ಸಹಕಾರ ವಿಧೇಯಕ ಅಂಗೀಕಾರ: ನೌಕರರ ಸ್ಪರ್ಧೆಗೆ ನಿರ್ಬಂಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 20, 2021 | 8:01 PM

ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕೆಲ ಸದಸ್ಯರು, ಏಕರೂಪ ವೇತನ ಜಾರಿಗೆ ಒತ್ತಾಯಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ ಇದು ಕಾರ್ಯಸಾಧುವಲ್ಲ ಎಂದು ತಳ್ಳಿಹಾಕಿದರು.

ಸಹಕಾರ ವಿಧೇಯಕ ಅಂಗೀಕಾರ: ನೌಕರರ ಸ್ಪರ್ಧೆಗೆ ನಿರ್ಬಂಧ
ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
Follow us on

ಬೆಂಗಳೂರು: ವಿಧಾನಸಭೆಯು ಸೋಮವಾರ ಕರ್ನಾಟಕ ಸಹಕಾರಿ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ನೀಡಿತು. ಇದಕ್ಕೂ ಮೊದಲು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಡಿಸಿದ ವಿಧೇಯಕದ ಬಗ್ಗೆ ಕಾವೇರಿದ ಚರ್ಚೆ ನಡೆಯಿತು. ವಿಧೇಯಕಕ್ಕೆ ಇಂದು ಅಂಗೀಕಾರ ನೀಡಬಾರದು. ಸಾಧಕ-ಬಾಧಕ ಪರಿಶೀಲನೆಗೆ ಇನ್ನಷ್ಟು ಸಮಯಾವಕಾಶ ನೀಡಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್​ನ ನಾಯಕ ಡಿ.ಕೆ.ಶಿವಕುಮಾರ್ ಕೋರಿದರು. ಆದರೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ವಿನಂತಿಗೆ ಮಾನ್ಯತೆ ನೀಡಲಿಲ್ಲ. ವಿಧೇಯಕ ಅಂಗೀಕಾರವಾಗಿರುವುದರಿಂದ ಇನ್ನು ಮುಂದೆ ಸಹಕಾರ ಸಂಘಗಳ ಚುನಾವಣೆಗಳಲ್ಲಿ ನೌಕರರ ಸ್ಪರ್ಧೆಗೆ ಕಡಿವಾಣ ಬೀಳಲಿದೆ.

ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ, ಚುನಾಯಿತ ನಿರ್ದೇಶಕರು ಮೃತಪಟ್ಟರೆ ಮತ್ತೆ ಚುನಾವಣೆ ನಡೆಯಬೇಕೆಂಬ ನಿಯಮವನ್ನು ತಿದ್ದುಪಡಿ ಮಾಡಬೇಕು ಎಂದು ಸಲಹೆ ಮಾಡಿದರು. ಕೇಂದ್ರ ಸರ್ಕಾರ ಈ ಸಂಬಂಧ ತಿದ್ದುಪಡಿ ಮಸೂದೆ ಜಾರಿ ಮಾಡಿದೆ. ಆದರೆ ಕೇಂದ್ರ ಸರ್ಕಾರದ ಮಸೂದೆಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಸ್ಪಷ್ಟತೆ ಮೂಡಬಹುದು ಎಂದು ಸೋಮಶೇಖರ್ ತಿಳಿಸಿದರು.

ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕೆಲ ಸದಸ್ಯರು, ಏಕರೂಪ ವೇತನ ಜಾರಿಗೆ ಒತ್ತಾಯಿಸಿದರು. ಕಾನೂನು ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ ಇದು ಕಾರ್ಯಸಾಧುವಲ್ಲ ಎಂದು ತಳ್ಳಿಹಾಕಿದರು. ಸಹಕಾರ ಇಲಾಖೆಗೆ ಸಂಬಂಧಿಸಿದ ಚರ್ಚೆಗೆ ಕಾನೂನು ಸಚಿವರೇಕೆ ಉತ್ತರಿಸಬೇಕು ಎಂದು ಕೆಲವರು ಆಕ್ಷೇಪಿಸಿದರು.

ಸಹಕಾರ ಸಂಘಗಳಲ್ಲಿ ಸುಸ್ತಿದಾರರಾದವರು ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮದ ಸೇರ್ಪಡೆ ಕುರಿತು ಬಸನಗೌಡ ಯತ್ನಾಳ ಮತ್ತೊಮ್ಮೆ ಸ್ಪಷ್ಟನೆ ಕೋರಿದರು. ‘ಆ ನಿರ್ದಿಷ್ಟ ಸಹಕಾರ ಸಂಸ್ಥೆಗಳಲ್ಲಿ ಮಾತ್ರ ಸುಸ್ತಿದಾರರಾದವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಿಲ್ಲವೇ ಅಥವಾ ಯಾವುದೇ ಸಹಕಾರ ಸಂಘದಲ್ಲಿ ಸುಸ್ತಿದಾರರಾಗಿದ್ದರೂ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲವೇ’ ಎಂಬ ಅವರ ಪ್ರಶ್ನೆಗೆ ಸಚಿವ ಸೋಮಶೇಖರ್ ತೇಲಿಸಿ ಉತ್ತರ ನೀಡಿದ್ದರು. ಸಚಿವರ ವರ್ತನೆಯನ್ನು ಶಾಸಕ ರಮೇಶ್​ ಕುಮಾರ್ ಆಕ್ಷೇಪಿಸಿದ ನಂತರ ಸಚಿವರು ಮತ್ತೊಮ್ಮೆ ಸ್ಪಷ್ಟವಾಗಿ ಉತ್ತರಿಸಿ, ‘ಯಾವುದೇ ಸಹಕಾರ ಸಂಘದಲ್ಲಿ ಸುಸ್ತಿದಾರರಾಗಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ’ ಎಂದು ಹೇಳಿದರು.

ಇದನ್ನೂ ಓದಿ: ರಿಯಲ್ ಎಸ್ಟೇಟ್​ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಇದನ್ನೂ ಓದಿ: ಧಾರ್ಮಿಕ ಕೇಂದ್ರಗಳ ತೆರವಿಗೆ ಹೊಸ ನಿಯಮಾವಳಿ ರೂಪಿಸಲು ಸರ್ಕಾರ ನಿರ್ಧಾರ; ವಿಧೇಯಕ ಮಂಡನೆ

(Cooperative Bill Gets Nod of Karnataka Legislative Assembly ST Somashekhar)