ಬೆಂಗಳೂರು, ಏಪ್ರಿಲ್ 15: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಬದಲಾಯಿಸಿದ್ದ ವಿಚಾರ ರಾಜ್ಯದಾದ್ಯಂತ ವಿವಾದಕ್ಕೀಡಾಗಿತ್ತು. ಇದೀಗ ಗ್ರಂಥಾಲಯಗಳಲ್ಲಿ ಹಿಂದೂ ಧರ್ಮಕ್ಕೆ ಅವಮಾನ ಮಾಡಿರುವ ಬಗ್ಗೆ ವರದಿಯಾಗಿದೆ. ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ (Library), ‘ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ. ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ’ ಎಂಬ ಗೋಡೆಬರಹ ಪ್ರಕಟಿಸಲಾಗಿದೆ. ಇದೀಗ ಗೋಡೆಬರಹಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.
ಗ್ರಂಥಾಲಯದ ಪ್ರವೇಶ ದ್ವಾರದ ಗೋಡೆ ಮೇಲೆ ಬರಹ ಪ್ರಕಟಿಸಲಾಗಿದೆ. ಈ ಗ್ರಂಥಾಲಯ ರಾಜ್ಯ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ಗೋಡೆ ಬರಹಕ್ಕೆ ಸಾಮಾಜಿಕ ಜಾಲತಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳು ಗೋಡೆಬರಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಂದಿರದ ಬದಲಾಗಿ ಮಸೀದಿ ಎಂದು ಯಾಕೆ ಬಳಕೆ ಮಾಡಲ್ಲ ಎಂದು ಪ್ರಶ್ನಿಸಿವೆ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ‘ಜ್ಞಾನ ದೇಗುಲವಿದು, ಕೈ ಮುಗಿದು ಒಳಗೆ ಬಾ’ ಎಂಬ ಬರಹಕ್ಕೆ ಬದಲಾಗಿ, ‘ಜ್ಞಾನ ದೇಗುಲವಿದು, ದೈರ್ಯವಾಗಿ ಪ್ರಶ್ನಿಸಿ’ ಎಂದು ಬರೆಸಿದ್ದು ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ಈ ವಿಚಾರ ವಿವಾದಕ್ಕೀಡಾಗಿ ನಂತರ ಸರ್ಕಾರ ಮೊದಲಿನಂತೆಯೇ ಗೋಡೆ ಬರಹ ಪ್ರಕಟಿಸಲು ಆದೇಶ ನೀಡಿತ್ತು.
ಇದನ್ನೂ ಓದಿ: ವಿಜಯಪುರ: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವಿತೆಯ ಬರಹ ಬದಲಾವಣೆ! ಚರ್ಚೆಗೆ ಗ್ರಾಸವಾಯ್ತು ಸರ್ಕಾರದ ನಡೆ
ಅದಕ್ಕೂ ಮುನ್ನ, ರಾಜ್ಯದ ಎಲ್ಲ ಸರ್ಕಾರಿ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆ ಮಾಡದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸುತ್ತೋಲೆ ಹೊರಡಿಸಿತ್ತು. ನಂತರ ವಿವಾದಕ್ಕೀಡಾಗುತ್ತಿದ್ದಂತೆಯೇ ನಿರ್ಬಂಧ ಆದೇಶವನ್ನು ವಾಪಸ್ ಪಡೆದಿತ್ತು.
ಶಿಕ್ಷಣ ಸಂಸ್ಥೆಗಳ ವಿಚಾರದಲ್ಲಿ ವಿವಾದಾತ್ಮಕ ನಿರ್ಧಾರಗಳನ್ನು ಕೈಗೊಂಡು ಆದೇಶ ಹೊರಡಿಸಿ ನಂತರ ಯೂಟರ್ನ್ ತೆಗೆದುಕೊಂಡಿದ್ದ ರಾಜ್ಯ ಸರ್ಕಾರ ಇದೀಗ ಗ್ರಂಥಾಲಯ ಗೋಡೆಬರಹದ ವಿಚಾರದಲ್ಲಿಯೂ ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ