ಕೇಂದ್ರದಿಂದ ಸಮರ್ಪಕ ಅನುದಾನ ಬಂದಿಲ್ಲ, ಕಾಂಗ್ರೆಸ್ ಆರೋಪ: ಸಿದ್ದರಾಮಯ್ಯ, ಡಿಕೆಶಿಯನ್ನ ಚರ್ಚೆಗೆ ಆಹ್ವಾನಿಸಿದ ರೇಣುಕಾಚಾರ್ಯ
ಫೆಬ್ರವರಿ 01 ರಂದು ಮಂಡನೆಯಾಗಿದ್ದ ಕೇಂದ್ರ ಮಧ್ಯಂತರ ಬಜೆಟ್ನಲ್ಲಿ ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ಬಿಡುಗಡೆಯಾಗಿಲ್ಲವೆಂದು ರಾಜ್ಯ ಕಾಂಗ್ರೆಸ್ ಸರ್ಕಾರ ಆರೋಪಿ ಫೆ.07 ರಂದು ನವದೆಹಲಿಯಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಇದಕ್ಕೆ ಬಿಜೆಪಿ ನಾಯಕ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು, ಜನವರಿ 04: ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ (Budget) ರಾಜ್ಯಕ್ಕೆ ಸರಿಯಾಗಿ ಹಣ ಮಂಜೂರು ಮಾಡದ ಕೇಂದ್ರ ಸರ್ಕಾರದ (Central government) ವಿರುದ್ಧ ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Government) ನವದೆಹಲಿಯಲ್ಲಿ ಫೆ.7 ರಂದು ನವದೆಹಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಕ್ಕೆ ಮಾಜಿ ಸಚಿವ ರೇಣುಕಾಚಾರ್ಯ (Renukacharya) ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಪ್ರತಿಭಟನೆ ಯಾವ ಉದ್ದೇಶಕ್ಕೆ, ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾಧ್ಯಮದ ಮುಖಾಂತರ ಬಹಿರಂಗ ಸವಾಲು ಹಾಕುತ್ತೇನೆ, ಮನಮೋಹನ್ ಸಿಂಗ್ ಅವರ 10 ವರ್ಷದ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮೋದಿ ಎಷ್ಟು ಅನುದಾನ ಬಿಡುಗಡೆ ಮಾಡಿದೆ ಎಂಬುವುದರ ಬಗ್ಗೆ ಚರ್ಚಿಸೋಣ ಬನ್ನಿ. ನಾನು ಚರ್ಚಿಸಲು ಸಿದ್ದನಿದ್ದೇನೆ. ಈ ಬಗ್ಗೆ ಶ್ವೇತಪತ್ರ ಹೊರಡಿಸಿ. ನನ್ನ ಸವಾಲನ್ನು ಸ್ವೀಕಾರ ಮಾಡಿ ಎಂದರು.
ಸಂಸದ ಡಿಕೆ ಸುರೇಶ್ ಅವರು ದಕ್ಷಿಣದ ಹಣವನ್ನ ಬಳಸಿಕೊಂಡು ಉತ್ತರದವರಿಗೆ ಕೊಡುತ್ತಾರೆ ಎಂದಿದ್ದಾರೆ. ಈ ಮೂಲಕ ದೇಶ ಒಡೆಯುವ ಮಾತನಾಡಿದ್ದಾರೆ. ಮಾಧ್ಯಮದಲ್ಲಿ, ಸಾರ್ವಜನಿಕವಾಗಿ ಇಡೀ ದೇಶದಲ್ಲಿ ಇದಕ್ಕೆ ಖಂಡನೆ ವ್ಯಕ್ತವಾಗಿದೆ. ರಾಜ್ಯಸಭೆ, ಲೋಕಸಭೆಯಲ್ಲಿ ಕೂಡ ಕಾಂಗ್ರೆಸ್ಗೆ ಮುಜುಗರವಾಗಿದೆ. ಮತ್ತೊಂದು ಕಡೆ ಬಾಲಕೃಷ್ಣ ಅವರು ಮಂತ್ರಾಕ್ಷತೆ ಕೊಟ್ಟು ವೋಟ್ ಕೇಳುತ್ತಿದ್ದಾರೆ ಎಂದಿದ್ದಾರೆ. ಈ ಎಲ್ಲ ಮುಜುಗರವನ್ನು ಮರೆ ಮಾಚಲು ದೆಹಲಿಗೆ ಪ್ರತಿಭಟನೆ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ದಾಖಲೆ ಸಮೇತ ಚರ್ಚೆಗೆ ಬರುತ್ತೇವೆ
ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ರೈಲ್ವೆಗೆ, ನೀರಾವರಿ, ರಾಷ್ಟ್ರೀಯ ಹೆದ್ದಾರಿಗಳಿಗೆ, ರೈತರಿಗೆ, ಜನಧನ್ ಖಾತೆಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂಬುವುದರ ಬಗ್ಗೆ ದಾಖಲೆ ಕೊಡುತ್ತೇವೆ. ರಾಜ್ಯದಲ್ಲಿ ನಿಮ್ಮ ಸರ್ಕಾರ ಬಂದು 9 ತಿಂಗಳು ಕಳೆದೋಗಿದೆ. ಸರರ್ಕಾರ ಇಲ್ಲ ಸತ್ತೋಗಿದೆ. ಬದುಕಿದೆಯಾ? ಎಂದು ಪ್ರಶ್ನಿಸಿದರು.
ಕೇಸರಿ ಕಂಡರೆ ಆಗಲ್ಲ, ನಿಮಗೆ ಮಕ್ಮಲ್ ಟೋಪಿ ಇಷ್ಟ ಆಗುತ್ತೆ
ಕುಂಕುಮ ಹಚ್ಚಿದರೆ ಬೇಡ ಅಂತೀರ. ಕೇಸರಿ ಕಂಡರೆ ಆಗಲ್ಲ, ನಿಮಗೆ ಮಕ್ಮಲ್ ಟೋಪಿ ಇಷ್ಟ ಆಗುತ್ತೆ. ನಿಮಗೆ ತೀರ್ಥ ಪ್ರಸಾದ ಬೇಕಾಗಿಲ್ಲ, ಬೇಕಾಗಿರೋದು ಬಿರಿಯಾನಿ, ಬಾಡೂಟ ಬೇಕು. ನಮಗೆ ಸಿದ್ದರಾಮಯ್ಯ ಅವರ ಮೇಲೆ ಹಿಂದುಳಿದ ವರ್ಗದ ನಾಯಕರು ಅನ್ನೋ ಗೌರವವಿತ್ತು. ಸಿದ್ದರಾಮಯ್ಯ ಅವರ ತಂದೆ, ತಾಯಿ ಅವರಿಗೆ ರಾಮ ಎಂದು ಹೆಸರಿಟ್ಟಿದ್ದಾರೆ. ಡಿಕೆ ಶಿವಕುಮಾರ್ ತಂದೆ, ತಾಯಿ ಶಿವ ಎಂದು ಹೆಸರು ಇಟ್ಟಿದ್ದಾರೆ. ಆದರೆ ಇವರು ತಂದೆ, ತಾಯಿಗಳಿಗೆ ಅಪಮಾನ ಮಾಡುತ್ತಿದ್ದಾರೆ. ನಮ್ಮ ಧರ್ಮಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಡಿಕೆ ಸುರೇಶ್ ಮೇಲೆ ದೇಶದ್ರೋಹದ ಕೇಸ್ ಹಾಕಬೇಕಿತ್ತು
ಡಿಕೆ ಸುರೇಶ್ ಮೇಲೆ ದೇಶದ್ರೋಹದ ಕೇಸ್ ಹಾಕಬೇಕಿತ್ತು. ದೇಶ ಒಡೆದ ಕೀರ್ತಿ ಇರುವುದು ಕಾಂಗ್ರೆಸ್ನ ನೆಹರು ಕುಟುಂಬಕ್ಕೆ. ಒಂದು ಕಡೆ ರಾಹುಲ್ ಗಾಂಧಿ ಭಾರತ್ ಜೋಡೋ ಅಂತಾರೆ, ಆದರೆ ದೇಶವನ್ನ ಒಡೆದಿದ್ದೆ ಅವರ ಕುಟುಂಬದವರು. ಕಾಂಗ್ರೆಸ್ನಲ್ಲಿ ದೇಶದ್ರೋಹದ ಕೆಲಸ ಆಗುತ್ತಿದೆ. ಮಂಡ್ಯದಲ್ಲಿ ಹನುಮ ಧ್ವಜವನ್ನ ಇಳಿಸುತ್ತೀರಿ. ಶಿವಾಜಿನಗರದಲ್ಲಿ, ಮೈಸೂರಿನ ಕೆಲವು ಕಡೆ ಹತ್ತಾರು ವರ್ಷದಿಂದ ಹಸಿರು ಧ್ವಜ ಹಾರಾಡುತ್ತಿದೆ. ಅವರ ಮೇಲೆ ಪ್ರಕರಣ ದಾಖಲಿಸಿದ್ದೀರಾ? ಎಂದು ಪ್ರಶ್ನೆ ಮಾಡಿದರು.
ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡುತ್ತೀರಿ. ಆ ಪ್ರದೇಶವನ್ನು (ಕೆರಗೋಡು ಗ್ರಮ) ವನ್ನು ಪೋಲೀಸರ ಕಬ್ಜಾಗೆ ತೆಗೆದುಕೊಳ್ಳುತ್ತೀರಿ. ರಾಷ್ಟ್ರಧ್ವಜ ಬೆಳಿಗ್ಗೆ 9ರಿಂದ 6 ಗಂಟೆವರೆಗೆ ಮಾತ್ರ ಇರುವುದು. ಅವಧಿ ಮುಗಿದ ಮೇಲೆ ಹನುಮ ಧ್ವಜ ಹಾರಿಸಿದರೆ ಏನು ತಪ್ಪು? ಎಂದು ಹೇಳಿದರು.
ಮಾಗಡಿ ಶಾಸಕ ಬಾಲಕೃಷ್ಣ ಮಂತ್ರಾಕ್ಷತೆ ಕೊಟ್ಟು ಮತ ಕೇಳುತ್ತಾರೆ ಅಂತಾರೆ. ಅವರಿಗೆ ನಾಚಿಕೆ ಆಗಬೇಕು. ಚುನಾವಣೆಗೋಸ್ಕರ ಈ ಭರವಸೆಗಳು, ಚುನಾವಣೆ ಮುಗಿದ ಮೇಲೆ ಯಾವ ಭರವಸೆಯೂ ಇರಲ್ಲ. ನಾನು ಪವಿತ್ರವಾದ ಹನುಮನ ಮೂರ್ತಿ ಮುಂದೆ ಹೇಳುತ್ತೇನೆ, ಹನುಮನ ಶಾಪ, ರಾಮನ ಶಾಪ, ಕರಸೇವಕರ ಶಾಪ, ಮಹಿಳೆಯರ ಶಾಪದಿಂದ, ಲೋಕಸಭಾ ಚುನಾವಣೆಯ ಬಳಿಕ ಈ ಸರ್ಕಾರ ಪತನವಾಗುತ್ತೆ ಎಂದು ಭವಿಷ್ಯ ನುಡಿದರು.
I. N. D. I. A ಕೂಟದಿಂದ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಹೊರಗಡೆ ಬಂದಿದ್ದಾರೆ. ಅವರೇ 40 ಸ್ಥಾನ ಬರಲ್ಲ ಅಂತಾ ಹೇಳಿದ್ದಾರೆ. ಕಾಂಗ್ರೆಸ್ನ ಅಧಿಕಾರದಲ್ಲಿ ಇಡಿ, ಐಟಿ ರಾಜಮೌನ ವಹಿಸಿದ್ದವು ಎಂದರು. ಸಿ.ಟಿ.ರವಿ ಅವರು ರಾಷ್ಟ್ರಧ್ವಜವನ್ನ ತಾಲಿಬಾನ್ ಧ್ವಜಕ್ಕೆ ಹೋಲಿಸಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಸಿಟಿ ರವಿ ಅವರು ಹಾಗೆ ಹೇಳಿರುವ ಒಂದೇ ಒಂದು ವಿಡಿಯೋ ಇದ್ದರೂ ನಾನು ರಾಜಕೀಯಕ್ಕೆ ನಿವೃತ್ತಿ ಹೇಳುತ್ತೇನೆ ಎಂದು ನುಡಿದರು.
ರಾಹುಲ್ ಗಾಂಧಿ ಇನ್ನೂ ಪಪ್ಪು
ಈ ಬಾರಿಯೂ ಮೋದಿ ಹೆಸರಿನಲ್ಲಿಯೇ ಚುನಾವಣೆಗೆ ಹೋಗುತ್ತೀರಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಇನ್ನೇನು ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರಿನಲ್ಲಿ ಹೋಗಲು ಆಗುತ್ತಾ? ರಾಹುಲ್ ಗಾಂಧಿ ಇನ್ನೂ ಪಪ್ಪು. ಪ್ರಧಾನಿ ಮೋದಿ 10 ವರ್ಷ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರ ಹೆಸರಿನಲ್ಲಿಯೇ ಮತ ಕೇಳುತ್ತೇವೆ. ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Sun, 4 February 24