ಲೋಕಸಭೆ ಚುನಾವಣೆ: ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟು ಕೊಡದಂತೆ ಬಿಗಿ ಪಟ್ಟು: ಬಿಜೆಪಿ ನಾಯಕರು ಹೇಳಿದ್ದೇನು?

ಮಂಡ್ಯ ಲೋಕಸಭಾ ಕ್ಷೇತ್ರಕ್ಕಾಗಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರ ನಡುವೆ ಹಗ್ಗಾಜಗ್ಗಾಟ ನಡೆದಿದೆ. ಒಂದು ಜೆಡಿಎಸ್ ಮಂಡ್ಯವನ್ನು ತಮಗೆ ಕೊಡುವಂತೆ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟುಕೊಡದಂತೆ ಜಿಲ್ಲೆಯ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಲೋಕಸಭೆ ಚುನಾವಣೆ: ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟು ಕೊಡದಂತೆ ಬಿಗಿ ಪಟ್ಟು: ಬಿಜೆಪಿ ನಾಯಕರು ಹೇಳಿದ್ದೇನು?
ಮಾಜಿ ಶಾಸಕ ಪ್ರೀತಂ ಗೌಡ
Follow us
| Updated By: ವಿವೇಕ ಬಿರಾದಾರ

Updated on:Feb 04, 2024 | 4:30 PM

ಮಂಡ್ಯ, ಫೆಬ್ರವರಿ 04: ಎನ್‌ಡಿಎ (NDA) ಕೂಟಕ್ಕೆ ಜೆಡಿಎಸ್‌ ಸೇರಿದೆ ಅಷ್ಟೆ. ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಎಂದು ನಿರ್ಧಾರವಾಗಿಲ್ಲ. ಹಾಸನ (Hassan) ಹಾಗೂ ಮಂಡ್ಯ (Mandya) ಲೋಕಸಭಾ ಕ್ಷೇತ್ರಗಳು ಬಿಜೆಪಿಗೆ (BJP) ಸಿಗುತ್ತವೆ. ಒಂದು ವೇಳೆ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಡುವುದಾದರೆ ಮತ್ತು ಅಭ್ಯರ್ಥಿ ಆಯ್ಕೆಯಲ್ಲಿ ಕಾರ್ಯಕರ್ತರ ಒಪ್ಪಿಗೆ ಪಡೆಯಬೇಕು ಎಂದು ಪಾಂಡವಪುರದಲ್ಲಿ ಮಾಜಿ ಶಾಸಕ ಪ್ರೀತಂಗೌಡ (Preetham Gowda) ಹೇಳಿದರು.

ರವಿವಾರ (ಫೆ.04) ಪಾಂಡವಪುರದಲ್ಲಿ ನಡೆದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಬಿಜೆಪಿ ಗೆದ್ದಿರಲಿಲ್ಲ. ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ ಮೊದಲ ಬಾರಿಗೆ ಗೆದ್ದರು. ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಬಿಜೆಪಿ ಪಕ್ಷ ಕಟ್ಟೋಣ. ಮೈತ್ರಿಯಾಗಿದೆ ಟಿಕೆಟ್ ಬಿಟ್ಟುಕೊಡಬೇಕು ಎಂದು ಕಾರ್ಯಕರ್ತರು ಕುಂದುವ ಅವಶ್ಯಕತೆ ಇಲ್ಲ. ಬಿಜೆಪಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ ಎಂಬುವುದರ ಬಗ್ಗೆ ತೀರ್ಮಾನವಾಗಿಲ್ಲ ಎಂದರು.

ಹಾಸನ, ಮಂಡ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇತ್ತು. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಹೀಗಾಗಿ ನಮ್ಮ ಕಾರ್ಯಕರ್ತರು ಮಂಡ್ಯ ಕ್ಷೇತ್ರವನ್ನು ಕೇಳುತ್ತಿದ್ದಾರೆ. ಸಂಸದೆ ಸುಮಲತಾ ಅಂಬರೀಶ್​ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅವರ ಅಭಿಪ್ರಾಯ ಸಂಗ್ರಹಿಸಿ ನಾಯಕರಿಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ಜೆಡಿಎಸ್​​ನವರು ಮಂಡ್ಯ, ಹಾಸನ ಕ್ಷೇತ್ರ ಕೇಳುತ್ತಿರುವುದು ಸತ್ಯ

ಜೆಡಿಎಸ್​​ನವರು ಮಂಡ್ಯ, ಹಾಸನ ಕ್ಷೇತ್ರ ಕೇಳುತ್ತಿರುವುದು ಸತ್ಯ. ಹಾಸನದಲ್ಲಿ ಜೆಡಿಎಸ್ ಸಂಸದ ಇದ್ದಾರೆ ಅಂತ ಅಲ್ಲಿಯ ಟಿಕೆಟ್ ಕೇಳಬಾರದು. ಸುಮಲತಾ ಅಂಬರೀಶ್ ಅವರು​ ಮಂಡ್ಯ ಸಂಸದೆ. ಅವರು ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಈಗ ನಾವು ಸುಮಲತಾಗೆ ಟಿಕೆಟ್ ಎಂದು‌ ಕೇಳುವುದಕ್ಕೆ ಆಗುತ್ತಾ? ಎರಡು ಪಕ್ಷದ ಕಾರ್ಯಕರ್ತರ ಒಪ್ಪಿಗೆಯಿಂದ ಅಭ್ಯರ್ಥಿ ಆಯ್ಕೆಯಾಗಬೇಕು ಎಂದು ಒತ್ತಾಯಿಸುದರು.

ಇದನ್ನೂ ಓದಿ: ಮಂಡ್ಯದಿಂದಲೇ ಸ್ಪರ್ಧಿಸುವ ಹಟಹಿಡಿದಿರುವ ಸುಮಲತಾ ಅಂಬರೀಶ್ ಆಪ್ತರನ್ನು ತಮ್ಮತ್ತ ಸೆಳೆಯುವ ಕೆಲಸ ಶುರುಮಾಡಿದ ದೇವೇಗೌಡ!

ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ

ನಾನು ಸೋತಿದ್ದೇನೆ. ಆದರೆ ಅದರಿಂದ ಹೊರಬಂದು ಕೆಲಸ ಮಾಡುತ್ತಿದ್ದೇನೆ. ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ನಿಲ್ಲಲ್ಲ ಎಂದು ನಮ್ಮ ನಾಯಕರಿಗೂ ಹೇಳಿದ್ದೇನೆ. ಚುನಾವಣಾ ರಾಜಕೀಯದಲ್ಲಿ ಎಲ್ಲಿ‌ ಕಳೆದುಕೊಂಡಿದ್ದೇನೆ ಅಲ್ಲಿಯೇ ಹುಡುಕುತ್ತೇನೆ. ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಅಂತ ವರಿಷ್ಠರಿಗೆ ಹೇಳಿದ್ದೇನೆ. ನನಗೆ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ಇಲ್ಲಿ‌ ಜೆಡಿಎಸ್ ಜೊತೆ ಮನಸ್ತಾಪ ಎಲ್ಲಾ ಬೇರೆಯವರ ಅನಿಸಿಕೆ ಅಷ್ಟೆ ಎಂದು ಜಾರಿಕೊಂಡರು.

ಮೊದಲು ನಾವು ನೆಂಟಸ್ಥಿಕೆಯನ್ನು ಬಿಡಬೇಕು

ನಮಗೆ ಲೋಕಸಭೆ ಚುನಾವಣೆ ಗೆಲುವು ಮಾನದಂಡ ಅಷ್ಟೆ. ಸರ್ವೇ ರಿಪೋರ್ಟ್ ಯಾರಿಗೆ ಬರುತ್ತೆ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಮುಂದೆ ಪಕ್ಷ ಬೆಳೆಯಬೇಕು ಅಂದರೇ ದಿಟ್ಟ ನಿರ್ಧಾರ ತೆಗೆದುಕೊಳ್ಳಿ ಎಂದು ಕಾರ್ಯಕರ್ತರು ಹೇಳಿದ್ದಾರೆ. ಅದನ್ನು ನಮ್ಮ ನಾಯಕರಿಗೆ ಹೇಳುತ್ತೇನೆ. ಮೊದಲು ನಾವು ನೆಂಟಸ್ಥಿಕೆಯನ್ನು ಬಿಡಬೇಕು. ಮೊದಲು ಪಕ್ಷಬೇಕು, ಅದಕ್ಕೂ ಮೊದಲು ದೇಶ ಬೇಕು ಎನ್ನಬೇಕು. ಚುನಾವಣೆ ಸಮಯದಲ್ಲಿ ಮಂಡ್ಯದಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಕುಟುಂಬ ರಾಜಕಾರಣದ ವಿರುದ್ಧ ನಮ್ಮ ಸಂಕಲ್ಪ ಇರುತ್ತದೆ. ಮಂಡ್ಯದಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿದೆ. ದೇಶದಲ್ಲಿ ಕುಟುಂಬ ರಾಜಕಾರಣ ದೊಡ್ಡ ಪಿಡುಗು. ಪ್ರಾದೇಶಿಕ ಪಕ್ಷಗಳಲ್ಲಿ ನಾವು ಕುಟುಂಬ ರಾಜಕಾರಣ ಕಾಣುತ್ತೇವೆ. ನಮ್ಮ ರಾಜ್ಯದ ಬಗ್ಗೆ ಹೇಳುವುದು ಬೇಡ, ಅದು ನಿಮಗೆ ಗೊತ್ತಿದೆ. ಪರೋಕ್ಷವಾಗಿ ಜೆಡಿಎಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದರು.

ಮಲ್ಲಿಕಾರ್ಜುನ್ ಖರ್ಗೆ​​ ಅವರು 400 ಸೀಟ್ ಬರುತ್ತೆ ಅಂತ ಹೇಳಿದ್ದಾರೆ. ನಮ್ಮ ಗುರಿ ಏನಂದರೆ ಕಾಂಗ್ರೆಸ್ 40 ಸೀಟ್ ಪಡೆಯದಂತೆ ಮಾಡುವುದು. ದೇಶದಲ್ಲಿ ಗಮನಾರ್ಹ ಬದಲಾವಣೆಯನ್ನು ಪ್ರಧಾನಿ ಮೋದಿ ತಂದಿದ್ದಾರೆ. ಮೋದಿ ಅವರ ಸಾಧನೆಯನ್ನ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಆಗಬೇಕಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನ ನಮ್ಮದು ಎಂದು ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರಗೋಡಿನಲ್ಲಿನ ಆಚಾರ ವಿಚಾರವನ್ನು ಕಾಂಗ್ರೆಸ್ ವಿರೋಧ ಮಾಡಿದೆ. ಇದನ್ನು ಅದನ್ನು ನಮ್ಮ ಪಕ್ಷ ವಿರೋಧಿಸುವಲ್ಲಿ ಯಶಸ್ವಿಯಾಗಿದೆ. ಕೆರಗೋಡಿನ ಜನರೊಂದಿಗೆ ಬಿಜೆಪಿ ನಿಂತು ಹೋರಾಟ ಮಾಡಿದೆ. ಇದು‌ ಜನರಲ್ಲಿ ವಿಶ್ವಾಸ ಮೂಡಿಸಿದೆ. ಪ್ರತಿಭಟನೆಯಲ್ಲಿ ಕುಮಾರಸ್ವಾಮಿ ಅವರು ಬಂದಾಗ ಹೋಗಿಲ್ಲ. ನನ್ನ ಪಾತ್ರ ಏನು ಅಷ್ಟು ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಲಿ: ನಾರಾಯಣಗೌಡ

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಲಿ. ವಿಧಾನಸಭೆ ಚುನಾವಣೆಯಲ್ಲಿ ಸಂಸದೆ ಸುಮಲತಾ ಬೆಂಬಲ ನೀಡಿರು. ಸುಮಲತಾಗೆ ಟಿಕೆಟ್ ನೀಡಿದರೆ ತಪ್ಪೇನು ಎಂದು‌ ಕೇಳಿದ್ದೇವೆ. ಹೈಕಮಾಂಡ್​ ಬಳಿ ಈ ಬಗ್ಗೆ ಹೇಳುತ್ತೇವೆ. ಸಂಸದೆ ಸುಮಲತಾ ನಿವಾಸದಲ್ಲಿ ನಡೆದ ಸಭೆಗೆ ಹೋಗಿದ್ದೆ. ಆಗ ಸುಮಲತಾ ಮಂಡ್ಯದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದಿದ್ದರು. ನಾನು ಬಿಜೆಪಿ ಬಿಟ್ಟು ಹೋಗುವ ಮಾತು ಇಲ್ಲ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:29 pm, Sun, 4 February 24