TV9 Digital Live: ರಮೇಶ್ ಜಾರಕಿಹೊಳಿ ಹೊಸ ಹೇಳಿಕೆಯಿಂದ ಪ್ರಕರಣ ಎತ್ತ ಸಾಗಲಿದೆ? ಪರಿಣಾಮ ಏನಾಗಬಹುದು?
ಚರ್ಚಾ ಕಾರ್ಯಕ್ರಮವನ್ನು ನಿರೂಪಕ ಹರಿಪ್ರಸಾದ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಕೀಲ ಪಿ.ಪಿ. ಹೆಗ್ಡೆ, ಸೂರ್ಯ ಮುಕುಂದರಾಜ್ ಹಾಗೂ ಯುವತಿ ಪರ ವಕೀಲ ಜಗದೀಶ್ ಭಾಗವಹಿಸಿದರು.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ವಿಡಿಯೋದಲ್ಲಿ ಇರುವುದು ನಾನಲ್ಲ. ಅದು ನಕಲಿ ಸಿಡಿ. ಗ್ರಾಫಿಕ್ಸ್ ಎಂಬಿತ್ಯಾದಿ ಹೇಳಿಕೆಗಳನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡುತ್ತಲೇ ಬಂದಿದ್ದರು. ಬಳಿಕ ಅಗತ್ಯವಾಗಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೂಡ ಕೊಟ್ಟಿದ್ದರು. ಆ ನಂತರ ಕೊರೊನಾ ಎಂಬ ಕಾರಣಕ್ಕೆ ಸ್ವಲ್ಪ ದಿನಗಳ ಕಾಲ ತನಿಖೆಗೆ ಹಾಜರಾಗದೇ ಇದ್ದದ್ದು ಎಲ್ಲಾ ನಡೆದಿತ್ತು. ಈಗ ಮತ್ತೆ ತಮ್ಮ ಹೇಳಿಕೆ ಬದಲಾಯಿಸಿ ಶಾಸಕ ರಮೇಶ್ ಜಾರಕಿಹೊಳಿ ಸುದ್ದಿಯಲ್ಲಿದ್ದಾರೆ. ಅವರ ಹೊಸ ಹೇಳಿಕೆ ಯಾಕೆ ಬಂತು? ಜಾರಕಿಹೊಳಿ ಉಲ್ಟಾ ಹೊಡೆದಿದ್ದರ ಹಿಂದೆ ಏನೇನು ಕಾರಣವಿರಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಟಿವಿ9 ಡಿಜಿಟಲ್ ಇಂದು (ಮೇ 25) ಲೈವ್ ಚರ್ಚಾ ಕಾರ್ಯಕ್ರಮ ನಡೆಸಿಕೊಟ್ಟಿತು.
ಚರ್ಚಾ ಕಾರ್ಯಕ್ರಮವನ್ನು ನಿರೂಪಕ ಹರಿಪ್ರಸಾದ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ವಕೀಲ ಪಿ.ಪಿ. ಹೆಗ್ಡೆ, ಸೂರ್ಯ ಮುಕುಂದರಾಜ್ ಹಾಗೂ ಯುವತಿ ಪರ ವಕೀಲ ಜಗದೀಶ್ ಭಾಗವಹಿಸಿದರು.
ಮೊದಲು ಪಿ.ಪಿ. ಹೆಗ್ಡೆ ಮಾತನಾಡಿ, ಈ ಮೊದಲು ಇದ್ದಂಥದ್ದು ಎರಡು ಮುಖ್ಯ ಪ್ರಶ್ನೆ. ಇದು ಒಪ್ಪಿತ ಸಂಬಂಧವೇ? ಸಿಡಿಯಲ್ಲಿ ಇರುವುದು ಅವರೇ ಹೌದೇ? ಅಲ್ಲವೇ? ಎಂಬುದು. ಇದೆರಡೂ ವಿಚಾರಕ್ಕೆ ಸಂಬಂಧಿಸಿ ಉತ್ತರ ಸಿಕ್ಕಿದೆ. ಸಿಡಿ ವಿಚಾರದಲ್ಲಿ ಎಲ್ಲಾ ನಕಲಿ ಎನ್ನಲು ಕಷ್ಟ. ಹಾಗೆಂದು ಅವರು ಎಲ್ಲವನ್ನೂ ನಿಜ ಎಂದಿದ್ದಾರೋ ಗೊತ್ತಿಲ್ಲ. ಆದರೆ, ಈಗ ಸಂಬಂಧ ಒಪ್ಪಿತ ಅನ್ನುವುದಕ್ಕೆ ವಿಚಾರ ಆಗಬೇಕು. ಆಕೆಯನ್ನು ಫ್ಲಾಟ್ಗೆ ಕರೆಸಿದ್ರು, ಈ ಎಲ್ಲಾ ರೀತಿ ಮಾಡುವಂತೆ ತಿಳಿಸಿದ್ರು. ತಮ್ಮ ಪ್ರಭಾವ ಬಳಸಿ ಹೀಗೆ ಮಾಡಿದರು ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದ ಒಬ್ಬರು ತಮ್ಮ ಪರವಾಗಿ ಹೇಳಿಕೆ ನೀಡಿರುವುದು ಇರುತ್ತದೆ. ಹಾಗಾಗಿ ಆಕೆಯ ಹೇಳಿಕೆ ಮಾತ್ರ ಪರಿಗಣಿಸಲು ಆಗುವುದಿಲ್ಲ. ಇದು ಬಲಾತ್ಕಾರವೋ? ಒಪ್ಪಿತವೋ? ಸಾಕ್ಷಿ, ಅಂಶ ಪರಾಂಬರಿಸಿ ಯಾವುದು ಸತ್ಯ ಎಂದು ನೋಡಬೇಕು ಎಂದು ತಿಳಿಸಿದರು.
ಪ್ರಕರಣದಲ್ಲಿ ಮೊದಲೇ ಕ್ರಿಮಿನಲ್ ಸಂಚು ಹೂಡಿ ಆಕೆಯನ್ನು ಅಥವಾ ಜಾರಕಿಹೊಳಿ ಅವರನ್ನು ಪರಸ್ಪರ ಖೆಡ್ಡಾಕೆ ಬೀಳಿಸಿದ್ರೋ? ಅಥವಾ ಆಕೆ ತಿಳಿಯದೇ ಖೆಡ್ಡಾಕೆ ಬಿದ್ದ ನಂತರ, ಇತರರ ಬಳಿ ದುಃಖ ಹೇಳಿಕೊಂಡಾಗ ಮೂರನೇ ವ್ಯಕ್ತಿಗಳು ಅದನ್ನು ಬಳಸಿಕೊಂಡರೋ? ಎಂಬ ವಿಚಾರ ಚರ್ಚೆಯಾಗಬೇಕಿದೆ ಎಂದು ಹೇಳಿದರು.
ಕೆಲಸ ನೀಡಲು ಹೀಗೆ ಮಾಡಿದ್ಧಾರೆ ಅನ್ನುವ ಬಗ್ಗೆ ವಿಚಾರ ಇದೆ. ಆದರೆ, ಇಂತಹ ವಂಚನೆ ಪ್ರಕರಣದಲ್ಲಿ ಎಲ್ಲದಕ್ಕೂ ದಾಖಲೆ ಇರುವುದಿಲ್ಲ. ಬಹುತೇಕ ಬಾರಿ ಸಂಭಾಷಣೆ ಏನಾಗಿತ್ತು, ತನಿಖೆ, ಇಬ್ಬರ ವಿಚಾರಣೆ ಇತ್ಯಾದಿ ಮೂಲಕ ಸತ್ಯ ಶೋಧನೆ ಮಾಡಬೇಕಾಗುತ್ತದೆ ಎಂದು ವಿವರಿಸಿದರು.
ಹೇಳಿಕೆ ಬದಲಾಯಿಸಿದ ಪರಿಣಾಮ ಏನು? ಎಂಬ ಬಗ್ಗೆ ಕೇಳಿದಾಗ, ಪೊಲೀಸರ ಮುಂದೆ ಹೇಳಿದ ಮುಂದುವರಿದ ಹೇಳಿಕೆ ಪೊಲೀಸರ ತನಿಖೆಗೆ ಮಾರ್ಗಸೂಚಿ ಆಗಬಹುದು ಅಷ್ಟೇ. ಬದಲಾಗಿ, ಇದನ್ನು ಕೋರ್ಟ್ ಸಾಕ್ಷ್ಯವಾಗಿ ಪರಿಗಣಿಸಲು ಆಗುವುದಿಲ್ಲ. ಹಾಗಾಗಿ ಮುಂದೆ ಹೀಗೆ ಹೇಳೇ ಇಲ್ಲ ಅನ್ನಲೂಬಹುದು. ಪ್ರಭಾವಿ ಪ್ರಕರಣದಲ್ಲಿ ತಜ್ಞರ ಅಭಿಪ್ರಾಯದಂತೆ ಒಂದು ಹೇಳಿಕೆ ನೀಡುವುದು, ನಂತರ ಬದಲಾವಣೆ ಮಾಡುವುದು ಇರುತ್ತದೆ. ಒಂದು ರೀತಿಯಲ್ಲಿ ಸಾಗಲು ಆಗದೇ ಇದ್ದಾಗ ಮತ್ತೊಮ್ಮೆ ಬದಲಾವಣೆ ಮಾಡ್ತಾರೆ. ಈ ಪ್ರಕರಣದಲ್ಲಿ ಆರಂಭದ ಬಳಿಕ ಈಗ ಹೀಗೆ ಹೇಳಿದ್ದಾರೆ ಎಂದು ತಿಳಿಸಿದರು.
ಸಿಡಿ ಗ್ಯಾಂಗ್ ಎಂಬುದಕ್ಕೆ ಸಂಬಂಧಿಸಿ ಇಬ್ಬರಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿದೆ. ವಿಡಿಯೋ ನಕಲಿಯಾಗಿ ತೆಗೆಯಲು ಪ್ರಯತ್ನಿಸಿದ್ದಾರೆ ಎಂಬ ಆರೋಪವಿತ್ತು. ಆದರೆ ಇದು ನಕಲಿ ಅಲ್ಲ ಅಸಲಿ ಎಂದು ಈಗ ಹೇಳಿದ್ದಾರೆ. ಹಾಗಾಗಿ ಅಸಲಿ ಎಂದಾದರೆ ತನಿಖೆ ಮಾಡಲು ಹೆಚ್ಚಿನ ವಿಚಾರವಿಲ್ಲ. ಆ ಕಾರಣದಿಂದ ಜಾಮೀನು ಸಿಗಬಹುದು. ಏನೇ ಆದರೂ ಪ್ರಕರಣ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು. ಜವಾಬ್ದಾರಿಯುತ ವಕೀಲರಾಗಿ ಸುಳ್ಳು ಹೇಳಿದಂತ ವ್ಯಕ್ತಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.
ನಂತರ ವಕೀಲ, ಸಂತ್ರಸ್ತ ಯುವತಿ ಜೊತೆಗೆ ಬೆಂಬಲವಾಗಿ ನಿಂತಿದ್ದ ಸೂರ್ಯ ಮುಕುಂದರಾಜ್ ಮಾತನಾಡಿದರು. ಇದು ಗ್ರಾಫಿಕ್ಸ್ ಎಂದು ಮೊದಲನೇ ಬಾರಿ ಜಾರಕಿಹೊಳಿ ಹೇಳಿದ್ದರು. ಎರಡನೇ ಬಾರಿ ಇದು ರಾಜಕೀಯ ಷಡ್ಯಂತ್ರ, ಅದನ್ನು ಬಯಲು ಮಾಡ್ತೀನಿ ಅಂದಿದ್ದರು. ಆಮೇಲೆ ಯಾವಾಗ ಅತ್ಯಾಚಾರ ಪ್ರಕರಣ ದಾಖಲಾಗುತ್ತೋ ಆಗ ಕೊರೊನಾ ಇತ್ಯಾದಿ ಎಂದು ತನಿಖೆಗೆ ಬಂದಿರಲಿಲ್ಲ. ಈಗ ಹಾಜರಾಗಿ ಅದು ನಾನೇ, ಯುವತಿಯೊಂದಿಗೆ ಸಂಪರ್ಕ ಇತ್ತು, ಹಣ ಕೊಟ್ಟಿದ್ದೀನಿ ಅಂದಿದ್ದಾರೆ. ಈ ವೇಳೆ, ಪೊಲೀಸರು ಎಷ್ಟು ನಿಷ್ಪಕ್ಷಪಾತವಾಗಿ, ಯಾರ ಪ್ರಭಾವದಲ್ಲಿ ಕೆಲಸ ಮಾಡಿದ್ದಾರೆ? ಆರೋಪಿಗೆ ಇಷ್ಟು ಸಮಯ, ಹೇಳಿಕೆ ನೀಡಲು ಅವಕಾಶ ಇದೆಯಾ? ಎಂದು ಪ್ರಶ್ನಿಸಿದರು.
ಸಿಡಿ ಗ್ಯಾಂಗ್ ಇದೆ ಎನ್ನುವ ಬಗ್ಗೆ ಅವರು ಎಲ್ಲಿಯೂ ಹೇಳಿಲ್ಲ ಇದುವರೆಗೆ. ಆರಂಭದಲ್ಲೇ ಆ ಬಗ್ಗೆ ಮಾಹಿತಿ ನೀಡುವ ಅವಕಾಶ ಇತ್ತು, ಆದರೆ ಹೇಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈಗ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾನೇ ಅದು. ನಮ್ಮದು ಸಮ್ಮತದ ಲೈಂಗಿಕ ಕ್ರಿಯೆ ಎಂದು ಹೇಳಿಬಿಟ್ರೆ, ಆ ಪ್ರಕರಣ ಡ್ರಾಪ್ ಆಗಿಬಿಡುತ್ತೆ ಎಂಬ ಕಾರಣದಿಂದ ಹೀಗೆ ಹೇಳಿರಬಹುದು. ಆದರೆ, ಸಂಪರ್ಕ ಇತ್ತು ಅಂದಮಾತ್ರಕ್ಕೆ ಆರೋಪಮುಕ್ತರಾಗುವುದಿಲ್ಲ ಎಂದು ಸೂರ್ಯ ಮುಕುಂದರಾಜ್ ತಿಳಿಸಿದರು.
ಕೊನೆಯದಾಗಿ ಯುವತಿ ಪರ ವಕೀಲ ಜಗದೀಶ್ ಮಾತನಾಡಿದರು. ಮೊದಲು ನಾನಲ್ಲ ಎನ್ನುತ್ತಿದ್ದವರು ಈಗ ಅದು ನಾನೇ ಎಂದಿದ್ದಾರೆ. ನಾವು ನಮ್ಮ ಕಕ್ಷಿದಾರೆಯ ಮಹಜರು, ಹೇಳಿಕೆ ಇತ್ಯಾದಿಗಳನ್ನು ನೀಡಿದ್ದೇವೆ. ನಂತರ ಕೊರೊನಾ ಕಾರಣದಿಂದ ಅವಸರ ಮಾಡಿರಲಿಲ್ಲ. ಈಗ ಮತ್ತೆ ಅವರು ಬೇರೆ ಹೇಳಿಕೆ ನೀಡಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿದ ಮೇಲೆ ಈಗ ಹೀಗೆ ಹೇಳಿದ್ದಾರೆ. ನಮಗೆ ಮತ್ತೆ ತನಿಖೆಗೆ ಹಾಜರಾಗುವಂತೆ, ಹೇಳಿಕೆ ನೀಡುವಂತೆ ಕೋರಿಕೆ ಬಂದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Ramesh Jarkiholi: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸಿಡಿಯಲ್ಲಿರೋದು ನಾನೇ ಎಂದ ಮಾಜಿ ಸಚಿವ?
Published On - 5:43 pm, Tue, 25 May 21