ಆದಾಯ ಹೆಚ್ಚಿಸಲು ಬಿಎಂಟಿಸಿ ಹೊಸ ಜಾಹೀರಾತು ನೀತಿ: ಬಸ್ ಸುತ್ತ ಜಾಹೀರಾತು ಹಾಕಲು ಟೆಂಡರ್
ಆದಾಯ ಹೆಚ್ಚಿಸಿಕೊಳ್ಳಲು ಬಿಎಂಟಿಸಿ ಈಗ ಜಾಹೀರಾತುಗಳ ಮೊರೆ ಹೋಗಿದ್ದು, ಮೂರು ಸಾವಿರ ಬಸ್‌ಗಳ ಸುತ್ತ ಜಾಹೀರಾತುಗಳನ್ನು ಅಳವಡಿಸಲು ಟೆಂಡರ್ ಕರೆದಿದೆ. ಒಂದು ಬಸ್ಗೆ ಪ್ರತಿ ತಿಂಗಳು 12 ಸಾವಿರ ರುಪಾಯಿ ದರ ನಿಗದಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು, ನವೆಂಬರ್ 29: ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿ, ಆದಾಯ ಹೆಚ್ಚಿಸಲು ಹೊಸ ಜಾಹೀರಾತು ನೀತಿ ರೂಪಿಸಿದೆ. ಈ ಮೂಲಕ ಆದಾಯ ಸಂಗ್ರಹಕ್ಕೆ ಹೊರಟಿದೆ. ಇದೀಗ ಬಸ್ ಸುತ್ತ ಇಡೀ ಜಾಹೀರಾತು ಹಾಕಲು ಅವಕಾಶ ಕೊಡುವ ಮೂಲಕ ಆದಾಯ ಹೆಚ್ಚಿಸಲು ಯೋಜನೆ ರೂಪಿಸಿದೆ. 3000 ಬಸ್‌ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ತಯಾರಿ ಮಾಡಿದೆ.
ಬಿಎಂಟಿಸಿ ಹೊಸ ಜಾಹೀರಾತು ಯೋಜನೆ ಹೇಗಿರಲಿದೆ?
ಇಷ್ಟು ದಿನ ಬಸ್‌ಗಳ ಹಿಂಭಾಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇತ್ತು ಇದೀಗ. ಬಸ್‌ಗಳ ಮುಂದಿನ ಮತ್ತು ಹಿಂಭಾಗದ ಗಾಜುಗಳನ್ನು ಹೊರತುಪಡಿಸಿ ಉಳಿದ ಎಲ್ಲ ಭಾಗದಲ್ಲೂ ಜಾಹೀರಾತು ಅಳವಡಿಸಿ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಡಿಸೆಂಬರ್- 7 ರ ವರೆಗೆ ಟೆಂಡರ್ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ.
ತಿಂಗಳಿಗೆ 75 ಕೋಟಿ ರೂ. ಆದಾಯ ನಿರೀಕ್ಷೆ
ಒಂದು ಬಸ್ ಸುತ್ತ ಜಾಹೀರಾತು ಅಳವಡಿಸಲು 12 ರಿಂದ 13 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ. ಮೂರು ಸಾವಿರ ಬಸ್ಗಳಿಂದ ತಿಂಗಳಿಗೆ 3 ಕೋಟಿ ರೂಪಾಯಿಯಿಂದ 75 ಕೋಟಿ ರೂಪಾಯಿ ವರೆಗೆ ಆದಾಯವನ್ನು ನಿರೀಕ್ಷೆ ಮಾಡಿದ್ದೇವೆ ಎಂದು ಬಿಎಂಟಿಸಿಯ ಸಿಟಿಎಂಸಿ ನಾಗೇಂದ್ರ ತಿಳಿಸಿದ್ದಾರೆ.
ಬಿಎಂಟಿಸಿಯ 6 ಸಾವಿರಕ್ಕೂ ಹೆಚ್ಚಿನ ಬಸ್‌ಗಳ ಪೈಕಿ 3000 ಹವಾ ನಿಯಂತ್ರಿತವಲ್ಲದ ಬಸ್‌ಗಳಲ್ಲಿ, ಹೊಸ ರೂಪದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಎಂಟಿಸಿ ಮುಂದಾಗಿದೆ.
ಪ್ರಯಾಣಿಕರಿಂದ ವಿರೋಧ
ಇತ್ತ ಬಿಎಂಟಿಸಿ ಹೊಸ ಜಾಹೀರಾತು ನೀತಿ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ತುಂಬಾ ಜಾಹೀರಾತುಗಳನ್ನು ಹಾಕಿದರೆ, ಬಿಎಂಟಿಸಿ ಬಸ್ ಯಾವುದು ಖಾಸಗಿ ಬಸ್ ಯಾವುದು ಎಂದು ಗೊತ್ತಾಗಲ್ಲ ಎಂದು ಕೆಲವು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಡ್ರೈವರ್-ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ಹೆಚ್ಚಳ: ಕೊನೆಗೂ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು
ಒಟ್ಟಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಿಎಂಟಿಸಿ ಬಸ್‌ಗಳ ಮೇಲಿನ ಜಾಹೀರಾತುಗಳ ಮೂಲಕ ಭರ್ಜರಿ ಆದಾಯಕ್ಕೆ ಪ್ಲಾನ್ ಮಾಡಿಕೊಂಡಿದೆ. ಆದರೆ ಎಷ್ಟು ಕಂಪನಿಗಳು ಇದರಲ್ಲಿ ಭಾಗಿಯಾಗಲಿವೆ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ