2ಎ ಮೀಸಲಾತಿ ಘೋಷಿಸಲು ಸರ್ಕಾರಕ್ಕೆ ಡೆಡ್ ಲೈನ್, ಫ್ರೀಡಂಪಾರ್ಕ್ನಲ್ಲಿಂದು ಮೊದಲ ದಿನದ ಸತ್ಯಾಗ್ರಹ
Panchamasali Protest: ಪಾದಯಾತ್ರೆ ಮಾಡಿ, ಬೃಹತ್ ಸಮಾವೇಶ ನಡೆಸಿದ್ರು ಸರ್ಕಾರ ಮಾತ್ರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಭರವಸೆ ಮಾತ್ರ ಸಿಕ್ಕಿಲ್ಲ ಅದ್ಕೆ ಈಗ ಪಂಚಮಸಾಲಿ ಸ್ವಾಮೀಜಿಗಳು ಸತ್ಯಾಗ್ರಹದ ಹಾದಿ ಹಿಡಿದ್ದಾರೆ. ಅಷ್ಟೇ ಅಲ್ಲ ಸರ್ಕಾರಕ್ಕೆ ಡೆಡ್‌ಲೈನ್ ಸಹ ನೀಡಿದ್ದಾರೆ.
ಬೆಂಗಳೂರು: 2ಎ ಮೀಸಲಾತಿಗಾಗಿ ಪಟ್ಟು ಹಿಡಿದಿರೋ ಪಂಚಮಸಾಲಿ ಹೋರಾಟಗಾರರ ಕಿಚ್ಚು ನಿನ್ನೆ ಜ್ವಾಲಾಮುಖಿಯಾಗಿ ಸ್ಫೋಟಗೊಂಡಿತ್ತು. ಮೀಸಲಾತಿ ಸಿಗೋವರೆಗೂ ಹೋರಾಟ ನಿಲ್ಲೋದಿಲ್ಲ ಅಂತಾ ಜಯಮೃತ್ಯುಂಜಯ ಶ್ರೀಗಳು ರಣಕಹಳೆ ಮೊಳಗಿಸಿದ್ರು. ಆದ್ರೆ ಡೆಡ್‌ಲೈನ್ ಮೀರಿದ್ರೂ, ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದಿದ್ದರಿಂದ ವಿಧಾನಸೌಧಕ್ಕೆ ಪಾದಯಾತ್ರೆ ನಡೆಸಿ, ಧರಣಿ ಕೂರೋದಾಗಿ ಘೋಷಿಸಿದ್ರು. ಖಾಕಿ ಸರ್ಪಗಾವಲಿನ ಮಧ್ಯೆಯೂ ಅರಮನೆ ಮೈದಾನದಿಂದ ಪಾದಯಾತ್ರೆ ಆರಂಭವಾಯ್ತು. ತಳ್ಳಾಡಿ, ನೂಕಾಡಿ, ಗುದ್ದಾಡಿಕೊಂಡು ಪಂಚಮಸಾಲಿ ಪಾದಯಾತ್ರೆ ಫ್ರೀಡಂಪಾರ್ಕ್ ತಲುಪಿತು. ಫ್ರೀಡಂಪಾರ್ಕ್‌ನಲ್ಲಿ ಪಾದಯಾತ್ರೆಯನ್ನ ಅಂತ್ಯಗೊಳಿಸಲಾಯ್ತು.
ಫ್ರೀಡಂ ಪಾರ್ಕ್‌ನಲ್ಲಿಂದು ಮೊದಲ ದಿನದ ಸತ್ಯಾಗ್ರಹ ಇಷ್ಟೆಲ್ಲಾ ಹೋರಾಟ ಮಾಡಿದ್ರೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಭರವಸೆ ಸಿಕ್ಕಿಲ್ಲ. ಹೀಗಾಗಿ (ಫೆ.22)ಇಂದಿನಿಂದ ಮಾರ್ಚ್ 4 ವರೆಗೂ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಫ್ರೀಡ್ಂ ಪಾರ್ಕ್‌ನಲ್ಲಿಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ವರೆಗೂ ಸತ್ಯಾಗ್ರಹ ನಡೆಯಲಿದೆ. ಸತ್ಯಾಗ್ರಹದಲ್ಲಿ ಸಾವಿರಾರು ಜನ ಪಾಲ್ಗೊಳ್ಳಲಿದ್ದು, ಜೊತೆಗೆ ಬಿಜೆಪಿ ಶಾಸಕರು, ಸಚಿವರು ಸಹ ಭಾಗಿಯಾಗಲಿದ್ದಾರೆ. ಅಷ್ಟೇ ಅಲ್ಲ ಒಂದು ವೇಳೆ ಮಾರ್ಚ್ 4ರೊಳಗೆ ಸರ್ಕಾರ ಬೇಡಿಕೆ ಈಡೇರಿಸದಿದ್ರೆ, ಉಪವಾಸ ಮಾಡೋದಾಗಿ ಬಸವ ಜಯಮೃತ್ಯುಂಜಯ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.
ಮಾರ್ಚ್ 4ರ ನಂತರ ರಾಜೀನಾಮೆ ಪರ್ವ ಮಾರ್ಚ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಪಂಚಮಸಾಲಿ ಶಾಸಕರು ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒತ್ತಡ ಹೇರಲಿದ್ದಾರಂತೆ. ಇದಕ್ಕೂ ಸರ್ಕಾರ ಸ್ಪಂದಿಸದೇ ಹೋದರೆ ಮಾರ್ಚ್4 ರ ನಂತರ ಉಪವಾಸ ಸತ್ಯಾಗ್ರಹ ಮತ್ತು ರಾಜಿನಾಮೆ ಪರ್ವ ನಡೆಯಲಿದೆಯಂತೆ. ಒಟ್ನಲ್ಲಿ ಪಂಚಮಸಾಲಿ ಪ್ರತಿಭಟನೆ ಇಂದು ಮತ್ತೊಂದು ಸ್ವರೂಪ ಪಡೆದುಕೊಳ್ಳಲಿದ್ದು, ಮಾರ್ಚ್ 4ಕ್ಕೆ ಹೋರಾಟಗಾರರು ಡೆಡ್‌ಲೈನ್ ನೀಡಿದ್ದಾರೆ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತೆ. ಪಂಚಮಸಾಲಿ ಸಮುದಾಯದ ಬೇಡಿಕೆಗೆ ಏನ್ ಉತ್ತರ ಕೊಡುತ್ತೆ ಅನ್ನೋದು ಕುತೂಹಲ ಕೊಡುತ್ತೆ ಅನ್ನೋದು ಕುತೂಹಲ ಕೆರಳಿಸಿದೆ.
‘ನಮ್ಮಲ್ಲೇ 2 ಗುಂಪು ಮಾಡಿ ಹೋರಾಟ ಒಡೆಯಲು ಯತ್ನ’ ಸ್ವಾಮೀಜಿಗಳ ನೇತೃತ್ವದಲ್ಲಿ ಐತಿಹಾಸಿಕ ಹೋರಾಟ ನಡೆದಿದೆ ಎಂದು ಫ್ರೀಡಂಪಾರ್ಕ್‌ನಲ್ಲಿ ಶಾಸಕ ಬಸನಗೌಡ ಯತ್ನಾಳ್ ಹೇಳಿದರು. ನಮ್ಮಲ್ಲೇ 2 ಗುಂಪು ಮಾಡಿ ಹೋರಾಟ ಒಡೆಯಲು ಯತ್ನ ನಡೆಯುತ್ತಿದೆ. ಆದ್ರೆ ನಮ್ಮ ಸಮುದಾಯ ಒಗ್ಗಟ್ಟು ಕಾಪಾಡಿಕೊಂಡಿದೆ. ಸದನದಲ್ಲಿ ಮೀಸಲಾತಿ ಬಗ್ಗೆ ಸ್ಪಷ್ಟನೆ ನೀಡುವಂತೆ ಆಗ್ರಹಿಸ್ತೇವೆ. ಸಿಎಂ ಯಡಿಯೂರಪ್ಪಗೆ ಒತ್ತಾಯ ಮಾಡುತ್ತೇವೆ ಎಂದು ಯತ್ನಾಳ್ ಹೇಳಿದರು.
‘ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ’ ಮೀಸಲಾತಿ ನೀಡಲು ಸಿಎಂ ಯಡಿಯೂರಪ್ಪಗೇ ಮನಸ್ಸಿಲ್ಲ. ಹೋರಾಟಕ್ಕೆ ಹೋಗಬೇಡಿ ಎಂದು ಖುದ್ದು ಸಿಎಂ ಹೇಳಿದ್ದಾರೆ. ಇಬ್ಬರು ಸಚಿವರಿಗೆ ಖುದ್ದು ಸಿಎಂ ಬಿಎಸ್‌ವೈ ಹೇಳಿದ್ದಾರೆ. ಸಿಎಂ ಮತ್ತೆ ಕೇಂದ್ರದತ್ತ ಬೊಟ್ಟು ಮಾಡಿದ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಇಬ್ಬರಿಗೆ ಹೇಳಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸಿಎಂ ಯಡಿಯೂರಪ್ಪರಿಂದ ಹೋರಾಟ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ. ಹಾಗಾಗಿ, ಪಕ್ಷಾತೀತವಾಗಿ ನಮ್ಮ ಹೋರಾಟ ಬೆಂಬಲಿಸುವಂತೆ ಮನವಿ ಮಾಡುತ್ತೇನೆ. ಪಂಚಮಸಾಲಿಗರಿಗೆ ಶಾಸಕ ಬಸನಗೌಡ ಯತ್ನಾಳ್ ಮನವಿ ಮಾಡಿದರು. ನಾಳೆಯಿಂದ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ. ಸಮುದಾಯದ ಸಹಕಾರದಿಂದ ಹೋರಾಟ ಯಶಸ್ವಿಯಾಗಿದೆ ಎಂದು ಹೇಳಿದರು.
ನಾಳೆಯಿಂದ ಮೌರ್ಯ ಸರ್ಕಲ್‌ನಲ್ಲಿ ಧರಣಿ ಮುಂದುವರಿಯುತ್ತದೆ. ಮೀಸಲಾತಿ ಸಿಗುವವರೆಗೂ ಹೋರಾಟ ಮುದುವರಿಯುತ್ತೆ ಎಂದು ಯತ್ನಾಳ್ ಹೇಳಿದರು. ಈ ನಡುವೆ, ಬಿ.ವೈ.ವಿಜಯೇಂದ್ರ ಸೂಪರ್ ಸಿಎಂ ಎಂದು ಮತ್ತೆ ಶಾಸಕ ಬಸನಗೌಡ ಯತ್ನಾಳ್ ಹರಿಹಾಯ್ದರು.
ಇದನ್ನೂ ಓದಿ: ಹಾರ್ಡ್‌ವೇರ್, ಸಾಫ್ಟ್‌ವೇರ್ ಪರಿಚಯವಿದೆ, ಮೀಸಲಾತಿ ನೀಡದಿದ್ದರೆ ಏನು ಮಾಡಬೇಕು ಎಂದೂ ಗೊತ್ತಿದೆ: ವಚನಾನಂದಶ್ರೀ
Published On - 7:56 am, Mon, 22 February 21