ಮೋದಿ, ಯಡಿಯೂರಪ್ಪ ಕೈಗೊಂಡ ದಿಟ್ಟ ನಿರ್ಣಯಗಳಿಂದ ಕೊರೊನಾ ಹತೋಟಿಯಲ್ಲಿದೆ: ಸಚಿವ ಸುಧಾಕರ್
ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಕೋವಿಡ್ ವಿಚಾರದಲ್ಲಿ ಬಹಳ ಉತ್ತಮ ಸ್ಥಿತಿಯಲ್ಲಿದ್ದೇವೆ. ಬ್ರಿಟನ್ನಲ್ಲಿ ಪ್ರತಿದಿನ ಸುಮಾರು 1 ಸಾವಿರ ಜನ ಕೊರೊನಾ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ, ನಮ್ಮಲ್ಲಿ ಗುಣಮುಖರಾಗುವವರ ಸಂಖ್ಯೆ ಜಾಸ್ತಿ ಆಗುತ್ತಿದೆ.
ಬೆಂಗಳೂರು: ನಮ್ಮ ದೇಶದಲ್ಲಿ ಕೊರೊನಾ ಸೋಂಕು ಹತೋಟಿಗೆ ಬರಲು ಇಲ್ಲಿನ ಸಮರ್ಥ ನಾಯಕತ್ವವೇ ಕಾರಣ. ರಾಷ್ಟ್ರಮಟ್ಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೆಗೆದುಕೊಂಡ ದಿಟ್ಟ ನಿಲುವುಗಳಿಂದಾಗಿ ಕೊರೊನಾ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ನಡೆದ ನೇತ್ರದಾನ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಕೋವಿಡ್ ವಿಚಾರದಲ್ಲಿ ಬಹಳ ಉತ್ತಮ ಸ್ಥಿತಿಯಲ್ಲಿದ್ದೇವೆ. ಬ್ರಿಟನ್ನಲ್ಲಿ ಪ್ರತಿದಿನ ಸುಮಾರು 1 ಸಾವಿರ ಜನ ಕೊರೊನಾ ಸೋಂಕಿನಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ, ನಮ್ಮಲ್ಲಿ ಗುಣಮುಖರಾಗುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ನಮ್ಮ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಯಾವ ಕ್ಷಣದಲ್ಲಿ ಬೇಕಾದ್ರೂ ಲಸಿಕೆ ಬರಬಹುದು. ಲಸಿಕೆ ಯಾವಾಗ ಸಿಗಲಿದೆ, ಎಷ್ಟು ಸಿಗಲಿದೆ ಎಂಬ ಕುರಿತು ಸೋಮವಾರ ಸಂಜೆ 4 ಗಂಟೆಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ನಮಗೆ 14 ಲಕ್ಷ ಡೋಸ್ ಲಸಿಕೆ ಮೊದಲ ಹಂತದಲ್ಲಿಯೇ ಬೇಕಾಗಿದೆ ಎಂದು ತಿಳಿಸಿದ್ದಾರೆ.
ನಾರಾಯಣ ನೇತ್ರಾಲಯದ ನೇತ್ರದಾನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಚಿವರು, ಇದು ಅತ್ಯಂತ ಒಳ್ಳೆಯ ಕೆಲಸ. ಇದಕ್ಕೆ ನಾವೂ ಕೂಡ ಹೆಚ್ಚು ಸಹಕಾರ ನೀಡಲಿದ್ದೇವೆ. ಅಂಧರಿಗೆ ಕಣ್ಣು ದಾನ ಮಾಡುವಂತಹ ಕೆಲಸ ಹೆಚ್ಚೆಚ್ಚು ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ವೈರಾಣುವಿನ ಮೂಲ ಜಾಲಾಡಲು ಕೊನೆಗೂ ಚೀನಾಕ್ಕೆ ತೆರಳಲಿದೆ ವಿಶ್ವ ಆರೋಗ್ಯ ಸಂಸ್ಥೆ!