಕಣ್ಣಕ್ಕಿಳಿಯವುದು ಬಹುತೇಕ ಖಚಿತ.
ಸುಮಲತಾ ಆಪ್ತನಿಗೆ ಗಾಳ!
ಮಂಡ್ಯದಲ್ಲಿ ಬಿಜೆಪಿ ಬಾವುಟ ಹಾರಿಸ್ತೀನಿ. ಬಿಜೆಪಿಯೇ ಮಂಡ್ಯ ಕ್ಷೇತ್ರವನ್ನ ಉಳಿಸಿಕೊಳ್ಳಬೇಕು. ಸುಮಲತಾ ಹೀಗಂತೇಳಿ ವಾರ ಕಳೆದಿಲ್ಲ. ಹೀಗಿರುವಾಗ ಮಂಡ್ಯದಲ್ಲಿ ದೊಡ್ಡ ಗೌಡರು ಹೊಸ ದಾಳ ಉರುಳಿಸಿದ್ದಾರೆ. ದೇವೇಗೌಡರ ದಾಳದಿಂದ ಮಂಡ್ಯದಲ್ಲಿ ಹೆಚ್‌ಡಿಕೆ ಸ್ಪರ್ಧೆ ಮಾಡ್ತಾರಾ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಜನವರಿ 28ರಂದು ನಡೆದ ಕಾರ್ಯಕರ್ಮವೊಂದರಲ್ಲಿ ಸುಮಲತಾ ಆಪ್ತ ಸಚ್ಚಿದಾನಂದರನ್ನ ಮನವೊಲಿಸುವಲ್ಲಿ ಹೆಚ್‌ಡಿಡಿ ಯಶಸ್ವಿಯಾಗಿದ್ದಾರೆ. ಸಚ್ಚಿದಾನಂದ ಯಡಿಯೂರಪ್ಪ ಅವರಿಗೂ ಶಿಷ್ಯ, ನನಗೂ ಶಿಷ್ಯ. ರಾಜಕಾರಣದಲ್ಲಿ ಯಾರು ಶತ್ರವೂ ಅಲ್ಲ, ಮಿತ್ರರು ಅಲ್ಲ ಎಂದಿದ್ದಾರೆ. ದೇವೇಗೌಡರ ಈ ನಡೆಯಿಂದ ಹೆಚ್‌ಡಿಕೆ ಮಂಡ್ಯದಿಂದ ಸ್ಪರ್ಧಿಸ್ತಾರಾ? ಮಗನ ಸ್ಪರ್ಧೆಗಾಗಿ ಸುಮಲತಾ ಆಪ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ತಿದ್ದಾರಾ ಅನ್ನೋ ಚರ್ಚೆ ಗರಿಗೆದರಿದೆ. ಒಂದು ವೇಳೆ ಮಗನ ಸ್ಪರ್ಧೆಗಾಗಿ ಹೆಚ್‌ಡಿಡಿ ಲೆಕ್ಕಾಚಾರ ಹಾಕಿ, ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದ್ರೆ, ಬಿಜೆಪಿಯಿಂದ ಸ್ಪರ್ಧಿಸ್ಬೇಕೆಂಬ ಸುಮಲತಾ ಕನಸು ಛಿದ್ರವಾದಂತೆಯೇ ಅಂತಾ ಅಖಾಡದಲ್ಲಿ ಗುಸುಗುಸು ಚರ್ಚೆ ಶುರುವಾಗಿದೆ.
ಸುಮಲತಾಗೆ ಕಾಂಗ್ರೆಸ್ ಬಾಗಿಲು ಬಂದ್!
ಕಾಂಗ್ರೆಸ್‌ನಿಂದಲೂ ನನಗೆ ಆಹ್ವಾನವಿದೆ ಅಂತಿದ್ದ ಸುಮಲತಾಗೆ ಕೈ ನಾಯಕರು ಬಾಗಿಲು ಮುಚ್ಚಿದ್ದಾರೆ ಎನ್ನಲಾಗ್ತಿದೆ. ಸುಮಲತಾರನ್ನ ಕಾಂಗ್ರೆಸ್‌ಗೆ ಕರೆತರುವ ಬಗ್ಗೆ ಪಕ್ಷದಲ್ಲಿ ಒಮ್ಮತ ಮೂಡಿಲ್ಲ. ಮಂಡ್ಯದಲ್ಲಿ ಕ್ಲೀನ್ ಇಮೇಜ್ ಇರುವ ರಾಜಕೀಯ ಹಿನ್ನೆಲೆ ಇಲ್ಲದ ವ್ಯಕ್ತಿ ಮಣೆ ಹಾಕಿ ಹಾಕಿ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಸುಮಲತಾರನ್ನ ಕಾಂಗ್ರೆಸ್‌ಗೆ ಕರೆತಂದು ಮಂಡ್ಯ ಟಿಕೆಟ್ ಕೊಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಕಾಂಗ್ರೆಸ್ ಆಹ್ವಾನದ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಕಾಂಗ್ರೆಸ್ ಬಾಗಿಲು ಬಹುತೇಕ ಬಂದ್ ಆಗಿದೆ. ಹೀಗಾಗಿ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಮಂಡ್ಯದಿಂದ ಕಣಕ್ಕಿಳಿಯಬೇಕೆಂಬ ಸುಮಲತಾ ಲೆಕ್ಕಾ ಉಲ್ಟಾವಾದಂತಿದೆ.
ಮಂಡ್ಯ ಬಿಡಲ್ಲ ಎಂದಿದ್ದ ಸುಮಲತಾ ನಡೆಯೇ ನಿಗೂಢ!
ಪ್ರೀತಿ, ಅಭಿಮಾನ ಕೊಟ್ಟ ನೆಲ ಬಿಡಲ್ಲ ಎಂದಿದ್ದ ಸುಮಲತಾ ಈಗೇನ್ ಮಾಡುತ್ತಾರೆ ಎನ್ನುವ ಚರ್ಚೆಯೂ ಗರಿಗೆದರಿದೆ. ಬಿಜೆಪಿ-ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಮಂಡ್ಯದಲ್ಲೇ ಪಕ್ಷೇತರರಾಗಿ ಸ್ಪರ್ಧಿಸ್ತಾರಾ? ಅಥವಾ ಬಿಜೆಪಿ ನಾಯಕರು ಸುಮಲತಾರನ್ನ ಮನವೊಲಿಸಿ ಬೇರೆ ಕ್ಷೇತ್ರದಲ್ಲಿ ಟಿಕೆಟ್ ಕೊಡುತ್ತಾರಾ? ಇದಕ್ಕೆ ಸುಮಲತಾ ಒಪ್ತಾರಾ? ಎನ್ನುವುದನ್ನು ಕಾದುನೀಡಬೇಕಿದೆ.
ಒಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮಂಡ್ಯ ರಾಜಕೀಯ ಭಾರೀ ಸದ್ದು ಮಾಡುವುದಂತೂ ಸತ್ಯ.