ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಮೈಸೂರು ಜಿಲ್ಲೆಯ ಶಾಸಕರು-ಮಾಜಿ ಶಾಸಕರಿಗೆ ಮಹತ್ವದ ಟಾಸ್ಕ್ ಕೊಟ್ಟ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಪುತ್ರ ಯತೀಂದ್ರ ಸಿದ್ದರಾಮಯ್ಯಗೆ ಈ ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್ ಕಾರ್ಯಕರ್ತರಿಂದ ಕೇಳಿಬಂದಿದೆ. ಮತ್ತೊಂದೆಡೆ ಪಕ್ಷ ಸೂಚಿಸಿದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಸ್ವತಃ ಯತೀಂದ್ರ ಸಹ ಇತ್ತೀಚೆಗೆ ಹೇಳಿದ್ದರು. ಇದಾದ ಬಳಿ ಸಿದ್ದರಾಮಯ್ಯ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯತೀಂದ್ರ ಸ್ಪರ್ಧಿಸಲಿದ್ದಾರೆ ಎಂಬ ಸುಳಿವನ್ನು ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಅವರು ತಮ್ಮ ಮಗನ ಸ್ಪರ್ಧೆ ಬಗ್ಗೆ ಕ್ಷೇತ್ರದ ಮಾಜಿ ಹಾಗೂ ಹಾಲಿ ಶಾಸಕರ ಮುಕ್ತ ಅಭಿಪ್ರಾಯ ಕೇಳಿದ್ದಾರೆ ಎಂದು ತಿಳಿದಬಂದಿದೆ.
ಬೆಂಗಳೂರು.ಮೈಸೂರು, (ಫೆಬ್ರವರಿ 04): ಈ ಬಾರಿ ಲೋಕಸಭಾ ಚುನಾವಣೆ (Loksabha Elections 2024) ರಂಗೇರಿದೆ. ಈ ಸಂಬಂಧ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಕಾಂಗ್ರೆಸ್ (Congress) ಕೆಲ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿದೆ. ಅದರಲ್ಲೂ ಮುಖ್ಯವಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಲಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಚಿಂತನೆ ನಡೆಸಿದ್ದಾರೆ. ಹೀಗಾಗಿ ಯತೀಂದ್ರ (Yatindra Siddaramaiah) ಸ್ಪರ್ಧಿಸಿದರೆ ಹೇಗೆ ಎನ್ನುವ ಬಗ್ಗೆ ಸಿದ್ದರಾಮಯ್ಯ ಅವರು ಜಿಲ್ಲೆಯ ಶಾಸಕ ಹಾಗೂ ಮಾಜಿ ಶಾಸಕರ ಬಳಿ ಅಭಿಪ್ರಾಯ ಕೇಳಿದ್ದಾರೆ. ಅಲ್ಲದೇ ಪ್ರತಿ ಕ್ಷೇತ್ರದ ಜಾತಿವಾರು ಅಂಕಿ ಅಂಶ ಸಮೇತ ಮಾಹಿತಿ ಕೊಡುವಂತೆ ಶಾಸಕರುಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದಬಂದಿದೆ.
ಮೊನ್ನೆ ಮೈಸೂರು-ಕೊಡಗು ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಿಎಂ ಸಿದ್ದರಾಂಯ್ಯನವರು ತಮ್ಮ ಮಗನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸುವ ಬಗ್ಗೆ ಶಾಸಕ ಹಾಗೂ ಮಾಜಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಅದೇ ವೇಳೆ ಪ್ರತಿ ಕ್ಷೇತ್ರದ ಜಾತಿವಾರು ಸಮೇತ ಮಾಹಿತಿ ಕೇಳಿದ್ದಾರಂತೆ. ತಮ್ಮ ಮಗನ ಸ್ಪರ್ಧೆ ಬಗ್ಗೆ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರನ್ನ ಕೂರಿಸಿಕೊಂಡು ಒಬ್ಬೊಬ್ಬ ಮಾಜಿ ಹಾಗೂ ಹಾಲಿ ಶಾಸಕರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಕ್ತ ಅಭಿಪ್ರಾಯ ಕೇಳಿದ್ದು, ಯತೀಂದ್ರ ಸ್ಪರ್ಧೆಗೆ ಈ ಸಂದರ್ಭ ಸರಿ ಇಲ್ಲ ಎಂಬ ಅಭಿಪ್ರಾಯವನ್ನು ಮೂವರು ಶಾಸಕರು ಹಾಗೂ ಓರ್ವ ಮಾಜಿ ಶಾಸಕ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿರುವ ವೇಳೆ ಯತೀಂದ್ರ ನಿಲ್ಲಿಸಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರಂತೆ. ಇನ್ನು ಯತೀಂದ್ರ ಸ್ಪರ್ಧೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಓರ್ವ ಮಾಜಿ ಶಾಸಕ ಹಾಗೂ ಓರ್ವ ಪರಾಜಿತ ಅಭ್ಯರ್ಥಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಭಿಪ್ರಾಯ ಸಂಗ್ರಹಿಸಿರುವ ಸಿದ್ದರಾಮಯ್ಯ, ಮುಂದಿನ ಬಾರಿ ಮೈಸೂರಿಗೆ ಬರುವ ವೇಳೆಗೆ ಪ್ರತಿ ಕ್ಷೇತ್ರದ ಜಾತಿವಾರು ಅಂಕಿ ಅಂಶದ ಸಮೇತ ಮಾಹಿತಿ ಕೊಡುವಂತೆ ಶಾಸಕರು ಹಾಗೂ ಮಾಜಿ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ ತಮಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಸಿದ್ದರಾಮಯ್ಯ ಅವರು ಹಲವು ಲೆಕ್ಕಾಚಾರಗಳನ್ನು ಹಾಕುತ್ತಿದ್ದು, ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಸಂಬಂಧ ಜಿಲ್ಲೆಯ ಶಾಸಕರು ಹಾಗೂ ಮಾಜಿ ಶಾಸಕರಿಗೆ ಮಹತ್ವದ ಟಾಸ್ಕ್ ಕೊಟ್ಟಿದ್ದಾರೆ. ಇದು ಮುಂದೆ ಏನೆಲ್ಲಾ ಬೆಳವಣಿಗೆಗಳು ಆಗಲಿವೆ ಎನ್ನುವುದನ್ನು ಕಾದುನೋಡಬೇಕಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ