ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಕಾಂಗ್ರೆಸ್ (Congress) ಚಿಂತನ ಶಿಬಿರ ನಡೆಯುತ್ತಿದ್ದು, ಸಭೆಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಕರ್ನಾಟಕ ರಾಜ್ಯ ರಾಜಕಾರಣದ ಬಗ್ಗೆಯು ಗಂಭೀರ ಚರ್ಚೆಗಳು ನಡೆಯುತ್ತಿವೆ. ಈ ಚಿಂತನ ಶಿಬಿರದಲ್ಲಿ 2023ರ ವಿಧಾನಸಭಾ ಚುನಾವಣೆಯ ತಯಾರಿಯ ಬ್ಲೂ ಪ್ರಿಂಟ್ ನೀಡುವಂತೆ (KPCC) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ (DK Shivakumar) ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ.
ಈಗಾಗಲೇ ವಿಧಾನಸಭಾವಾರು ಸಮೀಕ್ಷೆ ನಡೆಸಿರುವ ಕಾಂಗ್ರೆಸ್ ಹೈಕಮಾಂಡ್, ಈಗ ಕೆಪಿಸಿಸಿಯಿಂದಲೂ ಚುನಾವಣಾ ಸಮೀಕ್ಷೆ ನಡೆಸುವಂತೆ ಸೂಚನೆ ನೀಡಿದೆ. ಸಭೆಯ ನಂತರ ಕಾಂಗ್ರೆಸ್ ಹಿರಿಯ ನಾಯಕರನ್ನು ಡಿಕೆಶಿ ಭೇಟಿಯಾಗಲಿದ್ದಾರೆ. ವರಿಷ್ಠರ ಭೇಟಿಯಲ್ಲಿ ಪಕ್ಷದ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಹಾಗೇ ಸಮಯ ಸಿಕ್ಕರೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಭೇಟಿಯಾಗುವ ಸಾಧ್ಯತೆ ಇದೆ.
ಪಂಚರಾಜ್ಯ ರಾಜ್ಯಗಳ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ನಡೆಯುತ್ತಿರುವ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಇತರ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಅಂಬಿಕಾ ಸೋನಿ, ಸಲ್ಮಾನ್ ಖುರ್ಷಿದ್, ಅಜಯ್ ಮಾಕನ್, ಪ್ರಿಯಾಂಕಾ ಗಾಂಧಿ, ಪಿ ಚಿದಂಬರಂ, ಅಶೋಕ್ ಗೆಹ್ಲೋಟ್, ಅಧಿರಾಜನ್ ಚೌಧರಿ, ಜಿತೇಂದ್ರ ಭವಾರ್ ಸಿಂಗ್, ಡಾ. ಅಜೋಯ್ ಕುಮಾರ್, ದಿಗ್ವಿಜಯ್ ಸಿಂಗ್, ಆನಂದ್ ಶರ್ಮಾ, ಭೂಪೇಶ್ ಭಾಗೇಲ್, ತಾರಿಕ್ ಅನ್ವರ್ ಮತ್ತು ಹರೀಶ್ ರಾವತ್ ಸಭೆಗೆ ಆಗಮಿಸಿದ್ದಾರೆ.
ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಪಾಲ್ಗೊಳ್ಳಲಿರುವ ನಾಯಕರು ಸ್ಮಾರ್ಟ್‌ಫೋನ್ ಕೊಂಡೊಯ್ಯುವಂತಿಲ್ಲ ಎಂದು ವರದಿಗಳು ತಿಳಿಸಿವೆ. ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯೊಳಗೆ ಸಿಡಬ್ಲ್ಯುಸಿ ಸಭೆ ಪ್ರಾರಂಭವಾಗುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯ ಹೊರಗೆ ಜಮಾಯಿಸಿ ಗಾಂಧಿಗಳ ಪರವಾಗಿ ಘೋಷಣೆಗಳನ್ನು ಕೂಗಿದರು ಮತ್ತು ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಾಯಿಸಿದರು.
Published On - 4:57 pm, Fri, 13 May 22