ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ 18ರಿಂದ 44 ವರ್ಷದೊಳಗಿನವರಿಗೆ ಸರ್ಕಾರ ಸ್ಥಾಪಿಸಿರುವ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ₹ 1,200 ಪಾವತಿಸಿದರೆ ಲಸಿಕೆ ಸಿಗುತ್ತಿದೆ. ಹಣವಿಲ್ಲದವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಆಗುವುದಿಲ್ಲ. ಸಮಾನತೆ ಹಕ್ಕಿನಡಿ ಸರ್ಕಾರ ಈ ವಿಚಾರವನ್ನು ಪರಿಗಣಿಸಬೇಕು. ಲಸಿಕೆ ಸಮಸ್ಯೆಗೆ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.
ಕೇಂದ್ರ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, ರಾಜ್ಯದಲ್ಲಿ 85 ಸಾವಿರ ಡೋಸ್ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಖರೀದಿಸಿವೆ. ಕೇಂದ್ರ ಸರ್ಕಾರ ಶೇ 50ರಷ್ಟು ಲಸಿಕೆ ಪೂರೈಸುತ್ತಿದೆ. ರಾಜ್ಯ ಸರ್ಕಾರಗಳು ಶೇ.25ರಷ್ಟು ಖರೀದಿಸುತ್ತಿವೆ. ಶೇ 25ರಷ್ಟು ಪ್ರಮಾಣದ ಲಸಿಕೆಯನ್ನು ಮಾತ್ರ ಖಾಸಗಿ ಆಸ್ಪತ್ರೆಗಳು ಖರೀದಿಸಲು ಅವಕಾಶವಿದೆ. ರಾಜ್ಯದೊಳಗೆ ಲಸಿಕೆ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು ಎಂದು ಮಾಹಿತಿ ನೀಡಿದರು.
ಮೊದಲ ಡೋಸ್ ಲಸಿಕೆಯಾಗಿ ಕೊವ್ಯಾಕ್ಸಿನ್ ಪಡೆದ ರಾಜ್ಯದ ಜನರು 2ನೇ ಡೋಸ್ ಪಡೆದುಕೊಳ್ಳಲು ಪರದಾಡುತ್ತಿರುವ ವಿಚಾರದ ಬಗ್ಗೆ ಹೈಕೋರ್ಟ್ ಇಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ರಾಜ್ಯ ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮೇ 28ಕ್ಕೆ 3.65 ಲಕ್ಷ ಜನರಿಗೆ 2ನೇ ಡೋಸ್ ಬೇಕಾಗುತ್ತದೆ. ಜೂ.1ರೊಳಗೆ 4.20 ಲಕ್ಷ ಕೊವ್ಯಾಕ್ಸಿನ್ ಲಭ್ಯವಾಗಲಿದೆ. ಹೀಗಾಗಿ 2ನೇ ಡೋಸ್ ಕೊವ್ಯಾಕ್ಸಿನ್ ಕೊರತೆಯಾಗುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಸದ್ಯಕ್ಕೆ 2ನೇ ಡೋಸ್ ಲಸಿಕೆ ಕೊರತೆ ಇಲ್ಲ. 2ನೇ ಡೋಸ್ಗೆ ಕೋವ್ಯಾಕ್ಸಿನ್ ಬಳಸುವಂತೆ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ. 18 ರಿಂದ 44 ವರ್ಷದವರಿಗೂ ಲಸಿಕೆ ನೀಡುತ್ತಿದ್ದೇವೆ. ಮುಂಚೂಣಿ, ಆದ್ಯತಾ ಗುಂಪುಗಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಶೇ 30 ರಷ್ಟನ್ನು ಮಾತ್ರ 1 ನೇ ಡೋಸ್ ಗೆ ಬಳಸಲಾಗುತ್ತಿದೆ ಎಂದು ಪ್ರಭುಲಿಂಗ್ ನಾವದಗಿ ತಿಳಿಸಿದರು. ಆಕ್ಸಿಜನ್, ಆಹಾರ ಭದ್ರತೆ ಬಗ್ಗೆ ನಾಳೆ ಸಂಜೆ 3.30ಕ್ಕೆ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿತು.
ಕಾಲಮಿತಿಯಲ್ಲಿ ತಜ್ಞರ ನೇಮಕಕ್ಕೆ ಹೈಕೋರ್ಟ್ ಸೂಚನೆ
ಕರ್ನಾಟಕದಲ್ಲಿ ಫೊರೆನ್ಸಿಕ್ ಲ್ಯಾಬೊರೇಟರಿಗಳ ಬಲವರ್ಧನೆ ವಿಚಾರವಾಗಿ ಹೈಕೋರ್ಟ್ ಮಂಗಳವಾರ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಕುರಿತು ಕಾನೂನು ಸೇವೆಗಳ ಪ್ರಾಧಿಕಾರದಿಂದ ವರದಿ ಸಲ್ಲಿಕೆಯಾಗಿದ್ದು, ಲ್ಯಾಬ್‌ಗಳಿಂದ ಬರುವ ವರದಿ ವಿಳಂಬವಾಗುತ್ತಿರುವುದರಿಂದ ನ್ಯಾಯದಾನಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಕಾಲಮಿತಿಯಲ್ಲಿ ತಾಂತ್ರಿಕ ತಜ್ಞರನ್ನು ನೇಮಿಸಬೇಕೆಂದು ಹೈಕೋರ್ಟ್ ಸೂಚನೆ ನೀಡಿತು. ಜೂನ್ 14ರೊಳಗೆ ಸರ್ಕಾರದ ನಿಲುವು ತಿಳಿಸಬೇಕೆಂದು ಹೈಕೋರ್ಟ್ ಹೇಳಿತು.
(Consider Vaccine Supply under Right to Equality Suggests Karnataka High Court to Government of India)
ಇದನ್ನೂ ಓದಿ: ದೇಶದಲ್ಲಿ 7,200ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ; ದೆಹಲಿ ಹೈಕೋರ್ಟ್ಗೆ ಕೇಂದ್ರ ಸರ್ಕಾರದಿಂದ ಅಫಿಡವಿಟ್
ಇದನ್ನೂ ಓದಿ: ಅಗತ್ಯವಿರೋದು 4.55 ಲಕ್ಷ ಕೊವ್ಯಾಕ್ಸಿನ್, ಲಭ್ಯವಿರೋದು 97 ಸಾವಿರ ಮಾತ್ರ; ಏನ್ಮಾಡ್ತೀರಿ? ಹೈಕೋರ್ಟ್ ಪ್ರಶ್ನೆ
Published On - 5:35 pm, Tue, 25 May 21