ಸಮುದಾಯ ಭವನದ ಬಾಗಿಲ ದಿಕ್ಕಿನ ಆಯ್ಕೆ ಗೊಂದಲ; 9 ಮಂದಿಯ ವಿರುದ್ಧ ಪ್ರಕರಣ ದಾಖಲು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 24, 2021 | 3:10 PM

ಕಟ್ಟಡ ಕಾಮಗಾರಿ ಬಾಗಿಲುವರೆಗೂ ಬಂದಾಗ ವಿವಾದ ಶುರುವಾಗಿದೆ. ಸಮುದಾಯ ಭವನದ ಕಟ್ಟಡದ ಮುಖ್ಯದ್ವಾರ ಪೂರ್ವಕ್ಕೆ ತೆರೆಯಲಾಗಿತ್ತು. ಆದರೆ ಹಳೆಯ ಕಟ್ಟಡದಲ್ಲಿ ಬಾಗಿಲು ದಕ್ಷಿಣ ಭಾಗಕ್ಕೆ ಇತ್ತು. ಈಗ ಪಶ್ಚಿಮಕ್ಕೆ ಏಕೆ ಎಂಬುವುದು ಕೆಲವರ ಪ್ರಶ್ನೆ ಆಗಿದೆ.

ಸಮುದಾಯ ಭವನದ ಬಾಗಿಲ ದಿಕ್ಕಿನ ಆಯ್ಕೆ ಗೊಂದಲ; 9 ಮಂದಿಯ ವಿರುದ್ಧ ಪ್ರಕರಣ ದಾಖಲು
ಬಾಗಿಲು ವಿವಾದದಿಂದ ಅರ್ಧಕ್ಕೆ ನಿಂತಿರುವ ಸಮುದಾಯ ಭವನ ಕಟ್ಟಡ
Follow us on

ಬಾಗಲಕೋಟೆ: ಮಹಾನ್ ವ್ಯಕ್ತಿಯೊಬ್ಬರ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಈಗಾಗಲೇ ದಾರಂದ ಕೂರಿಸಲಾಗಿದೆ. ಆದರೆ ಈಗ ಬಾಗಿಲು ಕೂರಿಸುವ ದಿಕ್ಕಿನ ವಿಚಾರದಲ್ಲಿ ಎರಡು ಗುಂಪುಗಳ ಮಧ್ಯೆ ಕಿತ್ತಾಟ ಆರಂಭವಾಗಿದ್ದು, ಸ್ಥಳೀಯರ ಈ ಕಿತ್ತಾಟದ ಮಧ್ಯೆ ಅಧಿಕಾರಿಗಳಿಗೂ ಕೂಡ ಬೆಲೆ ಇಲ್ಲದಂತೆ ಆಗಿದೆ. ಸದ್ಯ ಬಾಗಿಲು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, 9 ಜನರ ವಿರುದ್ಧ ಕೇಸ್ ದಾಖಲಾಗಿದೆ. ಅಷ್ಟಕ್ಕೂ ಕೇವಲ ಒಂದು ಬಾಗಿಲು ಕೂರಿಸುವುದಕ್ಕೆ ಇಷ್ಟೊಂದು ರಾದ್ದಾಂತ ಆಗಿದ್ದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಭೂಸೇನಾ ನಿಗಮದಿಂದ ಜಗಜೀವನರಾಮ್ ಸಮುದಾಯ ಭವನ ನಿರ್ಮಾಣ ನಡೆಸಲಾಗುತ್ತಿದೆ. ₹ 12 ಲಕ್ಷ ವೆಚ್ಚದಲ್ಲಿ ಇತ್ತೀಚೆಗೆ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆಯಾಗಿ ಕಟ್ಟಡ ಕಾಮಗಾರಿ ಕೂಡ ನಡೆದಿದೆ. ಆದರೆ ಕಟ್ಟಡ ಕಾಮಗಾರಿ ಬಾಗಿಲುವರೆಗೂ ಬಂದ ನಂತರ ವಿವಾದ ಶುರುವಾಗಿದೆ. ಸಮುದಾಯ ಭವನ ಕಟ್ಟಡದ ಮುಖ್ಯದ್ವಾರವನ್ನು ಪೂರ್ವಕ್ಕೆ ಇರಿಸಲಾಗಿತ್ತು.

ಆದರೆ ಹಳೆಯ ಕಟ್ಟಡದಲ್ಲಿ ಬಾಗಿಲು ದಕ್ಷಿಣ ಭಾಗಕ್ಕೆ ಇತ್ತು. ಈಗ ಪೂರ್ವಕ್ಕೆ ಬಾಗಿಲು ಇರಿಸಲಾಗಿದೆ. ಆದರೂ ಕೆಲವರು ಪಶ್ಚಿಮಕ್ಕೆ ಬಾಗಿಲು ಇರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಬಾಗಿಲು ಯಾವ ದಿಕ್ಕಿಗೆ ಇರಿಸಬೇಕು ಎನ್ನುವುದು ದೊಡ್ಡ ವಿವಾದವಾಗಿದೆ.

ಸಮುದಾಯ ಭವನದ ಬಾಗಿಲು ವಿವಾದ

ಪೂರ್ವ ದಿಕ್ಕಿನ 5 ಅಡಿ ಜಾಗದಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಕ್ಕೆ ಬರುವುದಿಲ್ಲ.‌ ಹಿಂದಿನಂತೆ ದಕ್ಷಿಣ ದಿಕ್ಕಿನಲ್ಲೇ ಮುಖ್ಯದ್ವಾರ ತೆರೆದರೆ ಎಲ್ಲದಕ್ಕೂ ಅನುಕೂಲ ಆಗುತ್ತದೆ. ಜೊತೆಗೆ 50 ಅಡಿ ಜಾಗ ಇರುವುದರಿಂದ ಕಾರ್ಯಕ್ರಮ ಮಾಡುವುದಕ್ಕೆ ಅನುಕೂಲ ಆಗುತ್ತದೆ. ಆದರೆ ರಾಜಕೀಯ ಕುಮ್ಮಕ್ಕಿನಿಂದ ಪೂರ್ವಕ್ಕೆ ಮುಖ್ಯದ್ವಾರ ಬಿಡಲಾಗಿದೆ ಎಂದು ಇವರು ಆರೋಪ ಮಾಡುತ್ತಿದ್ದಾರೆ.  ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ತೆರೆಯುವಂತೆ ಮನವಿ ಕೊಟ್ಟರು ಸ್ಪಂದಿಸಲಿಲ್ಲ. ಹೀಗಾಗಿ ನಾವು ಬಾಗಿಲು ಮೊದಲು ಎಲ್ಲಿ ಇತ್ತೋ ಅಲ್ಲೇ ಬಾಗಿಲು ತೆರೆದಿದ್ದೇವೆ. ಆದರೆ ಇದೆ ನೆಪ ಇಟ್ಟುಕೊಂಡು ನಮ್ಮ ಸಮಾಜದ 9 ಜನರ ಮೇಲೆ ಅಧಿಕಾರಿಗಳು ದೂರು ನೀಡಿದ್ದು, ಒಬ್ಬರನ್ನು ಬಂಧಿಸಿದ್ದಾರೆ. ನಮ್ಮ ಮೇಲಿನ ಎಫ್ಐಆರ್ ರದ್ದು ಮಾಡಬೇಕು. ಜೊತೆಗೆ ಮೊದಲು ದ್ವಾರ ಬಾಗಿಲು ಎಲ್ಲಿತ್ತು ಅಲ್ಲಿಯೇ ತೆರೆಯಬೇಕು. ಇಲ್ಲದಿದ್ದರೆ ಬೇವೂರಿನಿಂದ ಡಿಸಿ ಕಚೇರಿಯವರೆಗೂ ಪಾದಯಾತ್ರೆ ಮಾಡುವುದದಾಗಿ ಸ್ಥಳೀಯರಾದ ಗ್ಯಾನಪ್ಪ ಮಾದರ ಹೇಳಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸೈರಾಬಾನು ನದಾಫ್

ಇನ್ನು ಈ ಸಮುದಾಯದ ಮುಖ್ಯದ್ವಾರದ ವಿಚಾರ ಮಾತುಕತೆಯಲ್ಲಿ ಇರುವಾಗಲೇ ಕೆಲವರು ಸೇರಿ ದಕ್ಷಿಣ ದಿಕ್ಕಿನಲ್ಲಿ ಕಟ್ಟಡ ಕೆಡವಿ ಬಾಗಿಲು ಕೂರಿಸಿದ್ದಾರೆ. ಹೀಗಾಗಿ ಬಾಗಿಲು ಕೂರಿಸಲು ಕಟ್ಟಡ ಕೆಡವಿದ್ದಾರೆ ಎನ್ನಲಾದ ಈರಪ್ಪ ಗ್ಯಾನಪ್ಪ ಕಡೇಮನಿ, ನಿಂಗಪ್ಪ ಕಡೇಮನಿ, ಚಿದಾನಂದ ಹೊಸಮನಿ ಸೇರಿದಂತೆ 9 ಜನರ ಮೇಲೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸೈರಾಬಾನು ನದಾಫ್ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಮುದಾಯ ಭವನ ಕಟ್ಟಡದ ವಿಹಂಗಮ ನೋಟ

ಬಾಗಿಲು ವಿವಾದದಲ್ಲಿ ಎರಡು ಗುಂಪುಗಳಾಗಿರುವುದು ಇಷ್ಟೆಲ್ಲಾ ತಿಕ್ಕಾಟಕ್ಕೆ ಕಾರಣವಾಗಿದೆ. ಇನ್ನು ಸಮುದಾಯ ಭವನಕ್ಕೆ ಜಾಗ ಕೊಟ್ಟವರ ಮೇಲೂ ಕೇಸ್ ದಾಖಲು ಮಾಡಲಾಗಿದೆ. ಸದ್ಯ ದೂರು ದಾಖಲಾದ ಬಳಿಕ ಪ್ರತಿಭಟನೆ ಕೈಗೊಂಡ ಬೇವೂರಿನ ದಲಿತ ಸಮುದಾಯದ ಒಂದು ಗುಂಪಿನ ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಪ್ರಕರಣ ಹಿಂಪಡೆಯಬೇಕೆಂದು ಜಿಲ್ಲಾಧಿಕಾರಿಗಳ‌ ಮೂಲಕ ಆಗ್ರಹ ಪಡಿಸಿದ್ದಾರೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಡಾ. ಬಾಬು ಜಗಜೀವನ್ ರಾಮ್ ಸಮುದಾಯ ಭವನ ಮುಖ್ಯದ್ವಾರದ ದಿಕ್ಕು ಬದಲಿಸುವ ಹಾಗೂ ಕಟ್ಟಡ ಒಡೆಯುವ ಹಕ್ಕು ಯಾರಿಗೂ ಇಲ್ಲ. ದಿಕ್ಕು ಬದಲಾವಣೆ ಮಾಡುವುದಾದರೆ ನಾವೇ ಹಿರಿಯ ಅಧಿಕಾರಿಗಳ ಒಪ್ಪಿಗೆ ಪಡೆದು ಕ್ರಮ ತೆಗೆದುಕೊಳ್ಳುತ್ತಿದ್ದೆವು. ಸ್ವಲ್ಪ ಕಾಲಾವಕಾಶ ಕೇಳಿದ್ದೆವು, ವಿನಾಕಾರಣ ಕಾನೂನು ತಮ್ಮ ಕೈಗೆ ತೆಗೆದುಕೊಂಡು ಕಟ್ಟಡವನ್ನು ಕೆಡವಿದ್ದಾರೆ. ನಕ್ಷೆ ಬದಲಾಯಿಸುವುದಕ್ಕೆ ಸ್ವಲ್ಪ ಅವಕಾಶ ಬೇಕು. ಆದರೆ ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕಿತ್ತು.ಆದರೆ ತಾಳ್ಮೆ ಕೈಗೊಳ್ಳದೆ ಬಾಗಿಲು ದಿಕ್ಕು ಬದಲಾಯಿಸಿದ್ದಾರೆ. ಹೀಗಿರುವಾಗ ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದು ಬಾಗಲಕೋಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕಿ ನಿರ್ದೇಶಕಿ ಸೈರಾಬಾನು ನದಾಫ್ ಹೇಳಿದ್ದಾರೆ.

ಒಟ್ಟಿನಲ್ಲಿ ಮಹಾನ್ ನಾಯಕರ ಹೆಸರಲ್ಲಿ ನಿರ್ಮಾಣ ಆಗಬೇಕಿದ್ದ ಸಮುದಾಯ ಭವನ ಕೇವಲ ಬಾಗಿಲು ಇಡುವ ವಿಷಯಕ್ಕೆ ಅರ್ಧಕ್ಕೆ ನಿಂತಿದೆ. ಪ್ರಕರಣದ ಸತ್ಯಾಸತ್ಯತೆ ಅರಿತು ಅಧಿಕಾರಿಗಳು ಮುಂದೆ ನಿಂತು ಈ ವಿವಾದಕ್ಕೆ ತೆರೆ ಎಳೆಯಬೇಕಿದ್ದು, ಆ ಮೂಲಕ ನೂರಾರು ಜನರಿಗೆ ಅನುಕೂಲ ಆಗಲಿರುವ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರ ಮುಕ್ತಾಯಗೊಳಿಸಲು ಶ್ರಮಿಸಬೇಕಿದೆ.

ಇದನ್ನೂ ಓದಿ: ಒಕ್ಕಲಿಗ ನಿಗಮಕ್ಕೆ 1,000 ಕೋಟಿ ರೂ. ಅನುದಾನ ಮೀಸಲಿಡಬೇಕು -ಸರ್ಕಾರದ ಮುಂದೆ 4 ಬೇಡಿಕೆಗಳನ್ನಿಟ್ಟ ಸಮುದಾಯ