ಡಾ.ಕೆ.ಸುಧಾಕರ ನೀಡಿದ ‘ಏಕಪತ್ನಿವ್ರತಸ್ಥ’ ಹೇಳಿಕೆಗೆ ಕಾಂಗ್ರೆಸ್ ಪ್ರತ್ಯಸ್ತ್ರ: ಸಿದ್ದರಾಮಯ್ಯ ಮನೆಯಲ್ಲಿ ರಣತಂತ್ರ
ಸುಧಾಕರ್ ಹೇಳಿಕೆಯ ನಂತರ ಕಾಂಗ್ರೆಸ್ ಪಾಳಯ ಒಮ್ಮೆಲೆ ಚುರುಕಾಗಿದ್ದು, ಬುಧವಾರ ಹಲವು ಕ್ಷಿಪ್ರಗತಿಯ ಪ್ರತಿಕ್ರಿಯೆ ಮತ್ತು ರಾಜಕೀಯ ಬೆಳವಣಿಗೆಗಳು ಕಂಡುಬಂದವು.
ಬೆಂಗಳೂರು: ಆರೋಗ್ಯ ಸಚಿವ ಡಾ.ಸುಧಾಕರ ನೀಡಿರುವ ಏಕಪತ್ನಿವ್ರಸ್ಥ ವಿಚಾರವನ್ನು ಪ್ರತಿಪಕ್ಷಗಳು ಗಂಭೀರವಾಗಿ ತೆಗೆದುಕೊಂಡಿವೆ. ಈ ಕುರಿತು ವಿಶೇಷ ಕಾರ್ಯಪಡೆ (ಎಸ್ಐಟಿ) ರಚಿಸಿ, ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರಬರೆದು ಒತ್ತಾಯಿಸಲು ಕಾಂಗ್ರೆಸ್ ನಿರ್ಧರಿಸಿದೆ. ಸುಧಾಕರ್ ಹೇಳಿಕೆಯ ನಂತರ ಕಾಂಗ್ರೆಸ್ ಪಾಳಯ ಒಮ್ಮೆಲೆ ಚುರುಕಾಗಿದ್ದು, ಬುಧವಾರ ಹಲವು ಕ್ಷಿಪ್ರಗತಿಯ ಪ್ರತಿಕ್ರಿಯೆ ಮತ್ತು ರಾಜಕೀಯ ಬೆಳವಣಿಗೆಗಳು ಕಂಡುಬಂದವು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಮುಂದಿನ ನಡೆ ನಿರ್ಧರಿಸಲೆಂದು ಭೋಜನಕೂಟ ಆಯೋಜಿಸಲಾಗಿದೆ. ಹಲವು ಹಿರಿಯ ನಾಯಕರು ಮತ್ತು ಶಾಸಕರು ಭೋಜನಕೂಟದಲ್ಲಿ ಪಾಲ್ಗೊಂಡಿದ್ದಾರೆ. ಸುಧಾಕರ್ ಹೇಳಿಕೆಯ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆಗೆ ಒತ್ತಾಯಿಸಲು ಶಾಸಕರಿಂದ ಸಹಿ ಸಂಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿದೆ. ಸಹಿ ಸಂಗ್ರಹದ ನಿರ್ಧಾರ ಡಿ.ಕೆ.ಶಿವಕುಮಾರ್ ಅವರದು ಎನ್ನಲಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬರೆದ ಪತ್ರ ಆಧರಿಸಿ ಗೃಹ ಸಚಿವರು ಎಸ್ಐಟಿ ತನಿಖೆಗೆ ಸೂಚಿಸಿದ್ದಾರೆ. ಅದೇ ಮಾದರಿಯಲ್ಲಿ ಈಗ ನಮ್ಮ ಶಾಸಕರು ನೀಡಿರುವ ಪತ್ರ ಆಧರಿಸಿ, ಎಲ್ಲ ಶಾಸಕರ ವಿರುದ್ಧ ತನಿಖೆ ನಡೆಸಲು ಎಸ್ಐಟಿಗೆ ಅಧಿಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಒತ್ತಾಯಿಸಲಿದೆ.
ಬೆಂಗಳೂರಿನ ಗಾಂಧೀಭವನ ರಸ್ತೆಯಲ್ಲಿರುವ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಮುಂಭಾಗದ ಲಾನ್ನಲ್ಲಿ ಶಾಮಿಯಾನಾ ಹಾಕಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಶಾಸಕರು, ಹಿರಿಯ ನಾಯಕರನ್ನು ವಿಶ್ವಾಸದಿಂದ ಸಿದ್ದರಾಮಯ್ಯ ಆತ್ಮೀಯವಾಗಿ ಸ್ವಾಗತಿಸುತ್ತಿದ್ದಾರೆ.
ಸಿದ್ದರಾಮಯ್ಯ ನಿವಾಸದಲ್ಲಿ ಯಾರೆಲ್ಲಾ ಇದ್ದಾರೆ ಸಿದ್ದರಾಮಯ್ಯ ನಿವಾಸಕ್ಕೆ ಕಾಂಗ್ರೆಸ್ ಶಾಸಕರಾದ ಡಿ.ಕೆ.ಶಿವಕುಮಾರ್, ರಮೇಶ್‌ಕುಮಾರ್, ಎಚ್.ಕೆ.ಪಾಟೀಲ್, ಶರತ್ ಬಚ್ಚೇಗೌಡ, ಗಣೇಶ್ ಹುಕ್ಕೇರಿ, ಪಿ.ಟಿ.ಪರಮೇಶ್ವರ್ ನಾಯಕ್, ಅನಿಲ್ ಚಿಕ್ಕಮಾದು, ಸತೀಶ್ ಜಾರಕಿಹೊಳಿ, ಅಭಯ ಚಂದ್ರ ಜೈನ್, ಅಂಜಲಿ ನಿಂಬಾಳ್ಕರ್, ರೂಪಾ ಶಶಿಧರ್, ಕೆ.ಜೆ. ಜಾರ್ಜ್, ಪುಟ್ಟರಂಗ ಶೆಟ್ಟಿ, ರಹಮಾನ್ ಖಾನ್, ಶಿಡ್ಲಘಟ್ಟ ಮುನಿಯಪ್ಪ, ಪ್ರಿಯಾಂಕ ಖರ್ಗೆ, ಸೌಮ್ಯ ರೆಡ್ಡಿ ಸೇರಿದಂತೆ ಹಲವು ಶಾಸಕರು ಬಂದಿದ್ದಾರೆ.
ಸಂಸದರು, ಪರಿಷತ್ ಸದಸ್ಯರನ್ನು ಬಿಟ್ಟಿದ್ದೇಕೆ? ರಾಜ್ಯದ ಎಲ್ಲ ಶಾಸಕರ ವಿರುದ್ಧ ತನಿಖೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಆಗ್ರಹ ಮಾಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ, ವಿಧಾನಪ ಪರಿಷತ್ ಸದಸ್ಯರು ಮತ್ತು ಸಂಸದರನ್ನ ಕೈಬಿಟ್ಟಿದ್ದು ಏಕೆಂದು ಪ್ರಶ್ನಿಸಿದರು.
‘ಸುಧಾಕರ್ ಬುದ್ಧಿವಂತರು. ಏಕೆ ಹೀಗೆ ಹೇಳಿದ್ರೋ ಗೊತ್ತಾಗ್ತಿಲ್ಲ. ಸಚಿವ ಡಾ.ಕೆ.ಸುಧಾಕರ್ ಮಾತನಾಡಿರುವುದು ತಪ್ಪು. ಹೀಗೆ ಮಾತನಾಡಬೇಡಿ ಎಂದು ಸುಧಾಕರ್‌ಗೆ ಹೇಳ್ತೇನೆ’ ಎಂದು ಮಾಜಿ ಸಚಿವರೂ ಆಗಿರುವ ರಾಮಲಿಂಗಾರೆಡ್ಡಿ ಹೇಳಿದರು.