ಕೊಡಗು: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದು, ಪ್ರತಿ ಜಿಲ್ಲೆಯಲ್ಲೂ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಅದರಲ್ಲೂ ಕೊವಿಡ್ ರೇಟ್ನಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆಯ ಒಂದೊಂದೇ ಗ್ರಾಮಗಳು ಇದೀಗ ಕೊರೊನಾ ಮುಕ್ತವಾಗುತ್ತಿವೆ.
ಕೊಡಗು ಜಿಲ್ಲೆಯಲ್ಲಿ ಎಪ್ರಿಲ್ ಮೊದಲ ವಾರದಲ್ಲಿ ದಿನಕ್ಕೆ ಸಾವಿರ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದರು. ಇದರಿಂದ ಜಿಲ್ಲಾಡಳಿತ ಇನ್ನಿಲ್ಲದ ಒತ್ತಡಕ್ಕೆ ಒಳಗಾಗಿತ್ತು. ಗ್ರಾಮ ಮಟ್ಟದಲ್ಲಿ ಕೊರೊನಾ ಹೆಚ್ಚಾಗಿತ್ತು. ಆದರೆ ಇದೀಗ 50 ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಜಿಲ್ಲೆಯ ಒಂದೊಂದೇ ಗ್ರಾಮಗಳು ಕೊರೊನಾ ವಿಷವರ್ತುಲದಿಂದ ಹೊರ ಬರುತ್ತಿವೆ.
ಜಿಲ್ಲೆಯ ಐದು ತಾಲ್ಲೂಕುಗಳ ಆರು ಗ್ರಾಮಗಳು ಕೊರೊನಾದಿಂದ ಸಂಪೂರ್ಣ ಮುಕ್ತವಾಗಿವೆ. ಅದರಲ್ಲೂ ಮಡಿಕೇರಿ ತಾಲ್ಲೂಕಿನ ಮಕ್ಕಂದೂರು ಗ್ರಾಮ ಪಂಚಾಯಿತಿಯ ಹೊದಕಾನ ಗ್ರಾಮ ಬಹಳ ಭಿನ್ನವಾಗಿ ನಿಲ್ಲುತ್ತದೆ. ಈ ಗ್ರಾಮದಲ್ಲಿ ಸುಮಾರು 90 ಮನೆಗಳಿದ್ದು, 350 ಕ್ಕೂ ಅಧಿಕ ಜನಸಂಖ್ಯೆಯಿದೆ. ವಿಶೇಷ ಅಂದರೆ ಈ ಗ್ರಾಮ ಕೊರೊನಾದಿಂದ ಮುಕ್ತವಾಗಿದೆ. ಈ ಗ್ರಾಮ ಕೊರೊನಾ ಮುಕ್ತವಾಗಲು ಈ ಗ್ರಾಮದ ಪಂಚಾಯಿತಿ ಅಧಿಕಾರಿಗಳು ಮತ್ತು ಜನರ ಪ್ರಯತ್ನ ಬಹಳ ಕೆಲಸಮಾಡಿದೆ ಎಂದು ಮಕ್ಕಂದೂರು ಗ್ರಾಮದ ಪಿಡಿಒ ದಿನೇಶ್ ತಿಳಿಸಿದ್ದಾರೆ.
ಗ್ರಾಮಸ್ಥರು ಕೂಡ ಸರ್ಕಾರದ ನೀತಿ ನಿಯಮಗಳನ್ನ ಚಾಚೂ ತಪ್ಪದೆ ಪಾಲಿಸಿ ಕೊರೊನಾ ತೊಲಗಿಸಲು ಪ್ರಯತ್ನಪಟ್ಟಿದ್ದಾರೆ. ಊರಿನ ಜನರು ಹೊರಹೋಗದಂತೆ ತಡೆದಿದ್ದಾರೆ. ಊರಿಗೆ ಹೊರಗಿನ ಮಂದಿ ಬಂದರೆ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡಿದ್ದಾರೆ. ಮಾತ್ರವಲ್ಲದೆ ಅಗತ್ಯ ವಸ್ತುಗಳ ಹೊರತು ಇನ್ನಿತರ ಕೆಲಸಗಳಿಗೆ ಜನರು ಅಡ್ಡಾಡದಂತೆ ತಡೆದಿದ್ದಾರೆ. ಹಾಗಾಗಿ ಕೊರೊನಾ ಊರಿಡೀ ಹರಡದೆ ಸಂಪೂರ್ಣ ನಿಯಂತ್ರಣವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಮ್ ತಿಳಿಸಿದ್ದಾರೆ.
ಎಷ್ಟೋ ಊರುಗಳಲ್ಲಿ ಜನರು ಸಾಮಾಜಿಕ ಅಂತರ ಪಾಲನೆ ಮಾಡದೆ ಕೊರೊನಾ ನಿಯಮಗಳನ್ನ ಗಾಳಿಗೆ ತೂರಿ ಇಡೀ ಊರಿಗೆ ಗಂಡಾಂತರ ತಂದಿದ್ದಾರೆ. ಅಂತಹದರಲ್ಲಿ ಹೊದಕಾನ ಗ್ರಾಮಸ್ಥರು ಕೊರೊನಾ ನಿಯಮಗಳನ್ನು ಪಾಲಿಸಿ ಇಡೀ ಗ್ರಾಮವನ್ನು ಸೋಂಕಿನಿಂದ ಕಾಪಾಡಿರುವುದು ಎಲ್ಲಾ ಗ್ರಾಮಗಳಿಗೂ ಆದರ್ಶವಾಗಿದೆ.
ಇದನ್ನೂ ಓದಿ:
ಕೊರೊನಾ ಮೂರನೇ ಅಲೆ; ಮುಂಜಾಗೃತಾ ಕ್ರಮವಾಗಿ ಮಕ್ಕಳ ಸಮೀಕ್ಷೆಗೆ ಮುಂದಾದ ಕೊಪ್ಪಳ ಜಿಲ್ಲಾಡಳಿತ