ಜೆಡಿಎಸ್​ನಲ್ಲಿ ಮುಂದುವರಿದ ಆಂತರಿಕ ಕಲಹ, ಜೊತೆಗೆ ಆಪರೇಷನ್ ಆತಂಕ

ಚನ್ನಪಟ್ಟಣ ಉಪಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್ ಮನೆಯಲ್ಲಿ ಜಿಟಿ ದೇವೇಗೌಡ ಮತ್ತು ದಳಪತಿಗಳ ನಡುವೆ ಆಂತರಿಕ ಕಲಹ ಜೋರಾಗಿದೆ. ಜಿಟಿ ದೇವೇಗೌಡರು ಮತ್ತೆ ದಳಪತಿಗಳ ವಿರುದ್ಧ ವಾಗ್ದಾಳಿ ಆರಂಭಿಸಿದ್ದಾರೆ. ಇದರ ಜತೆಗೆ, ಕಾಂಗ್ರೆಸ್​​ನಿಂದ ಆಪರೇಷನ್ ಆತಂಕ ಶುರುವಾಗಿದೆ.

ಜೆಡಿಎಸ್​ನಲ್ಲಿ ಮುಂದುವರಿದ ಆಂತರಿಕ ಕಲಹ, ಜೊತೆಗೆ ಆಪರೇಷನ್ ಆತಂಕ
ಜೆಡಿಎಸ್​ನಲ್ಲಿ ಮುಂದುವರಿದ ಆಂತರಿಕ ಕಲಹ, ಜೊತೆಗೆ ಆಪರೇಷನ್ ಆತಂಕ
Edited By:

Updated on: Nov 29, 2024 | 8:14 AM

ಬೆಂಗಳೂರು, ನವೆಂಬರ್ 29: ಉಪಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಬದಲಾವಣೆಯ ಗಾಳಿ ಬೀಸಲು ಆರಂಭಿಸಿದೆ. ಅದರಲ್ಲೂ ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ಬಳಿಕ ಜೆಡಿಎಸ್ ಪಕ್ಷದಲ್ಲಿ ಆಂತರಿಕ ಕಲಹ ಜೋರಾಗಿದೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಕೈತಪ್ಪಿದ ಹಿನ್ನೆಲೆ ಕಳೆದ ಮೂರು ನಾಲ್ಕು ತಿಂಗಳಿಂದ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಜಿಟಿ ದೇವೇಗೌಡರು ಮತ್ತೆ ದಳಪತಿಗಳ ವಿರುದ್ಧ ಗುಡಿಗಲು ಆರಂಭಿಸಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮತ್ತು ಸಾರಾ ಮಹೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಧಿಕಾರ ಇದ್ದಾಗೆಲ್ಲ ಕುಮಾರಸ್ವಾಮಿ ನನ್ನನ್ನು ತುಳಿಯುವ ಕೆಲಸ ಮಾಡಿದ್ದಾರೆ. ಶಾಸಕಾಂಗ ಸ್ಥಾನ ಕೈತಪ್ಪಲು ಸಾರಾ ಮಹೇಶ್ ಕಾರಣ ಎಂದು ಗಂಭೀರ ಆರೋಪ ಮಾಡಿದ್ದರು.

ಜಿಟಿ ದೇವೇಗೌಡರ ಆರೋಪಕ್ಕೆ ಸಾರಾ ಮಹೇಶ್ ಕೂಡ ತಿರಿಗೇಟು ನೀಡಿ, ಆಣೆ ಪ್ರಮಾಣದ ಸವಾಲು ಹಾಕಿದ್ದರು.

ಇದರ ಬೆನ್ನಲ್ಲೇ, ಗುರುವಾರ ಮಾಜಿ ಸಚಿವ ಹೆಚ್​ಡಿ ರೇವಣ್ಣ ಕೊಟ್ಟ ಹೇಳಿಕೆ ಮತ್ತೆ ಜಿಟಿ ದೇವೇಗೌಡರನ್ನು ಕೆರಳುವಂತೆ ಮಾಡಿದೆ. ಬೆಂಗಳೂರಿನಲ್ಲಿ ಮಾತನಾಡಿದ್ದ ರೇವಣ್ಣ, ಕುಮಾರಸ್ವಾಮಿ ಇಲ್ಲದೆ ಇದ್ದರೆ ಜಿಟಿ ದೇವೇಗೌಡರು ಜೈಲಿಗೆ ಹೋಗುತ್ತಿದ್ದರು. ಸಿದ್ದರಾಮಯ್ಯ ಜಿಟಿ ದೇವೇಗೌಡರನ್ನು ಜೈಲಿಗೆ ಕಳುಹಿಸಲು ಮುಂದಾಗಿದ್ದರು ಎಂದು ಹೇಳಿಕೆ ನೀಡಿದ್ದರು.

ಆದರೆ, ರೇವಣ್ಣ ಹೇಳಿಕೆಯನ್ನು ಅಲ್ಲಗಳದಿರುವ ಜಿಟಿ ದೇವೇಗೌಡರು, ನನ್ನ ಸಾರ್ವಜನಿಕ ಬದುಕಿನಲ್ಲಿ ಯಾವುದೇ ಪ್ರಕರಣಗಳು ಇಲ್ಲ. ನನ್ನ ಮೇಲಾಗಲಿ ನನ್ನ ಮಗನ ಮೇಲಾಗಲಿ ಯಾವುದೇ ಕೇಸ್​ಗಳು ದಾಖಲಾಗಿಲ್ಲ. ರೇವಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಅವರನ್ನೇ ನಾನು ಕೇಳುತ್ತೇನೆ ಎಂದು ಕಿಡಿ ಕಾರಿದ್ದಾರೆ.

ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ರಾಜಕೀಯವಾಗಿ ನನ್ನನ್ನು ಸೋಲಿಸಲು ಯತ್ನಿಸಿರಬಹುದು. ಆದರೆ ವೈಯಕ್ತಿಕವಾಗಿ ಎಂದೂ ದ್ವೇಷಿಸಿಲ್ಲ ಎಂದು ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

ಆಪರೇಷನ್ ಹಸ್ತದ ಆತಂಕ

ದಳಪತಿಗಳಿಗೆ ಆಂತರಿಕ ಕಲಹದ ಟೆನ್ಶನ್ ಒಂದು ಕಡೆ ಆದರೆ ಸಿಪಿ ಯೋಗೇಶ್ವರ್​​ರಿಂದ ಆಪರೇಷನ್ ಹಸ್ತದ‌ ಆತಂಕವೂ ಶುರುವಾಗಿದೆ. ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ಸೆಳೆಯುವ ಬಗ್ಗೆ ಈಗಾಗಲೇ ಯೋಗೇಶ್ವರ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗುವಂತೆ ಸಿಪಿ ಯೋಗೇಶ್ವರ್ ಕಡೆಯಿಂದ ಜೆಡಿಎಸ್ ಶಾಸಕರನ್ನು ಸಂಪರ್ಕಿಸಲಾಗಿದೆ ಎನ್ನಲಾಗುತ್ತಿದೆ. ಜೆಡಿಎಸ್ ಶಾಸಕನ ಸಂಪರ್ಕ ಮಾಡಿ ಕಾಂಗ್ರೆಸ್​ನಲ್ಲಿ ಸೂಕ್ತ ಸ್ಥಾನ ಮಾನ ಮತ್ತು 2028ರ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದಾರಂತೆ!

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಸಂಕ್ರಾಂತಿಗೆ ಸಂ’ಕ್ರಾಂತಿ’ಆಗುತ್ತಾ?

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಜೆಡಿಎಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕೇಂದ್ರ ಸಚಿವ ಕುಮಾರಸ್ವಾಮಿ ಶಾಸಕರನ್ನು ಸಂಪರ್ಕ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಆಮಿಷಕ್ಕೆ ಒಳಗಾಗದಂತೆ ಶಾಸಕರಿಗೆ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ. ಅದೇನೇ ಇರಲಿ, ನಿಖಿಲ್ ಸೋಲಿನ ಬಳಿಕ ಜೆಡಿಎಸ್ ಆಂತರಿಕ ಸಂಘರ್ಷ, ಆಪರೇಷನ್ ವಿಚಾರ ಪಕ್ಷದ ವರಿಷ್ಠರಿಗೆ ತಲೆ ನೋವಾಗಿರುವುದು ಸುಳ್ಳಲ್ಲ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ