ಹೆಚ್ಚಾದ ಕೊರೊನಾ ಕಾಟ.. ಮಹಾರಾಷ್ಟ್ರ, ವಿಜಯಪುರ ಗಡಿಯಲ್ಲಿ ಫುಲ್ ಅಲರ್ಟ್, ಆದರೆ ಕೆಲ ಗಡಿಗಳಲ್ಲಿ ನಿರ್ಲಕ್ಷ್ಯ!

ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಾಹನಗಳು ಆಗಮಿಸುತ್ತಿವೆ. ರಾಜ್ಯಕ್ಕೆ ಬರುವವರಿಗೆ ತಪಾಸಣೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಬೆಳಗಾವಿ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಸೂಚಿಸಿದರೂ ಗಡಿಯಲ್ಲಿ ತಪಾಸಣೆ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿಸುತ್ತಿದೆ.

  • TV9 Web Team
  • Published On - 10:31 AM, 22 Feb 2021
ಹೆಚ್ಚಾದ ಕೊರೊನಾ ಕಾಟ.. ಮಹಾರಾಷ್ಟ್ರ, ವಿಜಯಪುರ ಗಡಿಯಲ್ಲಿ ಫುಲ್ ಅಲರ್ಟ್, ಆದರೆ ಕೆಲ ಗಡಿಗಳಲ್ಲಿ ನಿರ್ಲಕ್ಷ್ಯ!
ಮಹಾರಾಷ್ಟ್ರ, ಬೀದರ್ ಗಡಿಯಲ್ಲಿ ಸಂಪೂರ್ಣ ನಿರ್ಲಕ್ಷ್ಯ

ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ವಿಜಯಪುರ ಗಡಿಯಲ್ಲಿ ಫುಲ್ ಅಲರ್ಟ್ ಮಾಡಲಾಗಿದೆ. ಕೊವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯದೊಳಗೆ ಬರುವುದಕ್ಕೆ ಅನುಮತಿ ನೀಡಲಾಗುತ್ತಿದೆ. ವರದಿ ಇಲ್ಲದಿದ್ದರೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ ಗಡಿಯಿಂದಲೇ ವಾಪಸ್ ಕಳಿಸಲಾಗುತ್ತಿದೆ. ತುರ್ತು ಕೆಲಸವಿದ್ದವರಿಗೆ ಸ್ಥಳದಲ್ಲೇ ಆರೋಗ್ಯ ತಪಾಸಣೆ ಮಾಡಿ ಮಾಹಿತಿ ಪಡೆದು ರಾಜ್ಯದೊಳಗೆ ಬರುವುದಕ್ಕೆ ಅನುಮತಿ ನೀಡಲಾಗುತ್ತಿದೆ.

ಟಿವಿ9 ವರದಿ ಬಳಿಕ ಎಚ್ಚೆತ್ತ ಆರೋಗ್ಯ ಅಧಿಕಾರಿಗಳು
ಇನ್ನು ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಆದೇಶಿಸಿತ್ತು. ಗಡಿ ಪ್ರವೇಶಿಸುವ ವಾಹನ ಸವಾರರಿಗೆ ತಪಾಸಣೆ ಕಡ್ಡಾಯ ಮಾಡಿತ್ತು. ಆದ್ರೆ ನಿನ್ನೆ (ಫೆ.21) ಗಡಿಗಳಲ್ಲಿ ಈ ಯಾವುದೇ ಆದೇಶವನ್ನು ಪಾಲಿಸುತ್ತಿರಲಿಲ್ಲ. ಎಂದಿನಂತೆ ಕೇರಳದಿಂದ ಬಂದ ವಾಹನಗಳು ಮಂಗಳೂರು, ಮೈಸೂರನ್ನು ಪ್ರವೇಶಿಸುತ್ತಿದ್ದವು. ಸದ್ಯ ಟಿವಿ9ನಲ್ಲಿ ವರದಿ ಪ್ರಸಾರ ಬಳಿಕ DHO ರಾಮಕೃಷ್ಣ ಭೇಟಿ ಕೇರಳ, ದಕ್ಷಿಣ ಕನ್ನಡ ಜಿಲ್ಲೆ ಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಡಿಯಲ್ಲಿ ತಪಾಸಣೆ ಮಾಡಲಾಗುತ್ತಿದೆ.

ಶಿನೋಳ್ಳಿ ಚೆಕ್‌ಪೋಸ್ಟ್‌ನಲ್ಲಿ ಎಂದಿನಂತೆ ವಾಹನ ಸಂಚಾರ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಾಹನಗಳು ಆಗಮಿಸುತ್ತಿವೆ. ರಾಜ್ಯಕ್ಕೆ ಬರುವವರಿಗೆ ತಪಾಸಣೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಬೆಳಗಾವಿ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರ ಸೂಚಿಸಿದರೂ ಗಡಿಯಲ್ಲಿ ತಪಾಸಣೆ ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿಸುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ ನೈಟ್ ಕರ್ಫ್ಯೂ, ಅಮರಾವತಿ, ಯವತ್ಮಾಲ್, ಅಕೋಲಾ ಜಿಲ್ಲೆಗಳಲ್ಲಿ ಏಳು ದಿನ ಲಾಕ್ ಡೌನ್ ಘೋಷಿಸಲಾಗಿದೆ. ಇಷ್ಟೆಲ್ಲಾ ಆದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ.

ಬೀದರ್ ಜಿಲ್ಲಾಡಳಿತದಿಂದ ಸಂಪೂರ್ಣ ನಿರ್ಲಕ್ಷ್ಯ
ಇನ್ನು ಬೀದರ್ ಗಡಿಯಲ್ಲೂ ಇದೇ ಪರಿಸ್ಥಿತಿ ಕಂಡು ಬಂದಿದೆ. ಮಹಾರಾಷ್ಟ್ರ, ಬೀದರ್ ಗಡಿಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ಕಾಣಿಸುತ್ತಿದೆ. ಮಹಾರಾಷ್ಟ್ರದಿಂದ ಔರಾದ್ ಮೂಲಕ ರಾಜ್ಯಕ್ಕೆ ಜನರು ಎಂಟ್ರಿ ಕೊಡುತ್ತಿದ್ದಾರೆ. ರಾಜ್ಯಕ್ಕೆ ಬರುತ್ತಿರುವವರಿಗೆ ಯಾವುದೇ ತಪಾಸಣೆ ಮಾಡ್ತಿಲ್ಲ. ಎಂದಿನಂತೆ ರಾಜ್ಯಕ್ಕೆ ವಾಹನಗಳು ಎಂಟ್ರಿಯಾಗುತ್ತಿವೆ.

ಆಂಧ್ರದ ಗಡಿ ಭಾಗದಲ್ಲಿ ಯಾವುದೇ ತಪಾಸಣೆ ಇಲ್ಲ
ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದ್ರೆ ಕರ್ನಾಟಕ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಆಂಧ್ರದ ಗಡಿ ಭಾಗದಲ್ಲಿ ಯಾವುದೇ ತಪಾಸಣೆ ಇಲ್ಲ. ಗಡಿಭಾಗದಲ್ಲಿ ಕೊರೊನಾ ತಪಾಸಣೆಯ ಯಾವುದೇ ಚೆಕ್ ಪೋಸ್ಟ್​ಗಳಿಲ್ಲ. ಈ ಹಿಂದೆ ಲಾಕ್​ಡೌನ್ ವೇಳೆ ಗಡಿ ಭಾಗದಲ್ಲಿ ಹಾಕಿದ್ದ ಚೆಕ್ ಪೋಸ್ಟ್​ಗಳನ್ನು ತೆರವುಗೊಳಿಸಲಾಗಿತ್ತು. ನಿತ್ಯ ಆಂಧ್ರದಿಂದ ಬಳ್ಳಾರಿಗೆ ಸಾವಿರಾರು ವಾಹನಗಳು ಬರುತ್ತವೆ. ಹೀಗಾಗಿ ಗಡಿ ರಾಜ್ಯದಿಂದ ಬಳ್ಳಾರಿ ಜಿಲ್ಲೆಗೆ ಮತ್ತೆ ಕೊರೊನಾ ಗಂಡಾಂತರ ಕಾದಿದೆಯಾ ಎಂಬ ಆತಂಕ ಮೂಡಿದೆ.

ಇದನ್ನೂ ಓದಿ: ಕೇರಳದಲ್ಲಿ ಹೆಚ್ಚಾದ ಕೊರೊನಾ: ಆದೇಶವಿದ್ದರೂ ಚೆಕ್‌ಪೋಸ್ಟ್‌ಗಳಲಿಲ್ಲ ಭದ್ರತೆ, ತಪಾಸಣೆ ಇಲ್ಲದೆ ಎಂದಿನಂತೆ ಸಂಚಾರ