ದಾವಣಗೆರೆ: ಅನ್ಲಾಕ್ ನಂತರ ಬಹುತೇಕ ಎಲ್ಲಾ ಪ್ರವಾಸಿ ತಾಣಗಳು ಓಪನ್ ಆಗಿವೆ. ಅಂತೆಯೇ ದಾವಣಗೆರೆ ನಗರದ ಕುಂದವಾಡ ಕೆರೆ ಪಕ್ಕದಲ್ಲಿ ನಿರ್ಮಾಣವಾಗಿರುವ ಗಾಜಿನ ಮನೆ ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. 60 ಸಾವಿರ ಹೂವುಗಳು ಈ ಗಾಜಿನ ಮನೆಯಲಿದ್ದು, ಕೆರೆ ಪಕ್ಕದಲ್ಲಿ ವಿಭಿನ್ನವಾಗಿ ತಲೆ ಎತ್ತಿದೆ. ಇಂತಹ ಗಾಜಿನ ಮನೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಪ್ರಯತ್ನ ಸದ್ಯ ನಡೆದಿದ್ದು, ದಾವಣಗೆರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ನೂತನ ಯೋಜನೆ ಸಿದ್ಧಪಡಿಸಿದ್ದಾರೆ. ಕೆಆರ್ಎಸ್ನಲ್ಲಿ ಇರುವ ಸಂಗೀತಯುಕ್ತ ಬೆಳಕಿನ ಕಾರಂಜಿ ಇಲ್ಲಿ ಕೂಡ ರೂಪಗೊಳ್ಳುತ್ತಿದ್ದು, ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಲೆಸರ್ ಲೌಟ್ ಶೋ ಕೂಡಾ ಆರಂಭವಾಗಲಿದೆ. ವಿಶೇಷವೆಂದರೆ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಶಂಕು ಸ್ಥಾಪನೆ ಮಾಡಿದ್ದಾರೆ.
ಈ ಹಿಂದೆ ಇಲ್ಲಿ ಮೈಸೂರ ದಸರಾ ಮಾದರಿಯಲ್ಲಿ ಫಲ-ಪುಷ್ಪ ಪ್ರದರ್ಶನ, ಮಕ್ಕಳನ್ನು ಆಕರ್ಷಿಸಲು ನಾನಾ ಆಟಗಳು ನಡೆಯುತ್ತಿತ್ತು. ಆದರೆ ಲಾಕ್ಡೌನ್ ಆದ ಮೇಲೆ ಇದೆಲ್ಲವೂ ನಿಂತು ಹೋಗಿತ್ತು. ಆದರೆ ಈಗ ಮತ್ತೆ ಗಾಜಿನ ಮನೆ ಅಲಂಕಾರಗೊಂಡಿದ್ದು, ಹೊಸ ಲೋಕವೇ ಇಲ್ಲಿ ಸೃಷ್ಠಿಯಾಗಿದೆ. ಸಂಜೆ ಆಯಿತು ಎಂದರೆ ಜನ ಸಾಗರವೇ ಹರಿದು ಇಲ್ಲಿಗೆ ಬರುತ್ತದೆ.
ಸಾವಿರಾರು ಜನ ನಿತ್ಯ ಇಲ್ಲಿಗೆ ಬಂದು ಹೋಗುತ್ತಾರೆ. ಪ್ರೀ ವೆಡ್ಡಿಂಗ್ ಹಾಗೂ ಧಾರಾವಾಹಿಗಳ ಶೂಟಿಂಗ್ ಸಹ ಇಲ್ಲಿ ಇರುತ್ತದೆ. ಪ್ರೀ ವೆಡ್ಡಿಂಗ್ ಶೂಟ್ಗೆ ಹತ್ತು ಸಾವಿರ ರೂಪಾಯಿ ಹಾಗೂ ಧಾರಾವಾಹಿಗಳ ಶೂಟಿಂಗ್ಗೆ 25 ಸಾವಿರ ರೂಪಾಯಿ ಶುಲ್ಕ ಪಡೆಯಲಾಗುತ್ತದೆ. ಮಾಮೂಲಾಗಿ ಬರುವ ಜನಕ್ಕೆ ತಲಾ 20 ರೂಪಾಯಿ. ಹೀಗಾಗಿ ಆರ್ಥಿಕತೆಗೆ ತೊಂದರೆ ಇಲ್ಲ. ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಶುರುವಾದ ಗಾಜಿನ ಮನೆ ದೇಶದ ಗಮನ ಸೆಳೆದಿದೆ ಎಂದು ತೋಟಗಾರಿಕಾ ಇಲಾಖೆ ಡಿಡಿ ಲಕ್ಷ್ಮಿಕಾಂತ ತಿಳಿಸಿದ್ದಾರೆ.
ದಾವಣಗೆರೆ ಸುತ್ತಲು ಪ್ರವಾಸಿ ತಾಣಗಳೇ ಇಲ್ಲ. ಬಹುತೇಕರು ಬೆಣ್ಣೆ ದೋಸೆ ತಿಂದು ಸುಮ್ಮನಾಗಬೇಕು. ಪ್ರವಾಸೋದ್ಯಮ ಅಂದರೆ ಪಕ್ಕದ ಶಿವಮೊಗ್ಗ, ಹಾವೇರಿಗೆ ಹೋಗುವಂತಹ ರೂಢಿ ದಾವಣಗೆರೆಯ ಜನರಲ್ಲಿ ಇತ್ತು. ಆದರೆ ಪಕ್ಕದಲ್ಲಿ ತಲೆ ಎತ್ತಿದ ಗಾಜಿನ ಮನೆ ಎಲ್ಲರ ಗಮನ ಸೆಳೆದಿದೆ. 28 ಎಕರೆ ಪ್ರದೇಶದಲ್ಲಿ ಈ ಗಾಜಿನ ಮನೆ ಹರಡಿಕೊಂಡಿದೆ. ಬೆಂಗಳೂರಿನ ಲಾಲ್ಬಾಗ್ಗಿಂತ ಹತ್ತು ಪಟ್ಟು ದೊಡ್ಡದಾದ ಗಾಜಿನ ಮನೆ ಇದಾಗಿದೆ ಎಂದು ಸ್ಥಳೀಯ ನಿವಾಸಿ ರಾಮಕೃಷ್ಣ ತಿಳಿಸಿದ್ದಾರೆ.
ಹೈದರಾಬಾದ್ನ ಯೂನಿಕ್ ಟ್ರೀ ಸೆಂಟರ್ನ ಆಕರ್ಷಕ ಮರಗಳು, 300ಕ್ಕೂ ಹೆಚ್ಚು ತರಕಾರಿಗಳು. ಹೀಗೆ ಹಲವಾರು ಕಾರಣಕ್ಕೆ ಗಾಜಿನ ಮನೆ ಗಮನ ಸೆಳೆಯುತ್ತಿದೆ. ಇನ್ನು ಅಭಿವೃದ್ಧಿ ಆಗುತ್ತಿರುವ ವಿಶಿಷ್ಟವಾದ ಲೈಟಿಂಗ್ನಿಂದ ಗಾಜಿನ ಮನೆ ಇನ್ನಷ್ಟು ಆಕರ್ಷಕವಾಗಿ ಕಾಣಬಹುದು. ಈಗಾಗಲೇ ಗಾತ್ರದಲ್ಲಿ ದೇಶದ ಗಮನ ಸೆಳೆದ ಗಾಜಿನ ಮನೆ. ಈಗ ಕೆಆರ್ಎಸ್ ಮತ್ತು ಹೊಸಪೇಟೆ ತುಂಗಭದ್ರಾ ಡ್ಯಾಂ ಬಳಿ ಇರುವ ಸಂಗೀತಯುಕ್ತ ಕಾರಂಜಿಯಂತೆ ವಿಭಿನ್ನವಾದ ಪ್ರಯತ್ನದಿಂದ ಪ್ರವಾಸಿಗರನ್ನು ಸೆಳೆಯಲಿದೆ.
ವರದಿ: ಬಸವರಾಜ್ ದೊಡ್ಮನಿ
ಇದನ್ನೂ ಓದಿ:
ಶಾಂಘೈ ಮ್ಯೂಸಿಯಂನಲ್ಲಿದ್ದ 47 ಲಕ್ಷ ರೂಪಾಯಿ ಮೌಲ್ಯದ ಡಿಸ್ನಿ ಕೋಟೆಯ ಗಾಜಿನ ಪ್ರತಿಕೃತಿ ಮುರಿದು ಹಾಕಿದ ಮಕ್ಕಳು..
ವೀಕೆಂಡ್ ಟ್ರಿಪ್ಗೆ ಸುಂದರ ನಿಸರ್ಗ ತಾಣ ಎಡಕಲ್ಲು ಗುಡ್ಡದ ಮೇಲೊಂದು ಸುತ್ತು..!